ADVERTISEMENT

ಕಾಂಗ್ರೆಸ್‌ನಿಂದ ನಾನೇ ಸಿಎಂ ಅಭ್ಯರ್ಥಿ, ಬಿಜೆಪಿಯಿಂದ ಈಶ್ವರಪ್ಪ ಆಗ್ತಾನಾ:ಸಿದ್ದು

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 16:35 IST
Last Updated 30 ಏಪ್ರಿಲ್ 2019, 16:35 IST
   

ಲಕ್ಷ್ಮೇಶ್ವರ: ‘ಈಶ್ವರಪ್ಪನಿಗೆ ಧೈರ್ಯ ಇದ್ದರೆ ಬಿಜೆಪಿಯಿಂದ ಮುಂದಿನ ಮುಖ್ಯಮಂತ್ರಿ ಆಗುತ್ತೇನೆಂದು ಘೋಷಿಸಿಕೊಳ್ಳಲಿ. ಅದು ಅವನಿಂದ ಸಾಧ್ಯವಿಲ್ಲ. ಏಕೆಂದರೆ ಅವನಲ್ಲಿ ಧೈರ್ಯ ಇಲ್ಲ. ಆದರೆ, ಕಾಂಗ್ರೆಸ್‍ನಿಂದ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಹೇಳಿಕೊಳ್ಳುವ ಧೈರ್ಯ ನನಗಿದೆ’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಲಕ್ಷ್ಮೇಶ್ವರದಲ್ಲಿ ಗುರುವಾರ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್.ಪಾಟೀಲ ಪರವಾಗಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಈಶ್ವರಪ್ಪ ಮತ್ತು ಯಡಿಯೂರಪ್ಪ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

‘ಐದು ವರ್ಷಗಳಲ್ಲಿ ಮಾಡಿದ ಸಾಧನೆ ಮುಂದಿಟ್ಟುಕೊಂಡು ಮತ ಕೇಳುವುದು ನ್ಯಾಯಸಮ್ಮತ. ಆದರೆ, ಮೋದಿ ಯಾವುದೇ ಸಾಧನೆ ಮಾಡದೇ ಮತ ಕೇಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಹೊಸ ಗ್ಲಾಸು ಹಳೇ ಮದ್ಯ ಎಂಬ ಮಾತಿನಂತೆ ಮತ್ತೆ ಮತ್ತೆ ಹೇಳಿದ್ದನ್ನೇ ಮೋದಿ ಹೇಳುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

ADVERTISEMENT

‘ಈ ದೇಶದಲ್ಲಿ ಕಾಂಗ್ರೆಸ್‌ನಿಂದ ಮಾತ್ರ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯ’ ಎಂದು ಸಿದ್ದರಾಮಯ್ಯ ಹೇಳಿದರು.

ನರೇಗಲ್‌ನ ಸಮಾರಂಭದಲ್ಲಿ ಮಾತನಾಡಿ, ‘ಮೋದಿ ಚೌಕಿದಾರ ಅಲ್ಲ; ಸಾಲಗಾರರು ಓಡಿಹೋಗಲು ಸಹಕರಿಸಿದ ಭಾಗೀದಾರ. ಜನರ ಮನಸ್ಸಿನಲ್ಲಿ ಭ್ರಮಾಲೋಕ ಸೃಷ್ಟಿಸಿದ ದುರಾತ್ಮ. ಇಂತಹ ವ್ಯಕ್ತಿಗೆ ಕನಸಿನಲ್ಲೂ ವೋಟ್‌ ಹಾಕಬೇಡಿ’ ಎಂದರು.

‘ಇಂಥ ವ್ಯಕ್ತಿಯನ್ನು ತೋರಿಸಿ ಬಿಜೆಪಿ ಸಂಸದರ ಮತ ಕೇಳುತ್ತಿದ್ದಾರೆ. ಇದು ಕನ್ಯೆ ನೋಡಲು ಹೋದಾಗ, ಕನ್ಯೆಯ ಬದಲು ತಾಯಿಯನ್ನು ತೋರಿಸಿ ಒಪ್ಪಿಕೊಳ್ಳುವಂತೆ ಒತ್ತಾಯ ಮಾಡುವ ಸ್ಥಿತಿ. ಈ ವಾತಾವರಣ ಬಿಜೆಪಿಯಲ್ಲಿ ಸೃಷ್ಟಿಯಾಗಿದೆ’ ಎಂದು ಲೇವಡಿ ಮಾಡಿದರು.

‘ಕುರುಬ ಸಮುದಾಯದ ಒಬ್ಬರಿಗೆ ಟಿಕೆಟ್ ಕೊಡಿಸುವ ತಾಕತ್ ಇಲ್ಲದೆ, ನಾಲಗೆ ಚಾಚುವ ಈಶ್ವರಪ್ಪನಿಗೆ ಹಿಂದುಳಿದವರ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ’ ಎಂದುಹರಿಹಾಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.