ADVERTISEMENT

ವಿಜಯಪುರ: ಸಿಂದಗಿ ಶಾಸಕ ಎಂ.ಸಿ. ಮನಗೂಳಿ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2021, 11:02 IST
Last Updated 29 ಜನವರಿ 2021, 11:02 IST
ಸಿಂದಗಿ ಪಟ್ಟಣದ ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ ವೀರಶೈವ ಲಿಂಗಾಯತ ವಿಧಿವಿಧಾನಗಳೊಂದಿಗೆ ಶಾಸಕ ಎಂ.ಸಿ. ಮನಗೂಳಿ ಅಂತ್ಯಕ್ರಿಯೆ ನೆರವೇರಿತು.
ಸಿಂದಗಿ ಪಟ್ಟಣದ ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ ವೀರಶೈವ ಲಿಂಗಾಯತ ವಿಧಿವಿಧಾನಗಳೊಂದಿಗೆ ಶಾಸಕ ಎಂ.ಸಿ. ಮನಗೂಳಿ ಅಂತ್ಯಕ್ರಿಯೆ ನೆರವೇರಿತು.   

ವಿಜಯಪುರ: ಅನಾರೋಗ್ಯದಿಂದ ನಿಧನರಾದ ಸಿಂದಗಿ ಶಾಸಕ ಎಂ.ಸಿ. ಮನಗೂಳಿ (85) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಪಟ್ಟಣದ ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ ವೀರಶೈವ ಲಿಂಗಾಯತ ವಿಧಿವಿಧಾನಗಳೊಂದಿಗೆ ನೆರವೇರಿತು.

ಸಿಂದಗಿ ಊರಿನ ಹಿರಿಯ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ಕ್ರಿಯಾ ಸಂಸ್ಕಾರ ಜರುಗಿತು.

ಹರಿಹರ ಪೀಠದ ವಚನಾನಂದ ಸ್ವಾಮೀಜಿ, ಡಾ.ಪ್ರಭು ಸಾರಂಗದೇವ ಸ್ವಾಮೀಜಿ, ಡಾ.ವಿಶ್ವಪ್ರಭು ಸ್ವಾಮೀಜಿ ಕೊಣ್ಣೂರಮಠ, ಮನಗೂಳಿ ಶ್ರೀಗಳು, ಕನ್ನೊಳ್ಳಿ ಶ್ರೀಗಳು ಸೇರಿದಂತೆ 50ಕ್ಕೂ ಅಧಿಕ ಮಠಾಧೀಶರು ಶ್ರದ್ಧಾಂಜಲಿ ಸಭೆಯಲ್ಲಿ ಉಪಸ್ಥಿತರಿದ್ದರು.

ADVERTISEMENT

ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಶಾಸಕರಾದ ಎಚ್.ಡಿ. ರೇವಣ್ಣ, ಎ.ಎಸ್. ಪಾಟೀಲ ನಡಹಳ್ಳಿ, ಬಸನಗೌಡ ಪಾಟೀಲ ಯತ್ನಾಳ, ಎಚ್.ಕೆ. ಪಾಟೀಲ, ಅಜಯಸಿಂಗ್, ಎಂ.ವೈ. ಪಾಟೀಲ, ಯಶವಂತರಾಯಗೌಡ ಪಾಟೀಲ, ಈಶ್ವರ ಖಂಡ್ರೆ, ದೇವಾನಂದ ಚವ್ಹಾಣ ಹಾಗೂ ಎಂ.ಪಿ. ನಾಡಗೌಡ, ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ರಮೇಶ ಭೂಸನೂರ, ಅಶೋಕ ಶಾಬಾದಿ ಮತ್ತಿತರರು ಮನಗೂಳಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಪಟ್ಟಣದಲ್ಲಿರುವ ಅವರ ನಿವಾಸದಿಂದ ತಾಲ್ಲೂಕು ವಿದ್ಯಾ ಪ್ರಸಾರಕ ಮಂಡಳದವರೆಗೆ ಮನಗೂಳಿ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ನಡೆಯಿತು. ಅವರ ಅಭಿಮಾನಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಸಾವಿರಾರು ಜನರು ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಮನಗೂಳಿ ಮುತ್ಯಾಗೆ ಜೈ, ಮನಗೂಳಿ ಮಾಮಾಗೆ ಜೈ. ಮನಗೂಳಿ ಕಾಕಾಗೆ ಜೈ ಎಂದು ಘೋಷಣೆ ಕೂಗಿದರು.

ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ಮನಗೂಳಿ ಅವರು ಸರಳ, ಸಜ್ಜನಿಕೆಯ ಹಿರಿಯ ವ್ಯಕ್ತಿ. ಅವರದು ಆದರ್ಶ ರಾಜಕಾರಣ. ನೀರಾವರಿ ಯೋಜನೆ ಜಾರಿಗೆಗಾಗಿ ಅಪಾರ ಕೊಡುಗೆ ಸಲ್ಲಿಸಿದ್ದಾರೆ. ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಚಪ್ಪಲಿ ಧರಿಸದೇ ಸಂಚರಿಸಿದ ಪ್ರತಿಜ್ಞೆ ಅವರದು. ಅವರ ಹೋರಾಟ ಇಂದಿನ ಪೀಳಿಗೆಗೆ ಮಾದರಿ. 2018 ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಒಪ್ಪದೆ ತಮ್ಮ ಪುತ್ರರಲ್ಲೊಬ್ಬರಿಗೆ ಅವಕಾಶ ಕೋರಿದ್ದರು. ಅವರು ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ನಿರಂತರ ಒತ್ತಡ ಹಾಕಿ ಆಲಮೇಲ ತಾಲ್ಲೂಕು ರಚನೆ ಮಾಡುವಲ್ಲಿ ಯಶಸ್ವಿಯಾದರು. ತೋಟಗಾರಿಕೆ ಕಾಲೇಜು ಸ್ಥಾಪನೆ ಅವರ ಕನಸ್ಸಾಗಿದೆ, ಅದು ನನಸಾಗಬೇಕಿದೆ. ಅವರೊಬ್ಬ ಹುಟ್ಟು ಹೋರಾಟಗಾರ ಎಂದು ಹೇಳಿದರು.

ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದ ಗಣ್ಯರು

ಅಪರೂಪದ ಪ್ರಾಮಾಣಿಕ ರಾಜಕಾರಣಿ. ನಿಷ್ಠೆ ಅವರ ಘನ ವ್ಯಕ್ತಿತ್ವ. ದೇವೇಗೌಡರ ಕುಟುಂಬದ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದ್ದರು. ದೇವೇಗೌಡರ ಹೆಗಲಿಗೆ ಹೆಗಲು ಕೊಟ್ಟವರು. ಕೊನೆಯವರೆಗೂ ಪಕ್ಷ ಬದಲಿಸದ ನಿಷ್ಠರು. ಮನಗೂಳಿ ಆಸ್ತಿ ಸಂಪಾದಿಸಿಲ್ಲ. ಜನರನ್ನು ಸಂಪಾದಿಸಿದ್ದಾರೆ. ದೇವೇಗೌಡರು ದೆಹಲಿಯಿಂದ ಆದಷ್ಟು ಬೇಗ ಸಿಂದಗಿಗೆ ಬಂದು ಮನಗೂಳಿ ಕುಟುಂಬಕ್ಕೆ ಸಾಂತ್ವನ ಹೇಳುವರು ಎಂದು ತಿಳಿಸಿದರು.

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ಶಾಸಕ ಎಂ.ಸಿ. ಮನಗೂಳಿ ಸರಳ, ಸಜ್ಜನ ರಾಜಕಾರಣಿ. ಅವರೊಂದಿಗೆ 40 ವರ್ಷದಿಂದ ಬಾಂಧವ್ಯ ಇದೆ. ಅವರ ಸಾಧನೆ ದೊಡ್ಡ ಪ್ರಮಾಣದ್ದು. ಅವರು ಜೀವನದುದ್ದಕ್ಕೂ ನೀರಾವರಿ ಯೋಜನೆಗಾಗಿ ಹೋರಾಟ ನಡೆಸಿದ್ದಾರೆ. ಜನಪರ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸಿದ್ದಾರೆ ಎಂದರು.

ದೇವೇಗೌಡರ ಮನವೊಲಿಸಿ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ತಂದಿದ್ದಾರೆ. ಅವರು ತಮಗಾಗಿ ಬದುಕದೇ ಸಮಾಜಕ್ಕಾಗಿ ಬದುಕಿದವರು. ಅವರ ಸಾಧನೆ ಹೆಜ್ಜೆ ಗುರುತಾಗಿವೆ. ಅವರ ಹಾಕಿಕೊಂಡ ಕಾರ್ಯಕ್ರಮ ಪೂರ್ಣಗೊಳಿಸುವ ಜವಾಬ್ದಾರಿ ಅವರ ಕುಟುಂಬ ಮತ್ತು ಸಮಾಜದ್ದಾಗಿದೆ ಎಂದರು.

ಎಂಸಿ ಮನಗುಳಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಎಚ್.ಡಿ. ಕುಮಾರಸ್ವಾಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.