ADVERTISEMENT

ಜೋಡೆತ್ತಿನಂತಿದ್ದ ಸಿದ್ದರಾಮಯ್ಯ–ಶ್ರೀನಿವಾಸ ಪ್ರಸಾದ್

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2024, 6:36 IST
Last Updated 29 ಏಪ್ರಿಲ್ 2024, 6:36 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಚೆಗೆ ಶ್ರೀನಿವಾಸ ಪ್ರಸಾದ್ ಅವರನ್ನು ಮೈಸೂರಿನಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು.</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಚೆಗೆ ಶ್ರೀನಿವಾಸ ಪ್ರಸಾದ್ ಅವರನ್ನು ಮೈಸೂರಿನಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು.

   

ಮೈಸೂರು: ವಿ.ಶ್ರೀನಿವಾಸ ಪ್ರಸಾದ್ ಹಾಗೂ ಸಿದ್ದರಾಮಯ್ಯ ಮೈಸೂರು ಭಾಗದಲ್ಲಿ ‘ಜೋಡೆತ್ತು’ಗಳಂತೆ ದೀರ್ಘ ಕಾಲದವರೆಗೆ ಜೊತೆಯಾಗಿಯೇ ರಾಜಕಾರಣ ಮಾಡಿದವರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಇಬ್ಬರ ನಡುವೆಯೂ ವೈರತ್ವ–ಮುನಿಸು ಕಾಣಿಸಿಕೊಂಡು ವಿರುದ್ಧ ದಿಕ್ಕಿನಲ್ಲಿ ಸಾಗಿದರು.

ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲೇ ಉಳಿದರೆ, ಶ್ರೀನಿವಾಸ ಪ್ರಸಾದ್ ಬಿಜೆಪಿ ಸೇರ್ಪಡೆಯಾದರು.

ADVERTISEMENT

ಸಿದ್ದರಾಮಯ್ಯ ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದಾಗ, ಪ್ರಸಾದ್‌ ಕಂದಾಯ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯನ್ನು ಬೆಳಿಗ್ಗೆಯಿಂದ ರಾತ್ರಿವರೆಗೂ ಸಮಗ್ರವಾಗಿ ನಡೆಸಿ ಅಧಿಕಾರಿಗಳ ಬೆವರಿಳಿಸುತ್ತಿದ್ದರು.

ಇವರಿಬ್ಬರೂ ಬೇರೆ ಬೇರೆ ಪಕ್ಷಗಳಿದ್ದರೂ ವಿಶ್ವಾಸದಿಂದಿದ್ದರು. ಕಾಂಗ್ರೆಸ್‌ನಲ್ಲಿದ್ದಾಗಲೂ ಇಬ್ಬರ ನಡುವೆ ಭಿನ್ನಾಭಿಪ್ರಾಯ ಇರಲಿಲ್ಲ. ಆದರೆ, ಮಂತ್ರಿ ಮಂಡಲದಿಂದ ಕೈಬಿಟ್ಟಿದ್ದರಿಂದ ಪ್ರಸಾದ್‌ ನೊಂದುಕೊಂಡು ಸಿದ್ದರಾಮಯ್ಯ ಅವರ ಒಡನಾಟದಿಂದ ದೂರಾದರು.

ಆ ಸರ್ಕಾರದಲ್ಲಿ ಮೂರು ವರ್ಷಗಳ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 14 ಸಚಿವರನ್ನು ಮಂತ್ರಿ ಮಂಡಲದಿಂದ ಕೈಬಿಟ್ಟಿದ್ದರು. ಅದರಲ್ಲಿ ಪ್ರಸಾದ್ ಅವರ ಹೆಸರೂ ಇದ್ದದ್ದು ತೀವ್ರ ಅಚ್ಚರಿ ಮೂಡಿಸಿತ್ತು. ಇದರಿಂದ ಪ್ರಸಾದ್‌ ಆಕ್ರೋಶಗೊಂಡಿದ್ದರು.

ನೊಂದುಕೊಂಡಿದ್ದರು:

‘ಹಿರಿಯ ಸದಸ್ಯನಾದ ನನ್ನನ್ನು ಅವರು ಸಚಿವ ಸಂಪುಟದಿಂದ ನಿರ್ದಾಕ್ಷಿಣ್ಯವಾಗಿ ಕೈಬಿಟ್ಟರು. ಈ ವಿಚಾರದಲ್ಲಿ ನನ್ನೊಂದಿಗೆ ಚರ್ಚಿಸುವ ಕನಿಷ್ಠ ಸೌಜನ್ಯವನ್ನೂ ತೋರಲಿಲ್ಲ. ನನ್ನನ್ನು ತೆಗೆದು ನನ್ನ ಜಾಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನು ಮಂತ್ರಿ ಮಾಡಿದ ಹಿಂದಿರುವ ಪಿತೂರಿ ನಿಗೂಢವಾಗಿದೆ. ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ, ಡಾ.ಎಚ್‌.ಸಿ.ಮಹದೇವಪ್ಪ ಮೊದಲಾದ ದಲಿತ ನಾಯಕರಾರೂ ಈ ಬೆಳವಣಿಗೆಯನ್ನು ವಿರೋಧಿಸಲೂ ಇಲ್ಲ’ ಎಂದು ಆಗಾಗ ನೊಂದು ಹೇಳಿಕೊಳ್ಳುತ್ತಿದ್ದರು.

‘ನನ್ನ ಸ್ವಾಭಿಮಾನ ಮತ್ತು ಹಿರಿತನಕ್ಕೆ ಧಕ್ಕೆಯಾಯಿತು’ ಎಂದು ಹೇಳಿ, ಶಾಸಕ ಸ್ಥಾನ ಹಾಗೂ ಕಾಂಗ್ರೆಸ್‌ ಸದಸ್ಯತ್ವಕ್ಕೆ ರಾಜೀನಾಮೆ ಕೊಡಲು ನಿರ್ಧರಿಸಿದ್ದರು. ಇದನ್ನು ತಿಳಿಸಿದ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡೀಸ್ ಪ್ರಸಾದ್ ಅವರನ್ನು ಭೇಟಿಯಾಗಿ ಮನವೊಲಿಕೆಗೆ ಯತ್ನಿಸಿದ್ದರು. ಆದರೆ, ‘ಪಿತೂರಿಗಾರರ ನಡುವೆ ಯಾವ ಮುಖ ಇಟ್ಟುಕೊಂಡು ಸದಸದಲ್ಲಿ ಕುಳಿತುಕೊಳ್ಳಲಿ’ ಎಂದು ಪ್ರಶ್ನಿಸಿದ್ದರು. ಬಳಿಕ ರಾಜೀನಾಮೆ ಸಲ್ಲಿಸಿ ನಂಜನಗೂಡು, ಚಾಮರಾಜನಗರ ಹಾಗೂ ತಿ.ನರಸೀಪುರದಲ್ಲಿ ಬೃಹತ್ ಸಮಾವೇಶ ನಡೆಸಿದ್ದರು. ಬೆಂಬಲಿಗರ ಒತ್ತಾಸೆಯಂತೆ ಬಿಜೆಪಿ ಸೇರ್ಪಡೆಯಾದರು. ಈ ಬೆಳವಣಿಗೆಯಿಂದಾಗಿ ಸಿದ್ದರಾಮಯ್ಯ–ಪ್ರಸಾದ್ ಒಡನಾಟದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಸಿದ್ದರಾಮಯ್ಯ ವಿರುದ್ಧ ಕಟು ಮಾತುಗಳನ್ನು ಪ್ರಸಾದ್ ಪ್ರಯೋಗಿಸುತ್ತಿದ್ದರು.

ಸಿದ್ದರಾಮಯ್ಯ ವಿರುದ್ಧ ಆಕ್ರೋಶ:

‘ಉಳಿದ ಎರಡು ವರ್ಷ ಹೊಸ ಯೋಜನೆಗಳನ್ನು ರೂಪಿಸಿ ಅವುಗಳನ್ನು ಜಾರಿಗೆ ತಂದು ರಾಜಕೀಯದಿಂದ ಸ್ವಯಂ ನಿವೃತ್ತಿ ಹೊಂದುತ್ತೇನೆ ಎಂದು ಮೊದಲೇ ತಿಳಿಸಿದ್ದರೂ ಸಿದ್ದರಾಮಯ್ಯ ನನ್ನನ್ನು ಸಚಿವ ಸಂಪುಟದಿಂದ ತೆಗೆದರು’ ಎಂದು ಆಗಾಗ ಆಕ್ರೋಶದಿಂದ ಹೇಳುತ್ತಿದ್ದರು. ಅವರ ರಾಜೀನಾಮೆಯಿಂದ ತೆರವಾದ ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ 2017ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಳಲೆ ಕೇಶವಮೂರ್ತಿ ಅವರ ವಿರುದ್ಧ ಸೋಲನುಭವಿಸಿದ್ದರು. ‘ನನ್ನ ರಾಜಕೀಯ ಜೀವನದಲ್ಲಿ ಇಂತಹ ಭ್ರಷ್ಟ ಚುನಾವಣೆಯನ್ನು ಕಂಡಿರಲಿಲ್ಲ’ ಎಂದು ಹೇಳಿಕೆ ನೀಡಿದ್ದರು.

2019ರ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಬಿಜೆಪಿಯ ಗೆಲುವಿಗೆ ಕಾರಣವಾಗಿದ್ದರು.

ಪಕ್ಷಾಂತರ ಮಾಡಿರಬಹುದು ತತ್ವಾಂತರಿ ಅಲ್ಲ ಎನ್ನುತ್ತಿದ್ದ ಪ್ರಸಾದ್‌

‘ನಾನು ರಾಜಕೀಯದಲ್ಲಿ ಅನೇಕ ಏಳು–ಬೀಳುಗಳನ್ನು ಕಂಡಿದ್ದೇನೆ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಪಕ್ಷದಿಂದ ಹೊರಬಂದಿದ್ದೇನೆ. ಆದರೆ, ಎಂದಿಗೂ ಹೊಂದಾಣಿಕೆ ಮಾಡಿಕೊಳ್ಳದೆ ಸಾಮಾಜಿಕ ಬದ್ಧತೆಗೆ ಪ್ರಾಮುಖ್ಯತೆ ನೀಡಿದ್ದೇನೆ. ನಾನು ಪಕ್ಷಾಂತರ ಆದರೂ ತತ್ವಾಂತರಿ ಅಲ್ಲ’ ಎಂದು ಪದೇ ಪದೇ ಹೇಳಿಕೊಳ್ಳುತ್ತಿದ್ದರು.

ಸಾಮಾಜಿಕ ನ್ಯಾಯದ ಪರವಿದ್ದ ಅವರು, ‘ಸಂವಿಧಾನವನ್ನು ಬದಲಾಯಿಸುವುದು ಯಾರಿಂದಲೂ ಸಾಧ್ಯವಿಲ್ಲ. ಅಂಥ ಪ್ರಯತ್ನ ನಡೆದರೆ ಸುಮ್ಮನಿರುತ್ತೇವೆಯೇ?’ ಎಂದೂ ಗುಡುಗುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.