ADVERTISEMENT

ಆರ್ಥಿಕ ಮುಗ್ಗಟ್ಟಿನಿಂದ ಎಸ್‌.ಎಂ.ಕೃಷ್ಣ ಅಳಿಯ ಸಿದ್ದಾರ್ಥ ಆತ್ಮಹತ್ಯೆ?

ಕಂಪೆನಿಯ ಮುಖ್ಯ ಹಣಕಾಸು ಅಧಿಕಾರಿಗೆ ಕೊನೆಯ ಕರೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 10:52 IST
Last Updated 30 ಜುಲೈ 2019, 10:52 IST
   

ಮಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ, ಉದ್ಯಮಿ ವಿ.ಜಿ.ಸಿದ್ದಾರ್ಥ ಹೆಗ್ಡೆ ಆರ್ಥಿಕ ಮುಗ್ಗಟ್ಟಿನಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಬಲವಾಗುತ್ತಿದೆ.

ಅವರು ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದಾರೆ. ತಮ್ಮ ಒಡೆತನದ ಕೆಫೆ ಕಾಫಿ ಡೇ ಕಂಪೆನಿಯ ಮುಖ್ಯ ಹಣಕಾಸು ಅಧಿಕಾರಿ ಜಾವೇದ್ ಎಂಬುವವರಿಗೆ ಸಿದ್ದಾರ್ಥ ಕೊನೆಯ ಕರೆ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ.

ಮೊಬೈಲ್ ಸ್ವಿಚ್ ಆಫ್ ಆಗುವ‌ ಮುನ್ನ ಕೊನೆಯ ಕರೆಯನ್ನು ಜಾವೇದ್ ಅವರಿಗೆ ಮಾಡಿದ್ದಾರೆ. ಕಂಪೆನಿಯ ಹಣಕಾಸು ವಿಚಾರಗಳ ಕುರಿತು ಅವರೊಂದಿಗೆ ಸುದೀರ್ಘವಾಗಿ ಮಾತನಾಡಿದ್ದಾರೆ. ಆ ಬಳಿಕವೇ ಸಿದ್ದಾರ್ಥ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ಸುಮಾರು ₹ 3,000 ಕೋಟಿಯಷ್ಟು ಆದಾಯ ತೆರಿಗೆ ಬಾಕಿ ಪಾವತಿಸಬೇಕಿದೆ. ಈ ಸಂಬಂಧ ಹಲವು ಬಾರಿ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗಿತ್ತು. ಬೃಹತ್ ಮೊತ್ತದ ಸಾಲ ಕೋರಿ ಸಿದ್ಧಾರ್ಥ್ ಖಾಸಗಿ ಹಣಕಾಸು ಕಂಪೆನಿಯೊಂದಕ್ಕೆ ಅರ್ಜಿ ಸಲ್ಲಿಸಿದ್ದರು. ಇತ್ತೀಚೆಗೆ ಅವರ ಅರ್ಜಿಯನ್ನು ಕಂಪೆನಿ ತಿರಸ್ಕರಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಿನಿಂದ ಸಕಲೇಶಪುರಕ್ಕೆ ಹೋಗುವುದಾಗಿ ಹೊರಟಿದ್ದ ಸಿದ್ದಾರ್ಥ, ಮಧ್ಯದಲ್ಲಿ ಮಾರ್ಗ ಬದಲಿಸಿ ಮಂಗಳೂರಿಗೆ ಬಂದಿದ್ದರು. ಪಂಪ್ ವೆಲ್ ಬಳಿ ಬಂದಾಗ ಉಳ್ಳಾಲ ಕಡೆಗೆ ಹೋಗುವಂತೆ ಚಾಲಕ‌ ಬಸವರಾಜ್ ಪಾಟೀಲ್ ಅವರಿಗೆ ಸೂಚಿಸಿದ್ದಾರೆ. ನೇತ್ರಾವತಿ ಸೇತುವೆ ಬಳಿ ಬಂದಾಗ ಕಾರಿನಿಂದ ಇಳಿದಿದ್ದಾರೆ. ನಡೆದು ಬರುವುದಾಗಿ ಹೇಳಿ ಕಾರನ್ನು ಸೇತುವೆಯ ಮತ್ತೊಂದು ತುದಿಗೆ ಕಳಿಸಿದ್ದರು.
ಮೊಬೈಲ್ ನಲ್ಲಿ ಮಾತನಾಡುತ್ತಾ ಸೇತುವೆಯ ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗಿದ್ದಾರೆ. ವಾಪಸ್ ಬರುವುದಾಗಿ ಚಾಲಕನಿಗೆ ತಿಳಿಸಿ 'ಯು' ತಿರುವು ಪಡೆದು ಸೇತುವೆಯ ಇನ್ನೊಂದು ಬದಿಯಿಂದ ಮಂಗಳೂರಿನ ಕಡೆಗೆ ಬಂದಿದ್ದಾರೆ. ಆ ಬಳಿಕ ನಾಪತ್ತೆಯಾಗಿದ್ದಾರೆ ಎಂಬುದು ಈವರೆಗಿನ ತನಿಖೆಯಲ್ಲಿ ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.