ADVERTISEMENT

ಮೈತ್ರಿ ಸರ್ಕಾರಕ್ಕೆ ನಾನು ಮೂಗುದಾರ ಹಾಕಿಲ್ಲ

ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌ ಸಂವಾದದಲ್ಲಿ ಸಿದ್ದರಾಮಯ್ಯ ಅಭಿಮತ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2019, 20:21 IST
Last Updated 13 ಮಾರ್ಚ್ 2019, 20:21 IST
.
.   

ಬೆಂಗಳೂರು: ‘ಮೈತ್ರಿ ಸರ್ಕಾರಕ್ಕೆ ಮೂಗುದಾರವೇ ಇಲ್ಲ. ಮೂಗುದಾರ ಹಾಕಲು ಅದೇನೂ ಪ್ರಾಣಿಯಲ್ಲ. ಅಲ್ಲದೆ, ಅಂತಹ ಪ್ರಯತ್ನಕ್ಕೆ ನಾನು ಕೈಹಾಕಿಲ್ಲ’

– ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಸ್ಪಷ್ಟೋಕ್ತಿ ಇದು. ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ವತಿಯಿಂದ ಬುಧವಾರ ಏರ್ಪಡಿಸಿದ್ದ ಮುಕ್ತ ಸಂವಾದದಲ್ಲಿ ಪಾಲ್ಗೊಂಡಿದ್ದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

‘ಮೈತ್ರಿ ಸರ್ಕಾರಕ್ಕೆ ಸಿದ್ದರಾಮಯ್ಯ ಸೂತ್ರಧಾರರೇ ಅಥವಾ ಮೂಗುದಾರ ಹಾಕುವವರೇ’ ಎನ್ನುವುದು ಸಂವಾದದಲ್ಲಿ ಎದುರಾದ ನೇರಪ್ರಶ್ನೆ.

ADVERTISEMENT

‘ಮೊದಲನೆಯದಾಗಿ ಮೈತ್ರಿ ಸರ್ಕಾರಕ್ಕೆ ಮೂಗುದಾರ ಇಲ್ಲ. ನಾನು ಈ ಮಾತನ್ನು ವ್ಯಂಗ್ಯವಾಗಿ ಹೇಳುತ್ತಿರುವುದಲ್ಲ. ಸರ್ಕಾರದಲ್ಲಿ ಎರಡೂ ಪಕ್ಷಗಳ ನಡುವಿನ ಸಮನ್ವಯಕ್ಕೆ ನನ್ನ ನೇತೃತ್ವದ ಸಮಿತಿ ಇದೆ ಅಷ್ಟೇ. ಸಣ್ಣ–ಪುಟ್ಟ ಭಿನ್ನಾಭಿಪ್ರಾಯ ಬಂದಾಗ, ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಿ ಸಮನ್ವಯ ಸಾಧಿಸುವ ಕೆಲಸವನ್ನು ಸಮಿತಿ ಮಾಡುತ್ತದೆ’ ಎಂದು ಸಮಜಾಯಿಷಿ ನೀಡಿದರು.

‘ಬಿಜೆಪಿಯವರು ಭಾವನೆಗಳನ್ನು ಕೆರಳಿಸುವ ಕೆಲಸ ಮಾಡಿದರೆ, ಕಾಡುತ್ತಿರುವ ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ನಾವು ಚುನಾವಣೆಗೆ ಹೋಗಲಿದ್ದೇವೆ. ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ, ರೈತರ ಸಂಕಷ್ಟ, ಮಹಿಳೆಯರ ಸುರಕ್ಷತೆ ಈ ಸಲದ ನಮ್ಮ ಚುನಾವಣಾ ವಿಷಯಗಳಾಗಿವೆ’ ಎಂದು ಅವರು ಸ್ಪಷ್ಟಪಡಿಸಿದರು.

*ನಾನು ಯಾವತ್ತೂ ಕುಟುಂಬ ರಾಜಕಾರಣ ಮಾಡಿಲ್ಲ ಎಂದು ಎಚ್‌.ಡಿ.ದೇವೇಗೌಡರು ಹೇಳಿದ್ದಾರೆ. ಅದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

ನಾನು ಆ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಆ ಪ್ರಶ್ನೆಗೆ ಅವರೇ ಉತ್ತರ ನೀಡಿದ್ದಾರೆ. ಕುಟುಂಬದ ಸದಸ್ಯರು ಚುನಾವಣೆಯಲ್ಲಿ ನಿಂತು ಗೆದ್ದು ಬಂದರೆ ತಪ್ಪೇನು ಎಂದು ಅವರು ಹೇಳಿದ್ದಾರೆ.

* ಹಾಗಿದ್ದರೆ ಒಂದೇ ಕುಟುಂಬದ ಅಜ್ಜ, ಮಗ, ಸೊಸೆ, ಮೊಮ್ಮಕ್ಕಳು ಚುನಾವಣೆಗೆ ನಿಲ್ಲುವುದು ಸರಿಯೇ?

ಅವರಿಗೆ ಮತ ನೀಡುವವರು ಯಾರು. ಅವರನ್ನು ಜನರೇ ಒಪ್ಪಿದ್ದಾರೆ. ಮತ್ತೆ ನೀವು ಏಕೆ ಪ್ರಶ್ನೆ ಕೇಳುತ್ತೀರಿ.

* ಅಹಿಂದ ಸಮುದಾಯ ನಿಮ್ಮ ಬಲ. ಮುಖ್ಯಮಂತ್ರಿಯಾಗಿದ್ದಾಗ ಆ ಸಮುದಾಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದೀರಿ. ಕಳೆದ ಚುನಾವಣೆಯಲ್ಲಿ ಆ ಸಮುದಾಯ ನಿಮ್ಮ ಕೈಹಿಡಿದಿಲ್ಲವಲ್ಲ?

ಕೈ ಹಿಡಿದ್ದಾರೆ. ಆದರೆ, ಪೂರ್ಣ ಪ್ರಮಾಣದಲ್ಲಿ ಕೈ ಹಿಡಿದಿಲ್ಲ ಅಷ್ಟೇ. ಕೆಲವರು ಅಪಪ್ರಚಾರಕ್ಕೆ ಬಲಿಯಾಗಿದ್ದಾರೆ. ಮತ್ತೆ ಕೆಲವರು ಜಾತಿ ಹಾಗೂ ಹಣಕ್ಕೆ ಮರುಳಾಗಿದ್ದಾರೆ. ಪ್ರಣಾಳಿಕೆಯಲ್ಲಿನ ಎಲ್ಲ ಭರವಸೆಗಳನ್ನು ಈಡೇರಿಸಿದ ಏಕೈಕ ಸರ್ಕಾರ ನಮ್ಮದು. 2013ರ ಚುನಾವಣೆಯಲ್ಲಿ ಕರಾವಳಿಯಲ್ಲಿ 19 ಕ್ಷೇತ್ರಗಳಲ್ಲಿ 13 ಕ್ಷೇತ್ರಗಳಲ್ಲಿ ಗೆದ್ದಿದ್ದೆವು. ಈ ಸಲ ‍ಅಪಪ್ರಚಾರ ಹಾಗೂ ಹಿಂದುತ್ವ ಕಾರಣದಿಂದ ಹಿನ್ನಡೆಯಾಯಿತು. ಜನ ಸ್ವಲ್ಪ ದಾರಿ ತಪ್ಪಿದ್ದಾರೆ. ಜನರು ಒಂದು ಸಲ ಎಡವಬಹುದು. ಈಗ ಹೋದ ಕಡೆಗಳೆಲ್ಲೆಲ್ಲ ತಪ್ಪಾಗಿದೆ ಕಣಣ್ಣ ಮತ್ತೆ ತಪ್ಪು ಮಾಡಲ್ಲ ಎನ್ನುತ್ತಿದ್ದಾರೆ. ಹಿಂದುತ್ವ, ಜಾತಿ, ಧರ್ಮ ಅಫೀಮು ಇದ್ದಂತೆ.

* ಲೋಕಸಭಾ ಚುನಾವಣೆಯ ಬಳಿಕ ಮೈತ್ರಿ ಸರ್ಕಾರ ಇರುತ್ತದೆಯೇ?

ಸಮ್ಮಿಶ್ರ ಸರ್ಕಾರ ಪೂರ್ಣಾಡಳಿತ ನಡೆಸಬೇಕು ಎಂಬ ತೀರ್ಮಾನ ಆಗಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬುದು ಉಭಯ ಪಕ್ಷಗಳ ಸಂಕಲ್ಪ. ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವಕ್ಕೆ ಏಟು ಬೀಳಲಿದೆ. ಸಂವಿಧಾನಕ್ಕೆ ಹೊಡೆತ ಬೀಳಲಿದೆ. ಆತಂಕದ ವಾತಾವರಣ ನಿರ್ಮಾಣವಾಗಲಿದೆ. ಉಭಯ ಪಕ್ಷಗಳ ಮುಖಂಡರ ನಡುವೆ ಸಣ್ಣಪುಟ್ಟ ಭಿನ್ನಾಭಿಪ್ರಾಯ, ಅಸಮಾಧಾನ ಇರುತ್ತದೆ. ಅದು ಕ್ರಮೇಣ ಸರಿಯಾಗಲಿದೆ.

* ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗುವುದು ಯಾವಾಗ?

ಜನ ಆಶೀರ್ವಾದ ಮಾಡಿದರೆ ಮುಂದಿನ ಚುನಾವಣೆಯ ಬಳಿಕ ನೋಡೋಣ.

* ಬಿ.ಎಸ್.ಯಡಿಯೂರಪ್ಪ ಅವರಪ್ಪನಾಣೆ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಈ ಹಿಂದೆ ಹೇಳಿದ್ದೀರಿ. ಈಗ ಯಾರಿಗೆ ಹೇಳುತ್ತೀರಿ?

ಹಳ್ಳಿಯಲ್ಲಿ ರೂಢಿಯಲ್ಲಿರುವ ಮಾತು ಅದು. ಅದು ಸಿದ್ಧಾಂತ ಅಲ್ಲ. ಈಗ ಅದನ್ನು ಯಾರಿಗೂ ಹೇಳಲ್ಲ. ಆ ಮಾತಿಗೆ ಅಷ್ಟೊಂದು ಮಹತ್ವ ನೀಡುವ ಅಗತ್ಯ ಇಲ್ಲ.

* ಕಳೆದ ವಿಧಾನಸಭಾ ಚುನಾವಣಾ ವೇಳೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಹೇಳಿದ್ದೀರಲ್ಲ?

ಅವರು ಸ್ವಂತ ಬಲದಿಂದ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಹೇಳಿದ್ದೆ. ಅವರು ಸ್ವಂತ ಬಲದಿಂದ ಮುಖ್ಯಮಂತ್ರಿ ಆಗಿಲ್ಲವಲ್ಲ.

* 28 ಕ್ಷೇತ್ರಗಳಲ್ಲಿ ಮೈತ್ರಿಕೂಟ ಎಷ್ಟು ಕ್ಷೇತ್ರಗಳಲ್ಲಿ ಗೆಲ್ಲಲಿದೆ?

ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲ್ಲಲಿದ್ದೇವೆ. ಅದು 21, 22, 23 ಆಗಬಹುದು ಅಥವಾ 28 ಕ್ಷೇತ್ರಗಳನ್ನೂ ಗೆಲ್ಲಬಹುದು.

* ಚಾಮುಂಡೇಶ್ವರಿಯಲ್ಲಿ ಜೆಡಿಎಸ್‌ನವರು ನಿಮ್ಮನ್ನು ಸೋಲಿಸಿದರು. ಬೆಂಗಳೂರು ಉತ್ತರದಲ್ಲಿ ಎಚ್‌.ಡಿ.ದೇವೇಗೌಡರು ಸ್ಪರ್ಧಿಸಿದರೆ ನಿಮ್ಮ ಶಿಷ್ಯರ ಮೂಲಕ ಗೆಲ್ಲಿಸುತ್ತೀರಾ? ಸೋಲಿಸುತ್ತೀರಾ?

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ನಿಲ್ಲುತ್ತೇನೆ ಎಂದು ದೇವೇಗೌಡರು ಹೇಳಿಲ್ಲ. ಈ ಕ್ಷೇತ್ರದಲ್ಲಿ ನಮ್ಮ ಐವರು ಶಾಸಕರು ಇದ್ದಾರೆ. ಇಲ್ಲಿ ನಮ್ಮ ಮತ ಪ್ರಮಾಣ ಹೆಚ್ಚು ಇದೆ. ಎರಡೂ ಪಕ್ಷಗಳು ಜತೆಗೂಡಿ ಹೋದಾಗ ಸೋಲಿಸುವ ಪ್ರಶ್ನೆಯೇ ಉದ್ಭವ ಆಗುವುದಿಲ್ಲ.

* ಎರಡು ಸಲ ನಿಮ್ಮನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದಾರಲ್ಲ. ಅದನ್ನು ಮರೆತುಬಿಟ್ಟಿದ್ದೀರಾ?

ಅದು ಅಪ್ರಸ್ತುತ. ಈಗ ಅವೆಲ್ಲ ಗೌಣ. ಈಗಿನ ರಾಜಕೀಯ ಸನ್ನಿವೇಶದಲ್ಲಿ ಕೋಮುವಾದಿ ಬಿಜೆಪಿಯನ್ನು ಸೋಲಿಸಬೇಕಿದೆ. ಹಿಂದಿನ ಘಟನೆಗಳನ್ನು ಮರೆತು ಕೋಮುವಾದಿ ಪಕ್ಷದ ವಿರುದ್ಧ ಹೋರಾಟ ಮಾಡಬೇಕಿದೆ.

* ಮೈತ್ರಿ ಸರ್ಕಾರದ ಐದು ಸಾಧನೆಗಳೇನು?

ಹಿಂದಿನ ಸರ್ಕಾರದ ಎಲ್ಲ ಕಾರ್ಯಕ್ರಮಗಳ ಮುಂದುವರಿಕೆ, ರೈತರ ಸಾಲ ಮನ್ನಾ, ಉತ್ತಮ ಆಡಳಿತ ಹಾಗೂ ಜನ‍ಪರ ಕಾರ್ಯಕ್ರಮ
ನೀಡಿದ್ದು ಸರ್ಕಾರದ ಸಾಧನೆಗಳು.

* ಸಚಿವರ ಕಚೇರಿ ಸಿಬ್ಬಂದಿ ಬಳಿ ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನೀವೇ ರಚನೆ ಮಾಡಿದ ಎಸಿಬಿ ಸಚಿವರಿಗೆ ನೋಟಿಸ್‌ ನೀಡಿದೆಯಲ್ಲ?

ನಾನು ರಚನೆ ಮಾಡಿದ ಎಸಿಬಿ ಸಚಿವರಿಗೆ ನೋಟಿಸ್‌ ನೀಡಬಾರದು ಎಂದೇನಾದರೂ ಇದೆಯಾ. ಸಚಿವರು ಆರೋಪಿ ಅಲ್ಲ. ಹೇಳಿಕೆ ಪಡೆಯಬೇಕು ಎಂಬ ಕಾರಣಕ್ಕೆ ನೋಟಿಸ್‌ ನೀಡಿದ್ದಾರೆ ಎಷ್ಟೇ.

* ಹಾಗಿದ್ದರೆ ಮೈತ್ರಿ ಸರ್ಕಾರದ ಕಾರ್ಯವೈಖರಿ ಬಗ್ಗೆ ನಿಮಗೆ ಬಹಳ ಸಮಾಧಾನ ಇದೆಯಾ?

ಬಹಳ ಎಂಬ ಪದವನ್ನು ಯಾಕೆ ಉಪಯೋಗ ಮಾಡುತ್ತೀರಿ. ಸರ್ಕಾರದ ಕಾರ್ಯವೈಖರಿ ಬಗ್ಗೆ ನನಗೆ ಸಮಾಧಾನ ಇದೆ. ಅದರಲ್ಲಿ ಬಹಳ, ಸ್ವಲ್ಪ ಎಂದೇನೂ ಇರುವುದಿಲ್ಲ.

* ಮೈತ್ರಿ ಸರ್ಕಾರದ ಲೋಪಗಳು ಯಾವುವು?

ಸರ್ಕಾರದ ಲೋಪಗಳು ಯಾವುದು ಇಲ್ಲ. ಮುಂದಿನ ದಿನಗಳ್ಲಲಿ ಮುಖಂಡರ ನಡುವೆ ಹೊಂದಾಣಿಕೆ ಆಗಲಿದೆ. .

* ಮೈತ್ರಿ ಸರ್ಕಾರದಲ್ಲಿ ಸಚಿವ ಎಚ್‌.ಡಿ.ರೇವಣ್ಣ ಹಸ್ತಕ್ಷೇಪ ಜಾಸ್ತಿಯಾಗಿದೆ ಎಂಬ ಆರೋಪ ಕೇಳಿಬರುತ್ತಿದೆಯಲ್ಲ?

ರೇವಣ್ಣ ಹಸ್ತಕ್ಷೇಪ ಮಾಡುವುದಿಲ್ಲ. ಆತ ಸ್ವಲ್ಪ ಆಕ್ರಮಣಕಾರಿ ಮನೋಭಾವದವ.

* ಲೋಕಸಭಾ ಚುನಾವಣೆಯಲ್ಲಿ ಮೈತ್ರಿಯಿಂದ ಯಾವ ಪಕ್ಷಕ್ಕೆ ಲಾಭ ಆಗಲಿದೆ?

ಮೈತ್ರಿಯಿಂದ ಎರಡೂ ಪಕ್ಷಗಳಿಗೆ ಲಾಭ ಆಗಲಿದೆ. ಕೆಲವು ಜಿಲ್ಲೆಗಳಲ್ಲಿ ಬಿಜೆಪಿ ನಮಗಿಂತ ಶೇ 2ರಿಂದ 3ರಷ್ಟು ಹೆಚ್ಚು ಮತ ಪಡೆದಿದೆ. ಅಲ್ಲಿ ಜೆಡಿಎಸ್‌ ಶೇ 10ರಿಂದ 12ರಷ್ಟು ಮತ ಪಡೆದಿದೆ. ಮೈತ್ರಿ ಮಾಡಿಕೊಂಡಾಗ ಆ ಮತ ನಮಗೆ ಬರುತ್ತದೆ. ಕೆಲವು ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿದ್ದೇವೆ. ಅಲ್ಲಿ ನಮ್ಮ ಮತ ಅವರಿಗೆ ಹೋಗಲಿದೆ. ಜೆಡಿಎಸ್‌ ಈ ಹಿಂದಿಗಿಂತ ಹೆಚ್ಚು ಕ್ಷೇತ್ರಗಳನ್ನು ಗೆದ್ದರೆ ನಮಗೆ ನಷ್ಟ ಇಲ್ಲ. ಬಿಜೆಪಿ 5–6 ಸ್ಥಾನಕ್ಕೆ ಇಳಿದರೆ ನಮಗೆ ಹೆಚ್ಚು ಲಾಭ.

* ನರೇಂದ್ರ ಮೋದಿ ಸರ್ಕಾರದ ಸಾಧನೆ ಯಾವುದು?

ಮೋದಿ ಸಾಧನೆ ಶೂನ್ಯ. 2014ರ ಲೋಕಸಭಾ ಚುನಾವಣೆಗೆ ಮುನ್ನ ನೀಡಿದ್ದ ಯಾವ ಪ್ರಮುಖ ಭರವಸೆಗಳನ್ನು ಈಡೇರಿಸಿಲ್ಲ. ಅವರು ಜನರ ದಾರಿ ತಪ್ಪಿಸಿದ್ದಾರೆ. ನಿರುದ್ಯೋಗ ಸಮಸ್ಯೆ, ರೈತರ ಆತ್ಮಹತ್ಯೆ, ನೋಟು ರದ್ದತಿಯ ‍ಪರಿಣಾಮಗಳ ಬಗ್ಗೆ ಚಕಾರ ಎತ್ತಿಲ್ಲ.

* ಚುನಾವಣೆಯಲ್ಲಿ ಹಣದ ಪಾತ್ರವನ್ನು ಗೌಣವಾಗಿಸುವ ಕುರಿತು ಎಲ್ಲ ಪಕ್ಷಗಳ ಮುಖಂಡರೂ ಮಾತನಾಡುತ್ತಾರೆ. ಆದರೆ, ವೆಚ್ಚ ಮಾತ್ರ ಹೆಚ್ಚುತ್ತಲೇ ಹೊರಟಿದೆಯಲ್ಲ?

ಈ ಸಮಸ್ಯೆಗೆ ಇರುವುದು ಒಂದೇ ಪರಿಹಾರ. ಅದೇ ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತಂದು ಚುನಾವಣಾ ವೆಚ್ಚವನ್ನೆಲ್ಲ ಸರ್ಕಾರವೇ ನೋಡಿಕೊಳ್ಳುವುದು. ಆಗ ಶೇ 90ರಷ್ಟು ಅಕ್ರಮ ವೆಚ್ಚ ನಿಯಂತ್ರಣಕ್ಕೆ ಬರುತ್ತದೆ. ಖರ್ಚು ಮಾಡುವ ಹೊಣೆಯನ್ನು ಈಗಿರುವಂತೆ ಅಭ್ಯರ್ಥಿಗೆ ಬಿಟ್ಟುಕೊಟ್ಟರೆ ಕಡಿವಾಣ ಹಾಕುವುದು ತುಂಬಾಕಷ್ಟ.

* ಕಾಂಗ್ರೆಸ್‌–ಜೆಡಿಎಸ್‌ ಜಂಟಿ ಪ್ರಚಾರ ನಡೆಸುತ್ತವೆಯೇ?

ಉಪಚುನಾವಣೆಯಲ್ಲಿ ಜಂಟಿ ಪ್ರಚಾರ ಮಾಡಿದ್ದೇವೆ. ಈಗಿನ ಸನ್ನಿವೇಶ ನೋಡಿಕೊಂಡು, ನಿರ್ಧಾರ ಮಾಡುತ್ತೇವೆ.

* ಈ ಸಲ ಮಹಿಳೆಯರಿಗೆ ಎಷ್ಟು ಟಿಕೆಟ್‌ ಕೊಡ್ತೀರಿ?

ಮಹಿಳೆಯರಿಗೆ ಇಷ್ಟೇ ಟಿಕೆಟ್‌ ಕೊಡ್ತೀವಿ ಅಂತ ಈಗಲೇ ಹೇಳಲು ಆಗುವುದಿಲ್ಲ. ಎಷ್ಟು ಅವಕಾಶ ನೀಡಲು ಸಾಧ್ಯವೋ ಅಷ್ಟನ್ನು ನೀಡುತ್ತೇವೆ.

* ಭಿನ್ನಾಭಿಪ್ರಾಯ ಉದ್ಭವಿಸಿದಾಗ ಸಿದ್ದರಾಮಯ್ಯ ಹೆಚ್ಚು ಪ್ರಸ್ತುತರಾಗುತ್ತಾರೆ ಎಂಬ ಅಭಿಪ್ರಾಯವಿದೆಯಲ್ಲ?

ನಾನು ಎಲ್ಲ ಸಂದರ್ಭದಲ್ಲೂ ರೆಲೆವೆಂಟ್‌ (ಪ್ರಸ್ತುತ). ಭಿನ್ನಾಭಿಪ್ರಾಯ ಇದ್ದಾಗ ಮಾತ್ರ ಅಲ್ಲ.

* ಮುಸ್ಲಿಮರಿಗೆ ಎಷ್ಟು ಟಿಕೆಟ್‌ ಕೊಡುತ್ತೀರಿ?

ಗೆಲ್ಲಲು ಸಾಧ್ಯವಿದ್ದಡೆ ಕೊಡ್ತೀವಿ. ಕಳೆದ ಸಲ 2 ಕಡೆ ಕೊಟ್ಟಿದ್ದೆವು. ಈ ಸಲವೂ ಕನಿಷ್ಠ ಅಷ್ಟು ಸ್ಥಾನಗಳನ್ನಾದರೂ ಕೊಡುವ ವಿಚಾರ ಇದೆ.

* ಲೋಕಸಭಾ ಚುನಾವಣೆ ಬಳಿಕ ಮತ್ತೆ ಯಡಿಯೂರಪ್ಪ ಅವರ ಪ್ರಯತ್ನ ಯಶಸ್ವಿಯಾಗುತ್ತಾ?

ಪದೇ ಪದೆ ವೈಫಲ್ಯ ಕಂಡರೂ ಯಾಕೆ ಆ ದುರಾಸೆಯನ್ನು ಮುಂದುವರಿಸುತ್ತಿದ್ದಾರೆಯೋ ನನಗಂತೂ ಗೊತ್ತಿಲ್ಲ. ಅವರಿಗೆ ಮೆಜಾರಿಟಿ ಇಲ್ಲದಿದ್ದರೂ ಸಿಎಂ ಆದ್ರು. ಯಾರು ಬರಲ್ಲ ಅಂತ ಮೊದಲೇ ಗೊತ್ತಿತ್ತು. ಸಿಂಗಲ್‌ ಲಾರ್ಜೆಸ್ಟ್‌ ಪಾರ್ಟಿ ಅಂತ ರಾಜ್ಯಪಾಲರ ಮೇಲೆ ಒತ್ತಡ ಹೇರಿ ಸಿ.ಎಂ. ಆದ್ರು. ಆದ್ರೆ ಮೆಜಾರಿಟಿ ಪ್ರೂವ್‌ ಮಾಡೋಕೆ ಆಗದೆ ರಾಜೀನಾಮೆ ಕೊಟ್ಟರು. ಅದು ಅವರ ಮೊದಲ ವೈಫಲ್ಯ. ಅದಾದ ಮೇಲೆ 10–20 ಬಾರಿಯಾದರೂ ಸರ್ಕಾರ ಬೀಳಿಸ್ತೀವಿ ಅಂದ್ರು. ಈಗ, ಇವತ್ತು, ನಾಳೆ ಅಂತ ಹೇಳ್ತಾ ಬಂದ್ರು. ಎಂಟು ಜನ ಬಂದ್ರು, 13 ಜನ ಬಂದ್ರು ಅಂತಾನೂ ಹೇಳುತ್ತಲೇ ಇದ್ದಾರೆ. ಅಧಿಕಾರಕ್ಕೆ ಬರುತ್ತೇನೆ ಎನ್ನುವುದು ಅವರ ಭ್ರಮೆ. ಕನಸು ಈಡೇ
ರಲ್ಲ. ಈ ಭ್ರಮೆಯಿಂದ ಅವರಿಗೆ ಜಾಸ್ತಿ ನಿರಾಸೆ ಆಗುತ್ತದೆ.

ದುಡ್ಡು ಕೊಟ್ಟು ಕೊಂಡುಕೊಳ್ಳುತ್ತೇವೆ ಎಂಬ ಭ್ರಮೆಯಲ್ಲಿ ಅವರಿದ್ದಾರೆ. ಎಲ್ಲರೂ ದುಡ್ಡಿಗೆ ಬಲಿ ಆಗುವುದಿಲ್ಲ. 30 ಕೋಟಿ ಕೊಡುತ್ತೇವೆ ಅಂದ್ರು, ಐದು ಕೋಟಿ ತಂದಿದ್ರು, ನಾನೇ ವಾಪಸ್‌ ಕಳುಹಿಸಿದೆ ಅಂತ ಶ್ರೀನಿವಾಸಗೌಡ್ರು ಹೇಳಿದರಲ್ಲ? ಈ ತರಹದ ರಾಜಕಾರಣದಿಂದ, ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಹೋದರೆ ರಾಜಕೀಯದ ಆರೋಗ್ಯ ಕೆಟ್ಟು ಹೋಗುತ್ತದೆ. ಹಾಗೊಂದು ವೇಳೆ ಅಧಿಕಾರಕ್ಕೆ ಬಂದರು ಎಂದಿಟ್ಟುಕೊಳ್ಳೋಣ. ಅವರ ಸರ್ಕಾರ ಉಳಿಯಲ್ಲ

*ದೆಹಲಿಯಲ್ಲಿ ಕನ್ನಡಿಗರ ಧ್ವನಿ ಮೊಳಗಲಿದೆ ಎಂದು ಕುಮಾರಸ್ವಾಮಿ ಹೇಳಿದ ಅರ್ಥವೇನು? ದೇವೇಗೌಡರು ಪ್ರಧಾನಿ ಆಗುವ ಸಾಧ್ಯತೆ ಇದೆ ಎಂದೇ?

ರಾಹುಲ್‌ ಗಾಂಧಿ ಅವರೇ ನಮ್ಮ ಮುಂದಿನ ಪ್ರಧಾನಿ ಎಂದು ದೇವೇಗೌಡರೇ ಹೇಳಿರುವ ಕಾರಣ ಈ ಪ್ರಶ್ನೆ ಉದ್ಭವಿಸುವುದಿಲ್ಲ. ಮೈತ್ರಿಯಲ್ಲಿ ಹಲವು ಪ್ರಾದೇಶಿಕ ಪಕ್ಷಗಳು ಇರುವುದರಿಂದ ಕೆಲವು ನಾಯಕರಿಗೆ ಪ್ರಧಾನಿಯಾಗುವ ಆಸೆ ಇದ್ದಿರಬಹುದು. ಆದರೆ, ಗೌಡರು ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದಾರೆ.

* ನಿಮ್ಮ ಪ್ರಕಾರ, ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಎಷ್ಟು ಸ್ಥಾನ ಗಳಿಸಲಿದೆ? ಕಾಂಗ್ರೆಸ್‌ಗೆ ಸಿಗುವ ಸ್ಥಾನಗಳೆಷ್ಟು?

ಬಿಜೆಪಿ ಮೈತ್ರಿಕೂಟ 200ರ ಸಂಖ್ಯೆಯನ್ನು ದಾಟಲ್ಲ. ಕಾಂಗ್ರೆಸ್‌ ಪಕ್ಷ 150 ಪ್ಲಸ್‌ ಸ್ಥಾನ ಗೆಲ್ಲಲಿದೆ.

* ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೀರಾ?

ನಾನು ಲೋಕಸಭಾ ಚುನಾವಣೆಗೆ ನಿಲ್ಲುವುದಿಲ್ಲ. ಅದನ್ನು ಹೈಕಮಾಂಡ್‌ ಸಹ ಬಯಸುವುದಿಲ್ಲ. ನಾನು ಲೋಕಸಭಾ ಮೆರಿಟಿಯಲ್‌ ಹೌದು. ಆದರೆ, ನನಗಿಂತ ಸಮರ್ಥ ಅಭ್ಯರ್ಥಿಗಳು ಪಕ್ಷದಲ್ಲಿದ್ದಾರೆ.

* ಹಾಗಿದ್ದರೆ ದೇವೇಗೌಡರು ಮಾತ್ರ ಲೋಕಸಭೆಗೆ ಹೋದರೆ ಸಾಕಾ?

ಅವರು ಇದ್ದಾರೆ ಪಾಪ. ನಮ್ಮ ರಾಜಕಾರಣ ಕರ್ನಾಟಕಕ್ಕೆ ಸೀಮಿತ. ಹಾಗಾಗಿ, ನಾನು ಚುನಾವಣೆಗೆ ನಿಲ್ಲಲ್ಲ. ಗೌಡರು ಮತ್ತೆ ವಿಧಾನಸಭೆಗೆ ಬರಲು ಆಗುವುದಿಲ್ಲ.

* ಪ್ರಿಯಾಂಕಾ ಗಾಂಧಿ ಪಕ್ಷಕ್ಕೆ ಬಂದಿದ್ದರಿಂದ ಅನುಕೂಲ ಆಗುವುದೇ? ರಾಜ್ಯದಲ್ಲಿ ಪ್ರಚಾರ ನಡೆಸುವಂತೆ ಅವರನ್ನು ಕೋರುತ್ತೀರಾ?

ಪ್ರಿಯಾಂಕಾ ಗಾಂಧಿ ಬಗ್ಗೆ ಜನರಿಗೆ ಒಲವಿದೆ. ಅನುಕೂಲ ಆಗುವ ಸಾಧ್ಯತೆ ಇದೆ. ಈಗಾಗಲೇ ಗುಜರಾತ್‌ನಲ್ಲಿ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದಾರೆ. ರಾಜ್ಯದಲ್ಲೂ ಬರುವ ಸಾಧ್ಯತೆ ಇದೆ.

* ಪ್ರಿಯಾಂಕಾ ಅವರು ರಾಜ್ಯದಿಂದ ಸ್ಪರ್ಧಿಸುವ ಸಾಧ್ಯತೆ ಇದೆಯೇ?
ಇಲ್ಲ, ಅಂತಹ ಸಾಧ್ಯತೆ ಇಲ್ಲ. ನಾವೂ ಕೇಳಿಲ್ಲ, ಅವರೂ ಬರುವುದಾಗಿ ಹೇಳಿಲ್ಲ.

* ಒಂದುವೇಳೆ ಅಭ್ಯರ್ಥಿಗಳ ಕೊರತೆ ಎದುರಾದರೆ ಅವರು ರಾಜ್ಯದಿಂದ ಸ್ಪರ್ಧಿಸಬಹುದೇ?

ಕಾಂಗ್ರೆಸ್‌ ಪಕ್ಷಕ್ಕೆ ಅಭ್ಯರ್ಥಿಗಳ ಕೊರತೆಯೇ ಇಲ್ಲ. ಹಾಗೆ ನೋಡಿದರೆ ಬಿಜೆಪಿಗೆ ಎಲ್ಲ ಕಡೆಗಳಲ್ಲಿ ಅಭ್ಯರ್ಥಿಗಳು ಇಲ್ಲ. ನಮ್ಮಲ್ಲಿಪ್ರತಿ ಕ್ಷೇತ್ರಕ್ಕೂ 5–6 ಸ್ಪರ್ಧಿಗಳು ಇದ್ದಾರೆ. ಅದೇ ನಮಗೀಗ ತೊಂದರೆ. ಏಕೆಂದರೆ, ಅವಕಾಶ ಸಿಗದವರಲ್ಲಿ ಅಸಮಾಧಾನ ಮೂಡುತ್ತದೆ.

*ಪುಲ್ವಾಮಾ ಘಟನೆ ಬಳಿಕ ಬಿಜೆಪಿ ಪರ ವಾತಾವರಣ ನಿರ್ಮಾಣವಾಗಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರಲ್ಲ?

ಬಿಜೆಪಿ ನಾಯಕರು ಈ ವಿಷಯದಲ್ಲಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಅವರಿಗೆ ಸಂಪೂರ್ಣ ನಿರಾಸೆ ಆಗಲಿದೆ.

*ಸರ್ಜಿಕಲ್‌ ಸ್ಟ್ರೈಕ್‌ ಬಗ್ಗೆ ನಿಮ್ಮ ಅಭಿಪ್ರಾಯ?

ಯಾವುದೇ ಪಕ್ಷ ಭದ್ರತಾ ವಿಚಾರದ ಬಗ್ಗೆ ರಾಜಕಾರಣ ಮಾಡಬಾರದು. ಕಾಂಗ್ರೆಸ್‌ ಸರ್ಕಾರ ಮೂರು ಸಲ ಪಾಕಿಸ್ತಾನವನ್ನು ಸೋಲಿಸಿತ್ತು. ಅದಕ್ಕೆ ಮತ ನೀಡಿ ಎಂದು ಕೇಳಲು ಆಗುತ್ತದೆಯೇ.

ಬಿಜೆಪಿಯವರು ಕ್ರೂರಿಗಳು

‘ಬಿಜೆಪಿಯ ಹಿಂದುತ್ವದ ಪ್ರತಿಪಾದನೆಯನ್ನು ಕಾಂಗ್ರೆಸ್‌ ಹೇಗೆ ಎದುರಿಸಲಿದೆ’ ಎಂದು ಫೇಸ್‌ಬುಕ್‌ ಲೈವ್‌ ವೀಕ್ಷಕರೊಬ್ಬರ ಪ್ರಶ್ನೆಗೆ ಅವರು ಅಷ್ಟೇ ತೀಕ್ಷ್ಣ ಉತ್ತರ ಕೊಟ್ಟರು. ‘ಹಿಂದುತ್ವದ ಪರ ಕೆಲವರು ಇದ್ದಾರೆ ಎನ್ನುವುದನ್ನು ನಾನು ಅಲ್ಲಗಳೆಯುವುದಿಲ್ಲ. ಆದರೆ, ಬಿಜೆಪಿಯವರು ಪ್ರಚೋದನೆ ಮಾಡುವುದರಿಂದ ಅದೊಂದು ಅಫೀಮಿನಂತೆ ಆಗುತ್ತಿದೆ. ನಾನೂ ಒಬ್ಬ ಹಿಂದೂ. ಮನುಷ್ಯತ್ವ ಇದ್ದರಷ್ಟೇ ಅದು ಧರ್ಮ. ಇಲ್ಲದಿದ್ದರೆ ಅದು ಧರ್ಮವೇ ಅಲ್ಲ. ಮನುಷ್ಯತ್ವ ಇಲ್ಲದ ಹಿಂದುತ್ವವನ್ನು ಅವರು ಪ್ರತಿಪಾದನೆ ಮಾಡುತ್ತಿದ್ದಾರೆ. ಜೀವಪರ ಇಲ್ಲದಿರುವುದು ಅದೆಂಥಾ ಧರ್ಮ’ ಎಂದು ಕೇಳಿದರು. ‘ಕೇಂದ್ರ ಸಚಿವರಂಥ ಸಾಂವಿಧಾನಿಕ ಸ್ಥಾನದಲ್ಲಿರುವ ಅನಂತಕುಮಾರ ಹೆಗಡೆ, ಹೊಡಿ, ಬಡಿ, ಕೊಲೆ ಮಾಡು ಅಂದರೆ ಅದನ್ನು ಹಿಂದುತ್ವ ಅನ್ನಬೇಕೇ? ಬಿಜೆಪಿಯವರು ಮನುಷ್ಯತ್ವ ಪರ ಇರುವವರಲ್ಲ. ಅವರು ಕ್ರೂರಿಗಳು’ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.