ಬೆಂಗಳೂರು: ಸಿದ್ಧಾರ್ಥ ಅವರು 50 ಸಾವಿರ ಮಂದಿಗೆ ಉದ್ಯೋಗ ಕೊಟ್ಟ ಉದ್ಯಮಿ. ಅವರು ವ್ಯಕ್ತಿಯಲ್ಲ, ದೇಶದ ಆಸ್ತಿ. ಅವರ ನಾಪತ್ತೆ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಶಾಸಕ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.
ಸಿದ್ಧಾರ್ಥ ನಾಪತ್ತೆಯಾದ ವಿಚಾರ ತಿಳಿಯುತ್ತಲೇ ಎಸ್.ಎಂ. ಕೃಷ್ಣ ಅವರ ನಿವಾಸಕ್ಕೆ ಆಗಮಿಸಿದ ಡಿ.ಕೆ ಶಿವಕುಮಾರ್, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಮಂಗಳೂರು ಸಮೀಪ ಅವರು ನಿಗೂಢವಾಗಿ ನಾಪತ್ತೆಯಾಗಿರುವ ವಿಷಯ ಕೇಳಿ ನನಗೆ ಆಘಾತವಾಗಿದೆ. ಅವರ ಕಣ್ಮರೆ ಬಹಳ ನಿಗೂಢವಾಗಿದೆ. ಅವರು ಕಾಣೆಯಾಗಿದ್ದಾರೋ ಇಲ್ಲವೇ ಯಾರಾದರೂ ಕರೆದೊಯ್ದಿದ್ದಾರೋ ನನಗೆ ಗೊತ್ತಿಲ್ಲ. ಪ್ರಕರಣ ತನಿಖೆಯಾಗಬೇಕು.ಅವರ ಹುಡುಕಾಟಕ್ಕೆ ಎಲ್ಲರ ನೆರವು ಸಿಗುತ್ತಿದೆ. ಮುಖ್ಯಮಂತ್ರಿಗಳೂ ಇಲ್ಲಿಗೆ ಬಂದು ಕೃಷ್ಣ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಸೂಕ್ತ ತನಿಖೆ ನಡೆದರಷ್ಟೇ ಕಣ್ಮರೆಯ ಕಾರಣ ತಿಳಿಯಬಹುದು,’ ಎಂದರು.
‘ತೆರಿಗೆ ಅಧಿಕಾರಿಗಳ ಕಿರುಕುಳದಿಂದ ಅವರು ಬೇಸರಗೊಂಡಿದ್ದರೇ?’ ಎಂಬ ಮಾಧ್ಯಮಗಳ ಪ್ರಶ್ನೆಗೆ ಡಿ.ಕೆ. ಶಿವಕುಮಾರ್, ‘ಅದರ ಬಗ್ಗೆ ನಾನೇನೂ ಹೇಳುವುದಿಲ್ಲ,’ ಎಂದರು. ಭಾನುವಾರವಷ್ಟೇ ನನಗೆ ಕರೆ ಮಾಡಿದ್ದರು ಎಂದೂ ತಿಳಿಸಿದರು.
ಆತ್ಮಹತ್ಯೆ ಮಾಡಿಕೊಳ್ಳುವಂಥವರಲ್ಲ
ಸಾಹೇಬರು ಯಾವತ್ತೂ ತಲೆಬಿಸಿ ಮಾಡಿಕೊಂಡಿದ್ದನ್ನು ನಾವು ನೋಡಿಯೇ ಇಲ್ಲ. ಅವರು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಅವರು ಎಲ್ಲೋ ಇದ್ದಾರೆ. ಸಂತೋಷದಿಂದ ಇದ್ದಾರೆ ಎನಿಸುತ್ತದೆ ಎಂದು ಸಿದ್ಧಾರ್ಥ ಅವರ ಮನೆಕೆಲಸದ ಮೂವರು ಮಹಿಳೆಯರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.