ADVERTISEMENT

ಸಚಿವ ಅಶ್ವತ್ಥ ಅಲ್ಲ, ಅಸ್ವಸ್ಥ ನಾರಾಯಣ : ಸಿದ್ದರಾಮಯ್ಯ ಕಿಡಿ

ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ l ‘ಕೈ’– ‘ಕಮಲ’ ನಾಯಕರ ನಡುವೆ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2023, 19:30 IST
Last Updated 18 ಫೆಬ್ರುವರಿ 2023, 19:30 IST
ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ಶನಿವಾರ ನಡೆದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಶಾಸಕ ಬೈರತಿ ಸುರೇಶ್ ಮಾತಿಗೆ ಬಿಜೆಪಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು
ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ಶನಿವಾರ ನಡೆದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಶಾಸಕ ಬೈರತಿ ಸುರೇಶ್ ಮಾತಿಗೆ ಬಿಜೆಪಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು   

ಯಲಬುರ್ಗಾ (ಕೊಪ್ಪಳ ಜಿಲ್ಲೆ): ‘ಟಿಪ್ಪು ಸುಲ್ತಾನ್ ರೀತಿಯಲ್ಲಿ ಹೊಡೆದು ಸಾಯಿಸಬೇಕು ಎಂದು ನನ್ನ ಬಗ್ಗೆ ಹೇಳಿರುವ ಸಚಿವ ಅಶ್ವತ್ಥನಾರಾಯಣ ಈಗ ಅಸ್ವಸ್ಥ ನಾರಾಯಣ ಆಗಿದ್ದು, ಅವರಿಗೆ ಮಾನಸಿಕ ಕಾಯಿಲೆ ಇರಬೇಕು. ಅವರು ರಾಜಕಾರಣದಲ್ಲಿ ಇರಲು ಲಾಯಕ್ಕಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.

ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಮಾತನಾಡಿದ ಅವರು, ‘ರೈತರು, ದಲಿತರು, ಅಲ್ಪಸಂಖ್ಯಾತರು, ಬಡವರ ಬಗ್ಗೆ ಚರ್ಚಿಸುವ ಬದಲು ಇನ್ನೊಬ್ಬರನ್ನು ಹೊಡೆದು ಹಾಕುವ ಬಗ್ಗೆ ‌ಬಿಜೆಪಿ ಮಾತನಾಡುತ್ತಿದೆ. ನಳಿನ್ ಕುಮಾರ್ ಕಟೀಲ್ ಅಭಿವೃದ್ಧಿ ಕೆಲಸ ಕೇಳಬೇಡಿ. ಲವ್ ಜಿಹಾದ್ ಬಗ್ಗೆ ಮಾತನಾಡಿ ಎನ್ನುತ್ತಾರೆ. ಇಂಥವರ ಸರ್ಕಾರ ಅಧಿಕಾರದಲ್ಲಿ ಇರಬೇಕಾ’ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಎದುರೇ ಜಟಾಪಟಿ: ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣ ಮತ್ತು ಶಿಲಾ ಮಂಟಪ ಉದ್ಘಾಟನೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ ಎದುರೇ ಕಾಂಗ್ರೆಸ್, ಬಿಜೆಪಿ ನಾಯಕರ ನಡುವೆ ಜಟಾಪಟಿ
ನಡೆಯಿತು.

ADVERTISEMENT

ಶಾಸಕ ಬೈರತಿ ಸುರೇಶ್ ಮಾತನಾಡಿ, ‘ಯಲಬುರ್ಗಾ ಕ್ಷೇತ್ರದಲ್ಲಿ ರಾಯರಡ್ಡಿ ಅಧಿಕಾರಕ್ಕೆ ಬರಲು ನೀವೆಲ್ಲ ಆಶೀರ್ವಾದ ನೀಡಿ. ಕ್ಷೇತ್ರದ ಈಗಿನ ಶಾಸಕರು ಏನಾದರೂ ಅಭಿವೃದ್ಧಿ ‌ಮಾಡಿದ್ದಾರೆಯೇ?’ ಎಂದು ಹಾಲಪ್ಪ ಆಚಾರ್‌ ಅವರನ್ನು ಟೀಕಿಸಿದರು.

ಇದಕ್ಕೆ ಆಕ್ಷೇಪಿಸಿದ ಬಿಜೆಪಿ ಮುಖಂಡರಾದ ಕಳಕಪ್ಪ ಕಂಬಳಿ, ಬಸಲಿಂಗಪ್ಪ ಭೂತೆ, ಅಮರೇಶ ಹುಬ್ಬಳ್ಳಿ, ಶರಣಕುಮಾರ ಅಮರಗಟ್ಟಿ, ‘ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜಕೀಯದ ಮಾತು ಬೇಡ’ ಎಂದರು.

ಬೈರತಿ ಸುರೇಶ್ ಅವರನ್ನು ತಳ್ಳಾಡಿದ ಹಾಲುಮತ ಸಮಾಜದ ಮುಖಂಡ ಶೇಖರ್ ಗುರಾಣಿ, ‘ಈ ಕಾರ್ಯಕ್ರಮಕ್ಕೆ ಬಿಜೆಪಿ ಮುಖಂಡರದ್ದು ಆರ್ಥಿಕ ನೆರವಿದೆ’ ಎಂದರು. ನಂತರ ಕಾಂಗ್ರೆಸ್‌ ನಾಯಕರು ಮತ್ತು ಪೊಲೀಸರು ಎಲ್ಲರನ್ನೂ ಸಮಾಧಾನಪಡಿಸಿ, ಪರಿಸ್ಥಿತಿ ತಿಳಿಗೊಳಿಸಿದರು.

‘ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ’

‘ಎಲ್ಲರ ಏಳ್ಗೆಗಾಗಿ ಸಿದ್ದರಾಮಯ್ಯ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ‌. ಅನೇಕ ಭಾಗ್ಯಗಳನ್ನು ಕೊಟ್ಟಿದ್ದಾರೆ. ಅತ್ಯಂತ ಪ್ರಾಮಾಣಿಕ ರಾಜಕಾರಣಿಯಾದ ಅವರೇ ಮುಂದಿನ ಮುಖ್ಯಮಂತ್ರಿ ಆಗಬೇಕು’ ಎಂದು ಶಾಸಕ ಬೈರತಿ ಸುರೇಶ ಹೇಳಿದರು.

‘ರಾಜ್ಯ ಅಭಿವೃದ್ಧಿ ಆಗಲು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವುದು ಸೂಕ್ತ’ ಎಂದು ಶಾಸಕ ರಾಘವೆಂದ್ರ ಹಿಟ್ನಾಳ ಮತ್ತು ಕಾಂಗ್ರೆಸ್‌ ನಾಯಕ ಬಸವರಾಜ ರಾಯರಡ್ಡಿ ಧ್ವನಿಗೂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.