ಬೆಂಗಳೂರು: ಪಕ್ಷಾಂತರ ಮಾಡುವವರಿಗೆ ಮುಂಬೈನಲ್ಲಿ ಪೊಲೀಸ್ ರಕ್ಷಣೆ ನೀಡಲಾಗುತ್ತಿದೆ. ಇದು ಯಾವ ಪ್ರಜಾಪ್ರಭುತ್ವ? ನಮ್ಮ ಪಕ್ಷದ ಶಾಸಕರ ಜತೆ ನಾವೇ ಮಾತನಾಡುವಂತಿಲ್ಲ, ಇದು ಎಂಥ ಪ್ರಜಾಪ್ರಭುತ್ವ? ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪ್ರಶ್ನಿಸಿದರು.
ವಿಧಾನಸಭೆಯಲ್ಲಿ ವಿಶ್ವಾಸಮತ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು,ನಮಗೂ ಇದಕ್ಕೂ ಸಂಬಂಧ ಇಲ್ಲ ಎಂದು ಬಿಜೆಪಿ ಮತ್ತು ಯಡಿಯೂರಪ್ಪ ಹೇಳುತ್ತಿದ್ದಾರೆ. ಯಾಕೆ ಹೀಗೆ ಸುಳ್ಳು ಹೇಳುತ್ತೀರಿ? ನಾವೇ ಇದನ್ನು ಮಾಡುತ್ತಿದ್ದೇವೆ ಎಂದು ಬಹಿರಂಗವಾಗಿ ಹೇಳಿಬಿಡಿ. ಬಿಜೆಪಿಯವರೇ ಕುದುರೆ ವ್ಯಾಪಾರ ಮಾಡಿಸುತ್ತಿದ್ದಾರೆ ಎಂಬುದು ರಾಜ್ಯದ ಶೇ 99ರಷ್ಟು ಜನರಿಗೆ ಗೊತ್ತಿದೆ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಮಾತಿನ ಅಕ್ಷರರೂಪ ಇಲ್ಲಿದೆ...
ಸರ್ಕಾರ ಬರುತ್ತೆ, ಹೋಗುತ್ತೆ. ಆದರೆ ಇದು ಪ್ರಜಾಪ್ರಭುತ್ವದ ಅಳಿವು–ಉಳಿವಿನ ಪ್ರಶ್ನೆ. ಈ ಕುರಿತು ಚರ್ಚೆಯಾಗಬೇಕು. ಪ್ರಜಾಪ್ರಭುತ್ವವನ್ನು ಕೊಲೆ ಮಾಡಿ ಅಧಿಕಾರಕ್ಕೆ ಬರುತ್ತೇವೆ, ಅಧಿಕಾರದಲ್ಲಿರುತ್ತೇವೆ ಎಂದರೆ ಅದು ದೀರ್ಘ ಕಾಲ ನಡೆಯದು. ಒಂದು ವೇಳೆ ಯಡಿಯೂರಪ್ಪ ಸರ್ಕಾರ ರಚಿಸಿದರೂ ಆರು ತಿಂಗಳೋ ಒಂದು ವರ್ಷವೋ ಬಾಳಿಕೆ ಬರಲಿದೆ ಅಷ್ಟೆ.
ಪಕ್ಷಾಂತರ ನಿಷೇಧ ಕಾಯ್ದೆಯನ್ನು ಕೇವಲ ಕಾಂಗ್ರೆಸ್ ಮಾತ್ರವೇ ರೂಪಿಸಲಿಲ್ಲ.ಎಲ್ಲ ಪಕ್ಷಗಳೂ ಅದನ್ನು ಸ್ವಾಗತಿಸಿದ್ದವು. ಎಲ್ಲ ಪಕ್ಷಗಳ ಆಶಯದಂತೆಯೇ ಕಾಯ್ದೆ ರೂಪಿಸಲಾಗಿತ್ತು. ಶಾಸಕರ ರಾಜೀನಾಮೆ ಸ್ವಯಂಪ್ರೇರಿತವೋ ಅಥವಾ ಒತ್ತಡದಿಂದಲೋ ಎಂಬುದನ್ನು ಸಭಾಧ್ಯಕ್ಷರೇ ವಿಚಾರಣೆಯಿಂದ ತೀರ್ಮಾನಿಸಬೇಕು. ಶಾಸಕರ ಅನರ್ಹತೆ ವಿಚಾರದಲ್ಲಿ ಯಾವ ನ್ಯಾಯಾಲಯವೂ ಮಧ್ಯಪ್ರವೇಶಿಸದು. ಹಾಗಾಗಿಯೇ ಮೊನ್ನೆ ಸುಪ್ರೀಂಕೋರ್ಟ್ ಆ ವಿಚಾರವನ್ನು ಸಭಾಧ್ಯಕ್ಷರಿಗೇ ಬಿಟ್ಟುಬಿಟ್ಟಿದೆ
ನೀವು (ಬಿಜೆಪಿ)104 ಜನ ಇದ್ದೀರಿ. ಪ್ರಬಲ ವಿರೋಧ ಪಕ್ಷವಾಗಿ ನೀವು ಕಾರ್ಯನಿರ್ವಹಿಸಬಹುದಾಗಿತ್ತು. ಆದರೆ ಸಂವಿಧಾನ ವಿರೋಧಿ ಮಾರ್ಗದ ಮೂಲಕ ಸರ್ಕಾರ ರಚನೆಗೆ ಮುಂದಾಗಿದ್ದೀರಿ.ಗೋವಾದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ಇತ್ತು. ಆದರೆ, ನಮ್ಮನ್ನೇಕೆ ಸರ್ಕಾರ ರಚನೆಗೆ ಆಹ್ವಾನಿಸಲಿಲ್ಲ? ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ.
2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಲೂ ಅವರಿಗೆ ಬಹುಮತ ಇರಲಿಲ್ಲ. ಪಕ್ಷೇತರರ ಬೆಂಬಲ ಪಡೆದು ಸರ್ಕಾರ ರಚಿಸಿದರು. ನಂತರ ಆಪರೇಷನ್ ಕಮಲ ಮಾಡಿದರು.ಕರ್ನಾಟಕದಲ್ಲಿ ಈ ಹಿಂದೆಯೂ ಮೂರ್ನಾಲ್ಕು ಬಾರಿ ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು. ಕೇಂದ್ರದಲ್ಲಿಯೂ ಆಗಿದೆ.
ರಾಜಕೀಯಕ್ಕೆ ಬನ್ನಿ ಎಂದು ನಮ್ಮನ್ನು ಯಾರೂ ಕರೆದಿಲ್ಲ. ನಾವಾಗಿಯೇ ರಾಜಕೀಯಕ್ಕೆ ಬಂದೆವು. ಇದೊಂದು ವೃತ್ತಿಯೂ ಅಲ್ಲ. ರಾಜಕೀಯ ಎಂಬುದು ಪ್ರವೃತ್ತಿ. ನಾನು ವೃತ್ತಿಯಲ್ಲಿ ವಕೀಲ. ಹಾಗೆಂದು ರಾಜಕೀಯಕ್ಕೆ ಬಂದ ಮೇಲೆ ತತ್ವ, ಸಿದ್ಧಾಂತ ಇರಬೇಕು. ಅದಕ್ಕೆ ಬದ್ಧರಾಗಿರಬೇಕು. ನಾನು ಸಂವಿಧಾನವನ್ನು ನಂಬುತ್ತೇನೆ. ಎಲ್ಲ ಜನರಿಗೂ ಸಾಮಾಜಿಕ ನ್ಯಾಯ ದೊರೆಯಬೇಕು ಎಂಬುದು ನನ್ನ ಆಶಯ
ಅತಂತ್ರ ಫಲಿತಾಂಶ ಬಂದ ಕಾರಣ ಹೈಕಮಾಂಡ್ ಸೂಚನೆ ಮೇರೆಗೆ ಜೆಡಿಎಸ್ ಜತೆ ಸರ್ಕಾರ ರಚಿಸುವ ತೀರ್ಮಾನ ಕೈಗೊಂಡಿದ್ದೆವು. 2018ರ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಜನ ಬಹುಮತ ಕೊಟ್ಟಿರಲಿಲ್ಲ. ನಮಗೆ ಬಿಜೆಪಿಗಿಂತ ಕಡಿಮೆ ಸ್ಥಾನ ಬಂದಿತ್ತು. ಆದರೆ ಮತ ಹಂಚಿಕೆ ಪ್ರಮಾಣ ನಮಗೆ ಶೇ 38.14ರಷ್ಟಿತ್ತು. ಇದು 2013ಕ್ಕಿಂತ (ಶೇ 36.6) ಹೆಚ್ಚು. ಬಿಜೆಪಿ ಶೇ 36ರಷ್ಟು ಮತ್ತು ಜೆಡಿಎಸ್ ಶೇ 18ರಷ್ಟು ಮತ ಪಡೆದಿದ್ದವು.
ಬಿ.ಎಸ್.ಯಡಿಯೂರಪ್ಪನವರಿಗೆ ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ಕೊಟ್ಟರು. ಬಹುಮತ ಸಾಬೀತಿಗೆ 15 ದಿನ ಕಾಲಾವಕಾಶವನ್ನೂ ಕೊಟ್ಟರು. ಆದರೆ, ಒಂದೇ ದಿನದಲ್ಲಿ ಬಹುಮತ ಸಾಬೀತುಪಡಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು. ವಿಪರ್ಯಾಸವೆಂದರೆ ನಮಗೆ ಮತಹಂಚಿಕೆ ಪ್ರಮಾಣ ಹೆಚ್ಚಿತ್ತು, ಸ್ಥಾನ ಕಡಿಮೆ ಇತ್ತು. ಆದರೆ ಬಿಜೆಪಿಗೆ ಮತಹಂಚಿಕೆ ಪ್ರಮಾಣ ಕಡಿಮೆ ಇತ್ತು, ಆದರೆ ಸ್ಥಾನ ಹೆಚ್ಚಿತ್ತು. ಮುಂದೆ ಏನಾಯಿತು, ಈಗ ಏನಾಗುತ್ತಿದೆಎಂಬುದು ಎಲ್ಲರಿಗೂ ಗೊತ್ತು.
‘ಪ್ರಜಾವಾಣಿ’ ಸುದ್ದಿ, ಬರಹಗಳಲ್ಲಿ ರಾಜಕೀಯ ಬೆಳವಣಿಗೆಗಳ ಸಮಗ್ರ ನೋಟ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.