undefined
ಉಡುಪಿ: ಸಿಡಿಲಿನಿಂದ ರಕ್ಷಣೆ ಪಡೆಯಲು ಸಾರ್ವಜನಿಕರು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿಪತ್ತು ನಿರ್ವಹಣಾ ಪ್ರಾಧಿಕಾರ ಸರಳ ಮಾರ್ಗಗಳನ್ನು ತಿಳಿಸಿದೆ.
ಸಿಡಿಲು ಮೊಬೈಲ್ ಆ್ಯಪ್ ಬಳಸುವ ಮೂಲಕ ನಾಗರಿಕರು ಸಿಡಿಲಿನ ಬಗ್ಗೆ ಮುಂಚಿತವಾಗಿ ಮಾಹಿತಿ ಪಡೆಯಬಹುದು. ಸಿಡಿಲಿನ ಸಂಭವನೀಯತೆ ಇದ್ದಲ್ಲಿ ಬಯಲಿನಲ್ಲಿ ಮಾಡಬೇಕಾದ ಕೆಲಸಗಳನ್ನು ಮುಂದೂಡಿ, ಮನೆಯಲ್ಲಿಯೇ ಸುರಕ್ಷಿತವಾಗಿ ಇರಲು ಸಹಾಯವಾಗುತ್ತದೆ.
ಮನೆಯ ಸುತ್ತಲು ಒಣಗಿದ ಮರಗಳಿದ್ದರೆ ತೆರವುಗೊಳಿಸಬೇಕು. ಸಿಡಿಲು ಬಡಿಯುವ ಮುನ್ಸೂಚನೆ ಇದ್ದಾಗ ಮನೆಯ ಕಿಟಕಿಯಿಂದ ದೂರ ಇರಬೇಕು, ಸಿಡಿಲು ಬಡಿಯುವ ಸಂದರ್ಭದಲ್ಲಿ ದೂರವಾಣಿ, ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಬಾರದು.
ಗೃಹಪಯೋಗಿ ಉಪಕರಣಗಳ ಪ್ಲಗ್‌ಗಳನ್ನು ತೆಗೆದಿರಿಸಬೇಕು. ಗೋಡೆಯಿಂದ ದೂರವಿರುವುದು ಉತ್ತಮ. ಒಣಮರದ ಪೀಠೋಪಕರಣಗಳು ಸುರಕ್ಷಿತವಾಗಿದ್ದು, ಸಿಡಿಲಿನ ಸಂದರ್ಭದಲ್ಲಿ ಸ್ನಾನ ಮಾಡುವುದು ಸುರಕ್ಷಿತವಲ್ಲ. ಹೊರಾಂಗಣದಲ್ಲಿದ್ದವರು ಸುರಕ್ಷಿತ ಕಟ್ಟಡಗಳ ಒಳಗೆ ಹೋಗಬೇಕು, ಎತ್ತರದ ಪ್ರದೇಶಗಳಲ್ಲಿ ಸಿಡಿಲು ಬಡಿಯುವ ಸಾದ್ಯತೆಗಳು ಹೆಚ್ಚಾಗಿರುವುದರಿಂದ ಸಾಧ್ಯವಾದಷ್ಟು ತಗ್ಗು ಪ್ರದೇಶಗಳಿಗೆ ತೆರಳಬೇಕು. ಸಿಡಿಲಿನ ಸಂದರ್ಭ ಕೊಡೆ ಬಳಸಬಾರದು. ಮಕ್ಕಳು ಗಾಳಿಪಟ ಹಾರಿಸಬಾರದು.
ವಾಹನ ಚಲಿಸುವಾಗ ಸಿಡಿಲು ಬಂದಾಗ ಮರ ಹಾಗೂ ವಿದ್ಯುತ್ ಕಂಬಗಳಿಂದ ವಾಹನವನ್ನು ಸಾಧ್ಯವಾದಷ್ಟು ದೂರ ನಿಲ್ಲಿಸಿ, ಮರದ ಕೆಳಗೆ ನಿಲ್ಲದೆ ವಾಹನದೊಳಗೆ ಇರುವುದು ಸೂಕ್ತ. ಬಸ್‌ಗಳಲ್ಲಿ ಪ್ರಯಾಣಿಸುವಾಗ ಕಿಟಕಿಗಳ ಗಾಜುಗಳನ್ನು ಮುಚ್ಚಬೇಕು.
ಕಾಡಿನಲ್ಲಿದ್ದರೆ ಕಡಿಮೆ ಮರಗಳಿರುವ ಪ್ರದೇಶದಲ್ಲಿ ಸಣ್ಣ ಮರದ ಕೆಳಗೆ ಆಶ್ರಯ ಪಡೆಯುಬೇಕು. ಜನರ ಗುಂಪಿನಲ್ಲಿದ್ದಾಗ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ಸಲಹೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.