ADVERTISEMENT

ವಾಲ್ಮೀಕಿ ನಿಗಮ, ಮುಡಾ ಹಗರಣ: ನನ್ನ ಕೇಳಿ BJP ಸರ್ಕಾರ ನಡೆಸುತ್ತಿತ್ತಾ..?– CM

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜುಲೈ 2024, 16:40 IST
Last Updated 11 ಜುಲೈ 2024, 16:40 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು: ‘ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಖಜಾನೆ ಇಲಾಖೆಯಿಂದ ಬೇರೆ ಖಾತೆಗಳಿಗೆ ₹180 ಕೋಟಿ ವರ್ಗಾವಣೆ ಆಗಿಲ್ಲ. ಖಜಾನೆಯಿಂದ ಇಲಾಖೆಗೆ ಹಣ ಹೋಗಿರುತ್ತದೆ. ಅಲ್ಲಿ ಅವ್ಯವಹಾರವಾಗಿರುವ ಬಗ್ಗೆ ಎಸ್‌ಐಟಿ, ಸಿಬಿಐ, ಇಡಿ ತನಿಖೆ ನಡೆಸುತ್ತಿದೆ. ತನಿಖೆಯ ವರದಿ ಈವರೆಗೂ ಬಂದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್’ನ ತಮ್ಮ ಖಾತೆಯಲ್ಲಿ ವಿಷಯ ಹಂಚಿಕೊಂಡಿರುವ ಅವರು, ‘ಬ್ಯಾಂಕುಗಳಲ್ಲಿ ಆಗುವ ಅವ್ಯವಹಾರಗಳಿಗೆಲ್ಲಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿ ರಾಜೀನಾಮೆ ನೀಡಬೇಕಲ್ಲ. ಜಿ.ಟಿ ದೇವೇಗೌಡರು ಅವರ ರಾಜೀನಾಮೆ ಕೇಳಿದ್ದಾರ?’ ಎಂದಿದ್ದಾರೆ.

ADVERTISEMENT

‘ತನಿಖೆ ನಡೆಯುತ್ತಿದ್ದು, ಪ್ರಾಥಮಿಕ ವರದಿಯಾಗಲಿ, ಅಂತಿಮ ವರದಿಯಾಗಲಿ ಯಾವುದೂ ಬಂದಿಲ್ಲ. ಖಜಾನೆಯಿಂದ ಹಣ ವರ್ಗಾವಣೆ ಆಗುವಾಗ ಪ್ರತಿ ಸಾರಿಯೂ ನನ್ನ ಬಳಿ ಬರುವುದಿಲ್ಲ. ಎಷ್ಟು ಹಣವಿದೆಯೋ ಅಷ್ಟನ್ನು ಅಧಿಕಾರಿಗಳು ಬಿಡುಗಡೆ ಮಾಡುತ್ತಾರೆ. ಅದಕ್ಕೆ ನನ್ನ ಸಹಿ ಅಗತ್ಯವಿಲ್ಲ’ ಎಂದಿದ್ದಾರೆ.

‘ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದು ಬಹಳಾ ಜನರಿಗೆ ಹೊಟ್ಟೆಯುರಿ ಉಂಟುಮಾಡಿದೆ. ಅದಕ್ಕಾಗಿ ಕುತಂತ್ರ ಮಾಡುತ್ತಿದ್ದಾರೆ. ನನ್ನ 4 ದಶಕಗಳ ರಾಜಕೀಯ ಜೀವನದಲ್ಲಿ ಇಂಥಾ ಬಹಳಷ್ಟು ಪಿತೂರಿ, ಷಡ್ಯಂತ್ರ ನೋಡಿ, ಎದುರಿಸಿ ಬಂದಿದ್ದೀನಿ. ಇದಕ್ಕೆಲ್ಲಾ ನಾನು ಹೆದರುವುದಿಲ್ಲ’ ಎಂದು ಗುಡುಗಿದ್ದಾರೆ.

‘ಮೂಡಾ ಮೊದಲಿನಿಂದಲೂ ಗಬ್ಬೆದ್ದು ಹೋಗಿದ್ದು, ಅದನ್ನು ಸ್ವಚ್ಛ ಮಾಡಬೇಕಿದೆ. ನಮಗೆ ನಿವೇಶನ ಕೊಟ್ಟಿದ್ದು ಹಗರಣವಲ್ಲ. ನಮ್ಮ ಜಮೀನನ್ನು ಮುಡಾದವರು ಅಕ್ರಮವಾಗಿ ಕಬಳಿಕೆ ಮಾಡಿದ್ದಾರೆ. ಬೇರೆಯವರ ಹಾಗೆ ನಾವೇ ಮುಡಾಗೆ ಜಮೀನು ಬಿಟ್ಟುಕೊಟ್ಟು ಪರಿಹಾರ ಕೇಳುತ್ತಿರೋದಲ್ಲ. ಈ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು. 2020ರಲ್ಲಿ ಮೂಡಾ ಅಲ್ಲದೇ ಬೇರೆ ಅಭಿವೃದ್ಧಿ ಪ್ರಾಧಿಕಾರಗಳಲ್ಲಿಯೂ 50:50ರ ಅನುಪಾತ ಜಾರಿಗೆ ಬಂದಿದೆ. ಇದರಿಂದ ಅಭಿವೃದ್ಧಿ ಪ್ರಾಧಿಕಾರಗಳಿಗೆ ಲಾಭವಾಗುತ್ತದೆಯೇ ಹೊರತು ನಷ್ಟವಾಗುವುದಿಲ್ಲ. ಭೂಮಾಲೀಕರಿಗೆ ನಷ್ಟವುಂಟಾಗಬಾರದು ಎಂದು ತನಿಖೆ ನಡೆಸಲಾಗುತ್ತಿದೆ. ಮೂಡಾ ಆಯುಕ್ತರು, ಮತ್ತಿತರರು ಇದನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಈ ದುರುಪಯೋಗ ತಡೆಯಲು ತನಿಖೆ ನಡೆಸಿ ಸರಿಮಾಡುತ್ತೇವೆ’ ಎಂದಿದ್ದಾರೆ.

‘2005ರಲ್ಲಿ ಜಿಲ್ಲಾಧಿಕಾರಿ ಭೂ ಪರಿವರ್ತನೆ ಮಾಡಿದ್ದು, ನಿವೇಶನ ಮಾಡುವ ಮುನ್ನ ಜಮೀನು ಕೃಷಿ ಭೂಮಿಯೇ ಆಗಿತ್ತು. ಮಲ್ಲಿಕಾರ್ಜುನ ಸ್ವಾಮಿ ನನ್ನ ಮೈದುನ. 2010ರಲ್ಲಿ ದಾನಪತ್ರ ಕೊಟ್ಟಿದ್ದಾರೆ. ಇದರಲ್ಲಿ ಅಕ್ರಮವೇನಾಗಿದೆ? ಕೃಷಿ ಭೂಮಿ ಎಂದು ಕೊಟ್ಟಿದ್ದರೂ ತಪ್ಪೇನು? 2014ರಲ್ಲಿ ಮೂಡಾ ಜಮೀನು ಅಲ್ಲದೆ ಹೋದರೂ ನಮ್ಮ ಜಮೀನಲ್ಲಿ ನಿವೇಶನ ಮಾಡಿ ಹಂಚಿದ್ದಾರೆ. ಅದಕ್ಕೆ ನಾವು ಸುಮ್ಮನೆ ಬಿಡಬೇಕಾ? ಬದಲಿ ನಿವೇಶನ ಕೇಳಿದ್ದೇವೆಯೇ ಹೊರತು ಇಂಥಾ ಜಾಗದಲ್ಲಿಯೇ ನಿವೇಶನ ಕೊಡಿ ಎಂದು ನಾವು ಕೇಳಿಲ್ಲ. ಆಗ ಮೂಡಾ ಸದಸ್ಯರೆಲ್ಲಾ ಏನು ಮಾಡುತ್ತಿದ್ದರು? @BJP4Karnataka ಸರ್ಕಾರವೇ ಇತ್ತು ಆಗ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

‘ಕಾನೂನು ಪ್ರಕಾರ ನಮಗೆ ಬೇರೆ ಜಮೀನು ಕೊಡಬೇಕು. ಇದೇ ರೀತಿಯಲ್ಲಿ ಸುಂದರಮ್ಮ ಪ್ರಕರಣದಲ್ಲಿ ಅವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಉಚ್ಚ ನ್ಯಾಯಾಲಯ ಅಷ್ಟು ಜಾಗವನ್ನೂ ಕೊಡಲು ಆದೇಶಿಸಿ ಒಂದು ಲಕ್ಷ ರೂಪಾಯಿ ದಂಡವನ್ನೂ ಮೂಡಾಗೆ ಹಾಕಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೂಡಾ ತಪ್ಪು ಮಾಡಿದ್ದರೆ ಯಾರು ಜವಾಬ್ದಾರರು? ನಾನು ಜವಾಬ್ದಾರನೇ? ಒಂದು ವೇಳೆ ಇದನ್ನು ರದ್ದು ಮಾಡಿದರೆ ಭೂಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರ ನೀಡಬೇಕಲ್ಲವೇ. ಅದರ ಪ್ರಕಾರ ₹57 ಕೋಟಿಯಾದರೆ ಬಡ್ಡಿ ಸೇರಿಸಿ ₹62 ಕೋಟಿಯಾಗುತ್ತದೆ. ಮೂಡಾದವರು ₹2 ಕೋಟಿ ಕೊಡಬೇಕಾಗುತ್ತದೆ. 2021ರಲ್ಲಿ ನಾನು ವಿರೋಧ ಪಕ್ಷದ ನಾಯಕ ಇದ್ದೆ. ಆಗ ನಾನು ಹೇಳಿದ್ದನ್ನು ಕೇಳಿ ಸರ್ಕಾರ ಕೆಲಸ ಮಾಡುತ್ತಿತ್ತಾ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.