ಬೆಂಗಳೂರು: ರಾಜ್ಯದಲ್ಲಿ ನೆರೆ, ಬರಕ್ಕೆ ಸ್ಪಂದಿಸಬೇಕಾದ ಇಲಾಖೆಗೆ ಮಂತ್ರಿಗಳೇ ಇರಲ್ಲದಿರುವುದಕ್ಕೆ, ಸರ್ಕಾರ ರಚನೆಯಾಗಿ ಹಲವು ದಿನಗಳೇ ಕಳೆದರೂ ಮಂತ್ರಿ ಮಂಡಲವೇ ರಚನೆಯಾಗದೇ ಇರುವುದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ರಾಜ್ಯದ ಪರಿಸ್ಥಿತಿ ರಾಜ್ಯಪಾಲರಿಗೆ ಕಾಣುತ್ತಿಲ್ಲವೇ ಎಂದೂ ಅವರು ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ಇಂದು ಸರಣಿ ಟ್ವೀಟ್ ಮಾಡಿದ್ದಾರೆ ಸಿದ್ದರಾಮಯ್ಯ.
‘ವಿಶ್ವಾಸ ಮತಯಾಚನೆಗೆ ಸಂದೇಶದ ಮೇಲೆ ಸಂದೇಶ ಕಳಿಸುತ್ತಿದ್ದ ಘನತೆವೆತ್ತ ರಾಜ್ಯಪಾಲರ ಗಮನಕ್ಕೆ... ಸಚಿವರಿಲ್ಲದ ಏಕವ್ಯಕ್ತಿ ಸಂಪುಟದಿಂದಾಗಿ ರಾಜ್ಯದ ಜನತೆ ಅನುಭವಿಸುತ್ತಿರುವ ಬವಣೆ ಕಾಣುತ್ತಿಲ್ಲವೇ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
‘ಅತಿವೃಷ್ಟಿ-ಅನಾವೃಷ್ಟಿಗಳಿಗೆ ಸ್ಪಂದಿಸಬೇಕಾದ ಕಂದಾಯ, ಕೃಷಿ, ಗ್ರಾಮೀಣ ಅಭಿವೃದ್ದಿ ಇಲಾಖೆಗಳಿಗೆ ಸಚಿವರೇ ಇಲ್ಲ. ಆದ್ಯತೆ ಅಧಿಕಾರಿಗಳ ವರ್ಗಾವಣೆಯದ್ದೇ? ಸಂಪುಟ ವಿಸ್ತರಣೆಯದ್ದೇ?’ಎಂದು ಅವರು ಕೇಳಿದ್ದಾರೆ.
‘ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲುಯಡಿಯೂರಪ್ಪ ಅವರು ತೋರಿಸಿದ ಅತಿ ಅವಸರವನ್ನು ಸಂಪುಟ ವಿಸ್ತರಣೆಗೆ ತೋರುತ್ತಿಲ್ಲವೇಕೆ? ಅತೀವೃಷ್ಟಿ-ಅನಾವೃಷ್ಟಿಯಿಂದ ರಾಜ್ಯದ ಜನರು ಸಂಕಟದಲ್ಲಿದ್ದಾರೆ. ಆಡಳಿತ ಯಂತ್ರ ಸ್ತಬ್ಧವಾಗಿದೆ. ಇದೇನು ಪ್ರಜಾಪ್ರಭುತ್ವವೇ? ಏಕಚಕ್ರಾಧಿಪತ್ಯವೇ?’ ಎಂದೂ ಅವರು ಪಶ್ನೆಯ ಸುರಿಮಳೆಗೈದಿದ್ದಾರೆ.
ಇದನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.