ADVERTISEMENT

ಮುಡಾ ಗಬ್ಬೆದ್ದು ಹೋಗಿದ್ದು, ಸ್ವಚ್ಛಗೊಳಿಸುವೆ: ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 7:44 IST
Last Updated 11 ಜುಲೈ 2024, 7:44 IST
   

ಮೈಸೂರು: ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮೊದಲಿನಿಂದಲೂ ಗೆಬ್ಬೆದ್ದು ಹೋಗಿದ್ದು, ಅದನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಗುರುವಾರ ಪ್ರತಿಕ್ರಿಯಿಸಿದ ಅವರು, ‘ನನ್ನ ಪತ್ನಿಗೆ ಬದಲಿ ನಿವೇಶನ ಕೊಟ್ಟ ವಿಷಯದಲ್ಲಿ ಬಿಜೆಪಿಯವರು ರಾಜಕೀಯವನ್ನು ಮುಂದುವರಿಸಿದರೆ ನಾವೂ ರಾಜಕೀಯವಾಗಿಯೇ ಮುಂದುವರಿಯಬೇಕಾಗುತ್ತದೆ. ಅವರಿಗೆ ಹೇಗೆ ಎದಿರೇಟು ಕೊಡಬೇಕು ಎನ್ನುವುದು ಗೊತ್ತಿದೆ’ ಎಂದು ಗುಡುಗಿದರು.

‘ನಾವು ಕಾನೂನಾತ್ಮಕವಾಗಿದ್ದೇವೆ. ಕಾನೂನಿಗೆ ವಿರುದ್ಧವಾಗಿ ಆಗಿರುವುದೆಲ್ಲಿ ಎನ್ನುವುದನ್ನು ಬಿಜೆಪಿಯವರು ತೋರಿಸಲಿ’ ಎಂದು ಸವಾಲು ಹಾಕಿದರು.

ADVERTISEMENT

‘ಮುಡಾ ಹಗರಣದ ಬಗ್ಗೆ ಇಬ್ಬರು ಐಎಎಸ್ ಅಧಿಕಾರಿಗಳ ನೇತೃತ್ವದ ಸಮಿತಿಯಿಂದ ತನಿಖೆ ನಡೆಯುತ್ತಿದೆ‌. ವರದಿ ಬಂದ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇನೆ. ನಮ್ಮ ಕಾಲದಲ್ಲೂ ತಪ್ಪುಗಳು ಆಗಿವೆ. ಬಿಜೆಪಿ ಕಾಲದಲ್ಲೇ ಹೆಚ್ಚು ತಪ್ಪುಗಳಾಗಿವೆ. ಶೇ 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ವಿಷಯವನ್ನು ಆಯುಕ್ತರಾದಿಯಾಗಿ ಯಾರೂ ದುರುಪಯೋಗ ಮಾಡಿಕೊಳ್ಳದಂತೆ ಸರಿಪಡಿಸುತ್ತೇವೆ’ ಎಂದು ತಿಳಿಸಿದರು.

‘2021ರಲ್ಲಿ ಬಿಜೆಪಿ ಸರ್ಕಾರವೇ ಇತ್ತಲ್ಲ. ಆ ಕಾಲದಲ್ಲಿ ಕೊಟ್ಟರೆ, ಮುಡಾದವರು ಆಗ ತಪ್ಪು ಮಾಡಿದ್ದರೆ ಜವಾಬ್ದಾರರು ಯಾರು?’ ಎಂದು ಕೇಳಿದರು.

‘ಒಂದು ವೇಳೆ ನಿವೇಶನ ವಾಪಸ್ ಪಡೆದುಕೊಳ್ಳುವುದೇ ಆದಲ್ಲಿ ಭೂಸ್ವಾಧೀನ ಕಾಯ್ದೆ ಪ್ರಕಾರ ನಮಗೆ ಪರಿಹಾರ ಕೊಡಬೇಕಲ್ಲವೇ? ಜಮೀನಿನ ಮೌಲ್ಯದ ಮೂರು ಪಟ್ಟು ಪರಿಹಾರ ನೀಡಬೇಕಲ್ಲವೇ? ಅದರ ಪ್ರಕಾರ ₹ 57 ಕೋಟಿ ಆಗುತ್ತದೆ. ಬಡ್ಡಿ ಸೇರಿದರೆ ₹ 62 ಕೋಟಿ ಆಗುತ್ತದೆ. ಬೇಕಿದ್ದರೆ ನಿವೇಶನ ವಾಪಸ್ ಪಡೆದುಕೊಳ್ಳಲಿ. ನಮಗೆ ಹಣ ಕೊಡಲಿ’ ಎಂದು ಹೇಳಿದರು.

‘ನನ್ನ ಪತ್ನಿಗೆ ನಿವೇಶನ ನೀಡಿದಾಗ ನಾನು ವಿರೋಧ ಪಕ್ಷದ ನಾಯಕನಾಗಿದ್ದೆ. ಬಿಜೆಪಿಯವರು ನನ್ನನ್ನು ಕೇಳಿಕೊಂಡು ಕೆಲಸ ಮಾಡುತ್ತಿದ್ರಾ? ನಾನೀಗ ವಿರೋಧ ಪಕ್ಷದ ನಾಯಕನನ್ನು ಕೇಳಿಕೊಂಡು ಕೆಲಸ ಮಾಡುತ್ತೇನೆಯೇ’ ಎಂದು ಪ್ರಶ್ನಿಸಿದರು.

‘ನಾನೊಬ್ಬ ಹಿಂದುಳಿದ ವರ್ಗದ ನಾಯಕ, ಎರಡನೇ ಬಾರಿ ಮುಖ್ಯಮಂತ್ರಿ ಆಗಿರುವುದನ್ನು ಸಹಿಸಲು ಕೆಲವರಿಗೆ ಆಗುತ್ತಿಲ್ಲ. ಹೊಟ್ಟೆ ಕಿಚ್ಚಿನಿಂದ ಕೆಲವರು ಷಡ್ಯಂತ್ರ ಮಾಡುತ್ತಿದ್ದಾರೆ. ನನ್ನ ವಿರುದ್ಧ ದೂರಲು ಬೇರೇನೂ ಇಲ್ಲವಲ್ಲ, ಅದಕ್ಕಾಗಿ ಈ ನಿವೇಶನದ ವಿಷಯ ಹಿಡಿದುಕೊಂಡಿದ್ದಾರೆ. ಕಾನೂನಾತ್ಮಕವಾಗಿ ನಡೆದಿರುವ ವಿಚಾರವನ್ನು ಅಕ್ರಮ ಎಂದು ಬಿಂಬಿಸುತ್ತಿದ್ದಾರೆ. ಇದೆಕ್ಕೆಲ್ಲಾ ನಾನು ಹೆದರುತ್ತೀನಾ?’ ಎಂದು ಕೇಳಿದರು.

‘ವಾಲ್ಮೀಕಿ ನಿಗಮದಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ವಿಚಾರದಲ್ಲಿ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು’ ಎಂದು ಶಾಸಕ ಜಿ.ಟಿ. ದೇವೇಗೌಡರ ಒತ್ತಾಯಕ್ಕೆ ಕೆಂಡಾಮಂಡಲವಾದ ಮುಖ್ಯಮಂತ್ರಿ, ‘ಬ್ಯಾಂಕ್‌ನಲ್ಲೂ ಅವ್ಯವಹಾರ ಆಗಿದೆ. ಅದಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಲ್ಲವೇ?’ ಎಂದು ತಿರುಗೇಟು ನೀಡಿದರು.

‘ಸರ್ಕಾರಿ ಖಜಾನೆಯಿಂದಲೇ ₹187 ಕೋಟಿ ಹಣ ವರ್ಗಾವಣೆ ಆಗಿರುವ ಬಗ್ಗೆ ಅಧಿಕೃತವಾದ ಯಾವ ವರದಿಯೂ ಬಂದಿಲ್ಲ. ಎಲ್ಲವೂ ತನಿಖಾ ಹಂತದಲ್ಲೇ ಇವೆ. ಖಜಾನೆಯಿಂದ ವರ್ಗಾವಣೆ ಆಗುವ ಹಣದ ಎಲ್ಲಾ ವಿಚಾರವೂ ನನ್ನ ಗಮನಕ್ಕೆ ಬರುವುದಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.