ಹಾವೇರಿ: ರೈತರ ದವಸ ಧಾನ್ಯ ಕೆಡದಂತೆ ಸಂಗ್ರಹಿಸಲು ರಾಜ್ಯದ ವಿವಿಧೆಡೆ ನಿರ್ಮಿಸಲಾದ ಆಧುನಿಕ ತಂತ್ರಜ್ಞಾನ ಸೌಲಭ್ಯವುಳ್ಳ ಸೈಲೊ ಘಟಕಗಳು ಒಮ್ಮೆಯೂ ಬಳಕೆ ಆಗಿಲ್ಲ. ಹೀಗಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಯಂತ್ರಗಳು ಹಾಳಾಗುತ್ತಿವೆ.
2016–17ನೇ ಸಾಲಿನಲ್ಲಿ ಬಜೆಟ್‌ನಲ್ಲಿ ಹಾವೇರಿ, ಕಲಬುರಗಿ, ಯಾದಗಿರಿ ಮತ್ತು ಗಂಗಾವತಿ ಎಪಿಎಂಸಿ ಮಾರುಕಟ್ಟೆ ಪ್ರಾಂಗಣಗಳಲ್ಲಿ ಸೈಲೊ ಘಟಕಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿತ್ತು. ಎರಡು ವರ್ಷಗಳ ಹಿಂದೆ ನಿರ್ಮಾಣಗೊಂಡ ದ್ವಿದಳ ಧಾನ್ಯ ಸಂಗ್ರಹಣಾ ಘಟಕಗಳು ಇನ್ನೂ ಕಾರ್ಯಾರಂಭಿಸಿಲ್ಲ.
ಹಾವೇರಿಯ ಹಾನಗಲ್ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಆವರಣದಲ್ಲಿ ₹2.11 ಕೋಟಿ ವೆಚ್ಚದಲ್ಲಿ ತಲಾ 200 ಮೆಟ್ರಿಕ್ ಟನ್ ಸಾಮರ್ಥ್ಯದ 5 ಸೈಲೊ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದೆ. ಕಾಮಗಾರಿ ಗುತ್ತಿಗೆ ಪಡೆದಿದ್ದ ಬೆಂಗಳೂರಿನ ಬಿಲ್ಟೆಕ್ ಎಂಜಿನಿಯರಿಂಗ್ ಸಲ್ಯೂಷನ್ಸ್ ಕಂಪನಿಯವರು 2021ರ ಡಿಸೆಂಬರ್‌ನಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದರು. ನಂತರ 2022ರ ಫೆಬ್ರುವರಿಯಲ್ಲಿ ಹಾವೇರಿ ಎಪಿಎಂಸಿಯಿಂದ ಪರೀಕ್ಷಾರ್ಥ ಚಾಲನೆ ನಡೆಸಲಾಗಿತ್ತು. ನಂತರ ಘಟಕ ಬಳಕೆ ಆಗಿಲ್ಲ.
ಅವೈಜ್ಞಾನಿಕ ಯೋಜನೆ
‘ಈ ಘಟಕವು ಒಂದು ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯ ಹೊಂದಿದ್ದು, ಏಕಕಾಲದಲ್ಲಿ ಒಬ್ಬ ರೈತ ಏಕರೂಪದ ಧಾನ್ಯ ಮಾತ್ರ ಸಂಗ್ರಹಿಸಿಡಬಹುದು. ಜಿಲ್ಲೆಯಲ್ಲಿರುವ ಸಣ್ಣ ಮತ್ತು ಮಧ್ಯಮ ಹಿಡುವಳಿದಾರರ ಬಳಿ ಇಷ್ಟು ದೊಡ್ಡ ಪ್ರಮಾಣದ ದವಸ– ಧಾನ್ಯಗಳು ಇರುವುದಿಲ್ಲ. ಹೀಗಾಗಿ ರೈತರಿಗೆ ಈ ಘಟಕದಿಂದ ಯಾವುದೇ ಪ್ರಯೋಜನವಾಗಿಲ್ಲ. ಇದು ಸಂಪೂರ್ಣ ಅವೈಜ್ಞಾನಿಕ ಯೋಜನೆ’ ಎಂದು ರೈತ ಮುಖಂಡ ಹನುಮಂತಪ್ಪ ದೀವಿಗಿಹಳ್ಳಿ ದೂರಿದ್ದಾರೆ.
ತೆರಿಗೆ ಹಣ ಪೋಲು
‘ಮಳೆಗಾಲದಲ್ಲಿ ಕೃಷಿ ಉತ್ಪನ್ನಗಳು ಹಾಳಾಗಿ ರೈತರು ನಷ್ಟ ಅನುಭವಿಸುತ್ತಾರೆ. ಶೀತಲೀಕರಣ ಘಟಕ (ಕೋಲ್ಡ್ ಸ್ಟೋರೇಜ್) ಸ್ಥಾಪಿಸಿದ್ದರೆ ರೈತರಿಗೆ ಪ್ರಯೋಜನ ಆಗುತಿತ್ತು. ಮುಂದಾಲೋಚನೆಯಿಲ್ಲದೆ ಸೈಲೊ ಘಟಕ ನಿರ್ಮಿಸಿ, ಜನರ ಹಣವನ್ನು ಅಧಿಕಾರಿಗಳು ಪೋಲು ಮಾಡಿದ್ದಾರೆ. ಸರ್ಕಾರ ಈ ಘಟಕವನ್ನು ಹೆಚ್ಚಿನ ಸಂಖ್ಯೆಯ ರೈತರಿಗೆ ಪ್ರಯೋಜನ ಆಗುವಂತೆ ಮಾರ್ಪಾಟು ಮಾಡಬೇಕು’ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಒತ್ತಾಯಿಸಿದ್ದಾರೆ.
‘ಮೆಕ್ಕೆಜೋಳ ಸೇರಿ ಇತರ ಆಹಾರ ಧಾನ್ಯಗಳನ್ನು ಚೀಲದಿಂದ ಸುರಿದಾಗ, ಅದರಲ್ಲಿರುವ ಕಸ–ಕಡ್ಡಿ, ದೂಳನ್ನು ಯಂತ್ರದ ಮೂಲಕ ಬೇರ್ಪಡಿಸಲಾಗುತ್ತದೆ. ಆನಂತರ ಧಾನ್ಯ 5 ಟ್ಯಾಂಕ್‌ಗಳಲ್ಲಿ ಸಂಗ್ರಹವಾಗುತ್ತದೆ. ಮನೆಗಳಲ್ಲಿ ಇಟ್ಟಾಗ ದವಸ ಧಾನ್ಯಗಳು ಹುಳುಗಳ ಕಾಟದಿಂದ ಕೆಡುವ ಸಾಧ್ಯತೆ ಇರುತ್ತದೆ. ಸೈಲೊ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿದರೆ ಕೆಡದಂತೆ ಸಂರಕ್ಷಿಸಬಹುದು’ ಎಂದು ಹಾವೇರಿ ಎಪಿಎಂಸಿ ಅಧಿಕಾರಿಗಳು ತಿಳಿಸಿದರು.
ಸೈಲೊ ಘಟಕವನ್ನು ಉಚಿತವಾಗಿ ಬಳಸಿ ಎಂದರೂ ರೈತರು ಮುಂದೆ ಬಂದಿಲ್ಲ. ರಿಯಾಯಿತಿ ದರದಲ್ಲಿ ಬಾಡಿಗೆಗೆ ಕೊಡಲು ‘ರೈತ ಉತ್ಪಾದಕ ಕಂಪನಿ’ಗಳಿಗೆ ಆಹ್ವಾನಿಸಿದ್ದೇ.ಪರಮೇಶಪ್ಪ ನಾಯಕ, ಪ್ರಭಾರ ಕಾರ್ಯದರ್ಶಿ ಎಪಿಎಂಸಿ ಹಾವೇರಿ
ಯಾದಗಿರಿ ಎಪಿಎಂಸಿಯಲ್ಲಿರುವ ಸೈಲೊ ಘಟಕ ನಿರ್ವಹಣೆ ಮಾಡಲು ಸಿಬ್ಬಂದಿಯಿಲ್ಲ. ವರ್ತಕರು ಆಸಕ್ತಿ ತೋರಿಸಿದರೆ ಘಟಕದ ನಿರ್ವಹಣೆಯ ಜವಾಬ್ದಾರಿ ನೀಡುತ್ತೇವೆ.ಮಹಾದೇವಪ್ಪ ಚಬನೂರ್, ಎಪಿಎಂಸಿ ಕಾರ್ಯದರ್ಶಿ ಯಾದಗಿರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.