ಬೆಂಗಳೂರು: ‘ಗಾಂಧಿ ಭಾರತದ ಪ್ರಜ್ಞೆ. ಗಾಂಧಿಯ ದೇಹ ಕೊಂದರೂ ವಿಚಾರಗಳನ್ನು ಕೊಲ್ಲಲು ಅಸಾಧ್ಯ. ಬಿಜೆಪಿಯವರಿಗೆ ಗೋಡ್ಸೆ ನಾಯಕ. ಗೋಡ್ಸೆ ಭಾರತ ಮಾಡುವ ಬಿಜೆಪಿ ಷಡ್ಯಂತ್ರವನ್ನು ಸೋಲಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯ ಎಐಸಿಸಿ ಅಧಿವೇಶನಕ್ಕೆ ನೂರು ವರ್ಷ ತುಂಬಿದ ನೆನಪಿಗಾಗಿ ಕೆಪಿಸಿಸಿ ಕಚೇರಿ ‘ಭಾರತ್ ಜೋಡೊ’ ಭವನದಲ್ಲಿ ಬುಧವಾರ ನಡೆದ ‘ಗಾಂಧಿ ಭಾರತ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಗಾಂಧಿ ಭಾರತದ ಆತ್ಮ. ಭಾರತದ ಪ್ರಜ್ಞೆ. ಇಲ್ಲಿ ಗೋಡ್ಸೆಗಳು ಬೆಳೆಯಲು ಬಿಡಬಾರದು. ಧರ್ಮದ ಹೆಸರಲ್ಲಿ, ಜಾತಿ ಹೆಸರಲ್ಲಿ ಸಮಾಜವನ್ನು ಛಿದ್ರ ಮಾಡಲು ಅವಕಾಶ ಕೊಡಬಾರದು. ಕೋಮು ಶಕ್ತಿಗಳನ್ನು ಸೋಲಿಸಬೇಕು’ ಎಂದರು.
‘ಮಹಾತ್ಮಗಾಂಧಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ ಐತಿಹಾಸಿಕವಾದದ್ದು. ಜಗತ್ತು ಕಂಡ ಅಪರೂಪದ ಸಂತ ಗಾಂಧಿ. ಅವರು ಭಾರತೀಯರ ಹೆಮ್ಮೆ. ಗಾಂಧಿ ವಿಚಾರದಲ್ಲಿ ಬಿಜೆಪಿ ಬಹಳ ಕೆಳಮಟ್ಟದ ರಾಜಕಾರಣ ಮಾಡುತ್ತಿದೆ. ಬಿಜೆಪಿ ಗೋಡ್ಸೆ ಭಾರತ ಮಾಡಲು ಹೊರಟಿದೆ’ ಎಂದು ಆರೋಪಿಸಿದರು.
‘ಕೋಮು ದುಷ್ಟಶಕ್ತಿಗಳು ರಾಜ್ಯದ, ದೇಶದ ಅಭಿವೃದ್ಧಿಗೆ ಮಾರಕ. ಬಿಜೆಪಿ ಅಧಿಕಾರದಲ್ಲಿ ಇದ್ದಾಗೆಲ್ಲಾ ಸಮಾಜವನ್ನು, ಜಾತಿ, ಧರ್ಮದ ಹೆಸರಲ್ಲಿ ವಿಭಜಿಸುತ್ತಿದ್ದರೇ ಹೊರತು ಜನಪರವಾದ, ಅಭಿವೃದ್ಧಿ ಪರವಾದ ಕಾರ್ಯಕ್ರಮಗಳನ್ನು ರೂಪಿಸಲೇ ಇಲ್ಲ. ಜಾರಿ ಮಾಡಲೂ ಇಲ್ಲ. ಬಿಜೆಪಿಗೆ ಜನಪರ ಪ್ರಗತಿ ಮುಖ್ಯ ಅಲ್ಲವೇ ಅಲ್ಲ’ ಎಂದರು.
‘ನಾವು ಸರ್ವ ಜಾತಿ, ಜನಾಂಗ, ಧರ್ಮದವರಿಗೆ ಮತ್ತು ಸರ್ವ ವರ್ಗದವರ ಏಳೆಗೆಗಾಗಿ ಗ್ಯಾರಂಟಿಗಳನ್ನು ಜಾರಿ ಮಾಡಿದರೆ, ಈ ಜನಪರ ಕಾರ್ಯಕ್ರಮಗಳ ವಿರುದ್ಧ ತಪ್ಪು ಮಾಹಿತಿ ನೀಡಿ ಫಲಾನುಭವಿಗಳನ್ನು ಅವಮಾನಿಸಿದರು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಗಾಂಧಿ ಅವರು ಬೆಳಗಾವಿ ಅಧಿವೇಶನದಲ್ಲಿ ಹಿಂದು-ಮುಸ್ಲಿಂ ಐಕ್ಯತೆ, ಗ್ರಾಮ ಸ್ವರಾಜ್ಯ, ಸರ್ವೋದಯದ ಬಗ್ಗೆ ಹೆಚ್ಚು ಒತ್ತು ಕೊಟ್ಟು ಸಂದೇಶ ನೀಡಿದ್ದಾರೆ. ಇದು ಕಾಂಗ್ರೆಸ್ ನ ಸಿದ್ದಾಂತ ಮತ್ತು ಕಾರ್ಯಕ್ರಮಗಳಾಗಿವೆ’ ಎಂದರು.
‘ಗಾಂಧಿಯವರು ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಅಧಿವೇಶನದ ಶತಾಬ್ದಿ ಅರ್ಥಪೂರ್ಣವಾಗಿ ಇಡೀ ವರ್ಷ ನಡೆಯುತ್ತಿದೆ. ಇದರಲ್ಲಿ ಇಡೀ ರಾಜ್ಯದ ಎಲ್ಲಾ ವಯೋಮಾನದವರು ಭಾಗಿ ಆಗಿ ಅರ್ಥಪೂರ್ಣಗೊಳಿಸಬೇಕು’ ಎಂದೂ ಮನವಿ ನೀಡಿದರು.
ಕಾನೂನು ವರ್ಸ್ ಕಾನ್ಸ್ಪಿರೆಸಿ: ‘ರಾಜ್ಯದಲ್ಲಿ, ದೇಶದಲ್ಲಿ ಬಿಜೆಪಿ ಕಾನೂನು ವರ್ಸಸ್ ಕಾನ್ಸ್ಪಿರೆಸಿ ನಡೆಸುತ್ತಿದೆ. ಕಾನ್ಸ್ಪಿರೆಸಿ ಮೂಲಕ ಕಾನೂನನ್ನು ಸೋಲಿಸಲು ಯತ್ನಿಸಿ ರಾಜಕೀಯ ಅಸ್ಥಿರತೆ ಸೃಷ್ಟಿಸುತ್ತಿದೆ. ಮಹಾತ್ಮ ಗಾಂಧಿ ಅವರು ಹೇಳಿದಂತೆ, ಎಲ್ಲಾ ನ್ಯಾಯಾಲಯಗಳಿಗಿಂತ ಆತ್ಮಸಾಕ್ಷಿಯ ನ್ಯಾಯಾಲಯ ದೊಡ್ಡದು’ ಎಂದರು.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಕಾನೂನು ಸಚಿವ ಎಚ್.ಕೆ. ಪಾಟೀಲ, ಹಾಲಿ, ಮಾಜಿ ಸಚಿವರು, ಕೆಪಿಸಿಸಿಯ ಪದಾಧಿಕಾರಿಗಳು ಇದ್ದರು.
ರಾಜ್ಯದಲ್ಲಿ, ದೇಶದಲ್ಲಿ ಬಿಜೆಪಿ ಕಾನೂನು ವರ್ಸಸ್ ಕಾನ್‌ಸ್ಪಿರೆಸಿ (ಸಂಚು) ನಡೆಸುತ್ತಿದೆ. ಕಾನ್ಸ್ಪಿರೆಸಿ ಮೂಲಕ ಕಾನೂನನ್ನು ಸೋಲಿಸಲು ಯತ್ನಿಸಿ ರಾಜಕೀಯ ಅಸ್ಥಿರತೆ ಸೃಷ್ಟಿಸುತ್ತಿದೆಸಿದ್ದರಾಮಯ್ಯ, ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.