ನವದೆಹಲಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ, ‘ಮುಂಗಾರಿನಲ್ಲಿ ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಕಿಡಿಕಾರಿದರು.
ರಾಜ್ಯಸಭೆಯಲ್ಲಿ ವಿಶೇಷ ಪ್ರಸ್ತಾಪಗಳ ಸಂದರ್ಭದಲ್ಲಿ ಅವರು ಉತ್ತರ ಕನ್ನಡ ಜಿಲ್ಲೆಯ ಶಿರೂರು ಗ್ರಾಮದಲ್ಲಿ ಭೂಕುಸಿತ ಉಂಟಾದ ವಿಷಯವನ್ನು ಪ್ರಸ್ತಾಪಿಸಿದರು.
‘ಬೆಟ್ಟ ಕುಸಿದು ಒಂಬತ್ತು ಜನರು ಸತ್ತರು. ಇದರಿಂದಾಗಿ ಹೆದ್ದಾರಿ ಬಂದ್ ಆಯಿತು. ಆರು ದಿನಗಳ ಕಾಲ ರಾಜ್ಯ ಸರ್ಕಾರದಿಂದ ಯಾರೂ ಅಲ್ಲಿಗೆ ಹೋಗಿಲ್ಲ. ಕೇಂದ್ರ ಸರ್ಕಾರದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವರು ಅಲ್ಲಿಗೆ ಹೋದರು. ಅವರ ಭೇಟಿಯ ನಂತರ, ಕೇಂದ್ರ ಸರ್ಕಾರವು ಸೇನಾ ಸಿಬ್ಬಂದಿಯನ್ನು ಕಳುಹಿಸಿತು. ಕೇಂದ್ರ ಸರ್ಕಾರ ಅಗತ್ಯವಿರುವ ಎಲ್ಲ ನೆರವು ನೀಡಿತು. ವಿನೋದದ ಸಂಗತಿಯೆಂದರೆ, ಕರ್ನಾಟಕದ ಮುಖ್ಯಮಂತ್ರಿ ಆರು ದಿನಗಳ ನಂತರ ಅಲ್ಲಿಗೆ ಹೋದರು. ರಾಜ್ಯ ಸರ್ಕಾರ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ವಿಳಂಬದ ಈ ಭೇಟಿ ಸಾಕ್ಷಿ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.