ADVERTISEMENT

ಬೆಲೆ ಏರಿಕೆ ವಿರುದ್ಧ ಗುಡುಗಿದ ಸಿದ್ದರಾಮಯ್ಯ

ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕ ತಗ್ಗಿಸಲು ವಿಧಾನಸಭೆ ನಿರ್ಣಯಕ್ಕೆ ಕಾಂಗ್ರೆಸ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 19:53 IST
Last Updated 15 ಸೆಪ್ಟೆಂಬರ್ 2021, 19:53 IST
   

ಬೆಂಗಳೂರು: ಜನಸಾಮಾನ್ಯರು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿರುವ ಬೆಲೆ ಏರಿಕೆಗೆ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ಕಾರಣ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದೂರಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಷಯಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ನಿಯಮ 69ರಡಿ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ತಗ್ಗಿಸಲು ಕೇಂದ್ರದ ಮೇಲೆ ಒತ್ತಡ ಹೇರಲು ವಿಧಾನಸಭೆ ಒಮ್ಮತದ ನಿರ್ಣಯ ತೆಗೆದುಕೊಳ್ಳಬೇಕು, ಅದಕ್ಕಾಗಿ ನಿರ್ಣಯ ಮಂಡಿಸಲು ನಾನು ಸಿದ್ಧನಿದ್ದೇನೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಆದರೆ, ಬಿಜೆಪಿ ಸದಸ್ಯರು ಇದನ್ನು ವಿರೋಧಿಸಿದರು.

ರಾಜ್ಯ ಸರ್ಕಾರ ಮಾರಾಟ ತೆರಿಗೆ ಮತ್ತು ಸೆಸ್‌ ಅನ್ನು ಶೇ 50 ರಷ್ಟು ಕಡಿಮೆ ಮಾಡಬೇಕು ಎಂದೂ ಆಗ್ರಹಿಸಿದರು.

ADVERTISEMENT

‘ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಕಷ್ಟದಲ್ಲಿದ್ದಾರೆ. ಬೇಳೆ– ಕಾಳುಗಳು, ಖಾದ್ಯ ತೈಲ ಸೇರಿ ಎಲ್ಲ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ತಮಿಳುನಾಡಿನ ಮುಖ್ಯಮಂತ್ರಿ ಆ ರಾಜ್ಯದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ₹ 3 ರಷ್ಟು ಕಡಿಮೆ ಮಾಡಿದ್ದಾರೆ. ಅದೇ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಕಡಿಮೆ ಮಾಡಬೇಕು’ ಎಂದರು.

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಹೆಚ್ಚಾಗಲು ಕೇಂದ್ರ ಸರ್ಕಾರ ಹೆಚ್ಚುವರಿ ಅಬಕಾರಿ ಸುಂಕ ವಿಧಿಸಿದ್ದೇ ಕಾರಣ. ಮನಮೋಹನಸಿಂಗ್‌ ಅವರು ಪ್ರಧಾನಿ ಆಗಿದ್ದಾಗ ಪೆಟ್ರೋಲ್‌ ಮೇಲೆ ವಿಧಿಸುತ್ತಿದ್ದ ತೆರಿಗೆ(ಹೆಚ್ಚುವರಿ ಅಬಕಾರಿ ಸುಂಕ) ₹9.21, ಡೀಸೆಲ್‌ ಮೇಲೆ ₹3.45 ಇತ್ತು. ಈಗ ಅದು ಕ್ರಮವಾಗಿ ₹32.98 ಮತ್ತು ₹31.84 ಆಗಿದೆ ಎಂದು ಹೇಳಿದರು.

ಕಚ್ಚಾತೈಲ ಬೆಲೆ ಆಧರಿಸಿ ಪೆಟ್ರೋಲ್‌ನ ಇಂದಿನ ಮೂಲೆ ಬೆಲೆ ₹38, ರಾಜ್ಯ ಮತ್ತು ಕೇಂದ್ರ ಸರ್ಕಾರದ ತೆರಿಗೆ ಒಟ್ಟು ₹67. ಹೀಗಾಗಿ ಪೆಟ್ರೋಲ್‌ ಬೆಲೆ ಲೀಟರ್‌ಗೆ ₹105 ದಾಟಿದೆ. ಇದಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆ, ತಾಲಿಬಾನ್‌ ಕಾರಣ ಎಂದರೆ ಹೇಗೆ ಎಂದು ಅವರು ಪ್ರಶ್ನಿಸಿದರು.

ಉಜ್ವಲ ಯೋಜನೆಯಡಿ ನೀಡುತ್ತಿದ್ದ ಸಹಾಯಧನವನ್ನು ನಿಲ್ಲಿಸಲಾಗಿದೆ. ಅಡುಗೆ ಅನಿಲ ಬೆಲೆ ಹಿಂದೆ ₹414 ಇತ್ತು, ಅದು ಈಗ ₹980 ಕ್ಕೆ ಏರಿಕೆಯಾಗಿದೆ. ಇದರಿಂದ ಸಾಮಾನ್ಯ ಜನ ಅಡುಗೆ ಅನಿಲ ಖರೀದಿಸಲು ಸಾಧ್ಯವಾಗುತ್ತಿಲ್ಲ ಎಂದರು.

ಕ್ರಿಮಿನಲ್‌ ಲೂಟಿ: ‘ಇಂದಿರಾ ಗಾಂಧಿ ಅವರು 1973ರಲ್ಲಿ ಪೆಟ್ರೋಲ್‌ ಬೆಲೆಯನ್ನು ಏಳು ಪೈಸೆ ಹೆಚ್ಚಿಸಿದ್ದರು. ಇದನ್ನು ಖಂಡಿಸಿ ಅಟಲ್‌ ಬಿಹಾರಿ ವಾಜಪೇಯಿ ಅವರು ಎತ್ತಿನ ಬಂಡಿಯಲ್ಲಿ ಸದನಕ್ಕೆ ಬಂದಿದ್ದರು. ಇದೊಂದು ಕ್ರಿಮಿನಲ್ ಲೂಟಿ ಎಂದೂ ಜರೆದಿದ್ದರು. ಈಗಿನ ಬೆಲೆ ಏರಿಕೆ ವಿರುದ್ಧ ಅದೇ ಮಾತನ್ನು ಪುನರುಚ್ಚರಿಸುತ್ತೇನೆ’ ಎಂದು ಸಿದ್ದರಾಮಯ್ಯ ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ,‘ನೀವು ಮಾತನಾಡುತ್ತಿರುವುದು ಕೇಂದ್ರ ಸರ್ಕಾರದ ವಿಷಯ. ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ವಿಷಯಗಳನ್ನಷ್ಟೇ ಇಲ್ಲಿ ಪ್ರಸ್ತಾಪಿಸಿ. ಕೇಂದ್ರದ ವಿಚಾರಗಳನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿ’ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸಲಹೆ ನೀಡಿದರು.

ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ‘ಬೆಲೆ ಏರಿಕೆಯಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಜನರು ನಿತ್ಯ ಅಳಲು ತೋಡಿಕೊಳ್ಳುತ್ತಿದ್ದಾರೆ. ಅವರ ನೋವನ್ನು ಇಲ್ಲಿ ಪ್ರಸ್ತಾಪಿಸಿದ್ದೇನೆ’ ಎಂದರು.

‘ಪ್ರಜಾವಾಣಿ’ ವರದಿ ಉಲ್ಲೇಖ

ಬೆಲೆ ಏರಿಕೆಯಿಂದ ಜನಸಾಮಾನ್ಯರು ಎದುರಿಸುತ್ತಿರುವ ಬವಣೆಗಳ ಬಗ್ಗೆ ಸೆಪ್ಟೆಂಬರ್‌ 1ರಂದು ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವರದಿಯನ್ನು ಸಿದ್ದರಾಮಯ್ಯ ಅವರು ಉಲ್ಲೇಖಿಸಿದರು.

‘ಪ್ರಜಾವಾಣಿಯವರು ಸರ್ವೆ ಮಾಡಿ ಈ ವರದಿ ಪ್ರಕಟಿಸಿದ್ದಾರೆ. ಗಾರೆ ಕೆಲಸದವನೊಬ್ಬ ವರ್ಷಕ್ಕೆ ತೆರಿಗೆ ರೂಪದಲ್ಲಿ ₹1 ಲಕ್ಷದಷ್ಟು ಪಾವತಿಸಬೇಕಾದ ಸ್ಥಿತಿ ಇದೆ ಎಂಬುದು ಸರ್ವೆಯಿಂದ ಗೊತ್ತಾಗಿದೆ’ ಎಂದು ಅವರು ಹೇಳಿದರು.

ಬೆಲೆ ಏರಿಕೆ ನಿರಂತರ ಪ್ರಕ್ರಿಯೆ: ಸುಧಾಕರ್‌

‘ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ನಿರಂತರ ಪ್ರಕ್ರಿಯೆ’ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸಮಜಾಯಿಷಿ ನೀಡಿದರು.

‘ಮನಮೋಹನ್‌ ಸಿಂಗ್‌ ‍ಪ್ರಧಾನಿಯಾಗಿದ್ದ ಕಾಲದಲ್ಲೂ ಬೆಲೆ ಏರಿಕೆ ಆಗಿತ್ತು. ಈಗಲೂ ಬೆಲೆ ಏರಿಕೆ ಆಗಿದೆ. ಮನಮೋಹನ್ ಸಿಂಗ್‌ ಕಾಲದಲ್ಲಿ ತೈಲ ಬಾಂಡ್‌ಗಳನ್ನು ಖರೀದಿಸಿದ ಪರಿಣಾಮವನ್ನು ಈಗ ಎದುರಿಸಬೇಕಾಗಿದೆ’ ಎಂದರು. ಅವರ ಮಾತಿಗೆ ಕಾಂಗ್ರೆಸ್‌ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌ ಸಾಲ ಎಂದು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತೀರಿ’ ಎಂದು ಕುಣಿಗಲ್‌ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎಚ್‌.ಡಿ.ರಂಗನಾಥ್‌ ಕಿಡಿಕಾರಿದರು.

‘70 ವರ್ಷಗಳ ಕಾಂಗ್ರೆಸ್‌ ದುರಾಡಳಿತದಿಂದ ಈ ಪರಿಸ್ಥಿತಿ ಬಂದಿದೆ’ ಎಂದು ಬಿಜೆಪಿ ಸದಸ್ಯರು ಚುಚ್ಚಿದರು. ‘ಕಾಂಗ್ರೆಸ್‌ 70 ವರ್ಷಗಳಲ್ಲಿ ಎಲ್ಲವನ್ನೂ ಕಟ್ಟುವ ಕೆಲಸ ಮಾಡಿತ್ತು. ಬಿಜೆಪಿ ಸರ್ಕಾರ ಐದು ವರ್ಷಗಳಲ್ಲೇ ಎಲ್ಲವನ್ನೂ ಮಾರುವ ಕೆಲಸ ಮಾಡುತ್ತಿದೆ’ ಎಂದು ಕಾಂಗ್ರೆಸ್‌ ಸದಸ್ಯರು ತಿರುಗೇಟು ನೀಡಿದರು. ‘ಚೌಕಿದಾರ್ ಚೋರ್‌ ಹೈ’ ಎಂದೂ ಘೋಷಣೆ ಕೂಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.