ADVERTISEMENT

ಸಿದ್ದರಾಮಯ್ಯ ಕೂಡ ಬಿಜೆಪಿ ಫಲಾನುಭವಿಯೇ: ಶಾಸಕ ಆರ್. ಅಶೋಕ್‌

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2023, 12:48 IST
Last Updated 11 ಸೆಪ್ಟೆಂಬರ್ 2023, 12:48 IST
<div class="paragraphs"><p>ಆರ್. ಅಶೋಕ್‌</p></div>

ಆರ್. ಅಶೋಕ್‌

   

ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷಾಂತರಿ. ಅವರೂ ಬಿಜೆಪಿಯ ಫಲಾನುಭವಿಯೇ. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದು ಬಿಜೆಪಿ ಬೆಂಬಲದಿಂದಲೇ’ ಎಂದು ಶಾಸಕ ಆರ್. ಅಶೋಕ್‌ ಟೀಕಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಜನತಾ ಪಕ್ಷ, ನಂತರ ಜನತಾ ದಳದಲ್ಲಿದ್ದರು. ಈಗ ಕಾಂಗ್ರೆಸ್‌ನಲ್ಲಿದ್ದಾರೆ. ಯಾವ ಪಕ್ಷದಲ್ಲಿ ಅಧಿಕಾರ ಸಿಗುತ್ತದೆಯೋ ಅಲ್ಲಿಗೆ ಹೋಗುತ್ತಾರೆ. ಮುಂದೆ ಎಲ್ಲಿ ಹೋಗುತ್ತಾರೆಯೋ ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದನ್ನು ಯಾರಿಂದಲೂ ತಡೆಯಲಾಗದು. ಈ ಬಾರಿ ಹೇಗೋ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಈಗ ಚುನಾವಣೆ ನಡೆದರೂ ಸಿದ್ದರಾಮಯ್ಯಗೆ ಜನರು ಮತ ಹಾಕುವುದಿಲ್ಲ’ ಎಂದರು.

‘ವಿರೋಧಪಕ್ಷದ ನಾಯಕನ ಆಯ್ಕೆಯನ್ನು ಸಿದ್ದರಾಮಯ್ಯ ಮಾಡುತ್ತಾರಾ? ಯಾವಾಗ, ಹೇಗೆ ಮಾಡಬೇಕು ಎನ್ನುವುದನ್ನು ನಾವು ತೀರ್ಮಾನಿಸುತ್ತೇವೆ. ಡಿ.ಕೆ. ಶಿವಕುಮಾರ್‌ ಹಾಗೂ ಬಿ.ಕೆ. ಹರಿಪ್ರಸಾದ್ ನಿತ್ಯವೂ ಪಂಚೆ, ವಾಚ್ ಬಗ್ಗೆ ಮಾತನಾಡುತ್ತಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸದ ಮುಖ್ಯಮಂತ್ರಿ ಬಿಜೆಪಿ ಬಗ್ಗೆ ಮಾತ್ರ ಪ್ರತಿಕ್ರಿಯಿಸುತ್ತಾರೆ. ಹಾಳಾಗಿರುವುದು ಯಾವ ಪಕ್ಷ ಎಂಬುದು ಇದರಿಂದಲೇ ಗೊತ್ತಾಗುತ್ತದೆ’ ಎಂದರು.

ಬಿಜೆಪಿ– ಜೆಡಿಎಸ್ ಮೈತ್ರಿ ವಿಚಾರವಾಗಿ ಕಾಂಗ್ರೆಸ್‌ನವರು ಟೀಕಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಜೆಡಿಎಸ್ ಜೊತೆ ಕಾಂಗ್ರೆಸ್‌ನವರೂ ಈ ಹಿಂದೆ ಹೊಂದಾಣಿಕೆ ಮಾಡಿಕೊಂಡಿದ್ದರು. ಆಗ ಜೆಡಿಎಸ್‌ ಒಳ್ಳೆಯದು. ಈಗ ಒಳ್ಳೆಯದಲ್ಲವೇ? ಇವರದ್ದು ದ್ವಿಮುಖ ನೀತಿ. ನಾವು ಹೊಂದಾಣಿಕೆಯಾದರೆ ಕಾಂಗ್ರೆಸ್ ಒಂದು ಸ್ಥಾನವನ್ನೂ ಗೆಲ್ಲುವುದಿಲ್ಲ’ ಎಂದು ಹೇಳಿದರು.

‘ಕಾವೇರಿ ವಿಷಯದಲ್ಲಿ ಕೇಂದ್ರಕ್ಕೆ ನಿಯೋಗ ಹೋಗೋಣ ಎಂದು ನಮ್ಮನ್ನು ಕರೆದೇ ಇಲ್ಲ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಬೈಯಲಾಗದೇ ನಮ್ಮ ವಿರುದ್ಧ ಟೀಕಿಸುತ್ತಾರೆ. ನೀರು ಹರಿಸುವುದಿಲ್ಲ ಎಂದು ಸರ್ವಪಕ್ಷ ಸಭೆಯಲ್ಲಿ ಹೇಳಿದ್ದರು. ಆದರೆ, ನೀರು ನೀಡಿದ್ದಾರೆ. ಕೊಟ್ಟ ಮಾತಿನಂತೆ ನಡೆಯಲಿಲ್ಲ. ನ್ಯಾಯಮಂಡಳಿಯಲ್ಲಿ ಸಮರ್ಥ ವಾದ ಮಂಡಿಸುವಲ್ಲೂ ವಿಫಲವಾಗಿ ರಾಜ್ಯದ ಜನಕ್ಕೆ ಮೋಸ ಮಾಡಿದ್ದಾರೆ. ತಮಿಳುನಾಡನ್ನು ಎದುರು ಹಾಕಿಕೊಳ್ಳಲು ಕಾಂಗ್ರೆಸ್ನವರಿಗೆ ಧೈರ್ಯವಿಲ್ಲ’ ಎಂದು ಟೀಕಿಸಿದರು.

‘ಮೈತ್ರಿ ವಿಚಾರವಾಗಿ ಕೇಂದ್ರದ ಬಿಜೆಪಿ ನಾಯಕರು ಎಚ್‌.ಡಿ. ದೇವೇಗೌಡರು ಮತ್ತು ಎಚ್‌.ಡಿ. ಕುಮಾರಸ್ವಾಮಿ ಜೊತೆ ಮಾತನಾಡಿರುವುದು ನಿಜ. ಆಗಲೇ ಕಾಂಗ್ರೆಸ್‌ನವರು ದೆವ್ವ ಬಂದವರ ರೀತಿ ಆಡುತ್ತಿದ್ದಾರೆ, ಅವರಿಗೆ ಭಯ ಶುರುವಾಗಿದೆ’ ಎಂದು ವ್ಯಂಗ್ಯವಾಡಿದರು.

‘ಕಾರ್ಯಕರ್ತರು ಹಾಗೂ ನಾವು ಹೊಂದಾಣಿಕೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದೇವೆ. ಸೀಟು ಹಂಚಿಕೆ ಬಗ್ಗೆ ಕೇಂದ್ರದ ನಾಯಕರು ತೀರ್ಮಾನಿಸುತ್ತಾರೆ. ಮೈತ್ರಿಯಾದರೆ ಒಳ್ಳೆಯದು ಎಂಬ ಅಭಿಪ್ರಾಯ ಎಲ್ಲ ಸಭೆಗಳಲ್ಲೂ ವ್ಯಕ್ತವಾಗಿದೆ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.