ಬೆಂಗಳೂರು: ಕೋವಿಡ್ ನಿರ್ವಹಣೆ ಹೆಸರಿನಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು, ತಪ್ಪಿತಸ್ಥರ ಮೇಲೆ ಅಪರಾಧ ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆಗೆ ಸರ್ಕಾರ ನಿರ್ಧರಿಸಿದೆ.
ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿಕುನ್ಹಾ ನೇತೃತ್ವದ ಆಯೋಗವು ಸಲ್ಲಿಸಿರುವ ಮಧ್ಯಂತರ ವರದಿಯನ್ನು ಆಧರಿಸಿದ ಪ್ರಸ್ತಾವವು ಗುರುವಾರ ನಡೆದ ಸಚಿವ ಸಂಪುಟ ಸಭೆಯ ಮುಂದೆ ಮಂಡನೆಯಾಗಿತ್ತು. ಈ ಬಗ್ಗೆ ಚರ್ಚಿಸಿದ ಸಚಿವ ಸಂಪುಟ ಸಭೆ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಂಡಿದೆ.
ಸಭೆಯ ಬಳಿಕ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ, ‘ಅಕ್ರಮ ನಡೆದಿರುವ ಕುರಿತು ಆಯೋಗವು ಮಧ್ಯಂತರ ವರದಿಯಲ್ಲಿ ವಿವರಿಸಿದೆ. ಈ ಅಕ್ರಮದಲ್ಲಿ ಯಾರ ಪಾತ್ರ ಏನು ಎಂಬುದನ್ನು ತನಿಖೆ ಮಾಡಿ ಎಸ್‌ಐಟಿ ಕ್ರಮ ತೆಗೆದುಕೊಳ್ಳಲಿದೆ’ ಎಂದರು.
ಅಕ್ರಮದ ತನಿಖೆ ಮತ್ತು ತಪ್ಪಿತಸ್ಥರ ಮೇಲೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರಂತರವಾಗಿ ಮೇಲ್ವಿಚಾರಣೆ ನಡೆಸಲು ಸಚಿವ ಸಂಪುಟ ಉಪಸಮಿತಿ ರಚಿಸಲು ಕೂಡಾ ತೀರ್ಮಾನಿಸಲಾಗಿದೆ. ಈ ಉಪ ಸಮಿತಿಗೆ ಸದಸ್ಯರನ್ನು ಅಂತಿಮಗೊಳಿಸುವ ಅಧಿಕಾರವನ್ನು ಮುಖ್ಯಮಂತ್ರಿಗೆ ನೀಡಲಾಗಿದೆ ಎಂದು ಅವರು ವಿವರಿಸಿದರು.
ಕೋವಿಡ್ ನಿರ್ವಹಣೆಗಾಗಿ ₹7,223.64 ಕೋಟಿ ಮೊತ್ತದಲ್ಲಿ ವೈದ್ಯಕೀಯ ಉಪಕರಣ, ಔಷಧಗಳ ಖರೀದಿಯಲ್ಲಿ ನಡೆದ ಅವ್ಯವಹಾರದ ಕುರಿತು ನ್ಯಾಯಮೂರ್ತಿ ಜಾನ್ ಮೈಕೆಲ್ ಡಿಕುನ್ಹಾ ನೇತೃತ್ವದ ಆಯೋಗ ತನಿಖೆ ನಡೆಸಿ 11 ಸಂಪುಟಗಳಲ್ಲಿ ಮಧ್ಯಂತರ ವರದಿ ಸಲ್ಲಿಸಿದೆ. ತಪ್ಪಿತಸ್ಥರಿಂದ ₹500 ಕೋಟಿ ವಸೂಲಿಗೂ ಆಯೋಗ ಶಿಫಾರಸು ಮಾಡಿದೆ. ಈ ಹಣ ವಸೂಲಿಗೆ ಮತ್ತು ಅಕ್ರಮದಲ್ಲಿ ಭಾಗಿಯಾದ ಖಾಸಗಿ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲು ಕೂಡಾ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದರು.
ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ತನಿಖಾ ವರದಿಯಲ್ಲಿ ಕ್ರಿಮಿನಲ್ ಅಂಶ ಇರುವುದರಿಂದ ಎಸ್ಐಟಿ ತನಿಖೆಗೆ ನಿರ್ಣಯ ತೆಗೆದುಕೊಳ್ಳಲಾಗಿದೆ. ಅಕ್ರಮದಲ್ಲಿ ಭಾಗಿಯಾಗಿದ್ದ ಸಚಿವರು, ರಾಜಕೀಯ ನಾಯಕರನ್ನೂ ಎಸ್ಐಟಿ ತನಿಖೆಗೆ ಒಳಪಡಿಸಲಿದೆ’ ಎಂದು ಹೇಳಿದರು.
ಆಯೋಗವು ಬಿಬಿಎಂಪಿಯ ನಾಲ್ಕು ವಲಯಗಳ ಮತ್ತು ರಾಜ್ಯದ ಎಲ್ಲ 31 ಜಿಲ್ಲೆಗಳ ವರದಿ ಸಲ್ಲಿಸಲು ಬಾಕಿಯಿದೆ. ಸಂಬಂಧಪಟ್ಟ ಇಲಾಖೆಗಳಿಂದ 55 ಸಾವಿರ ಕಡತಗಳನ್ನು ಪಡೆದು ಪರಿಶೀಲಿಸಿ ಆಯೋಗವು ವರದಿ ಸಲ್ಲಿಸಿದೆ ಎಂದೂ ಅವರು ತಿಳಿಸಿದರು.
ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಹಣದ ದುರುಪಯೋಗ ಮತ್ತು ಅಧಿಕಾರ ದುರುಪಯೋಗ ಬಗ್ಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ನೀಡಿದ್ದ ವರದಿಯನ್ನು 2023ರ ಜುಲೈ 17ರಂದು ವಿಧಾನಸಭೆಯಲ್ಲಿ ಮಂಡಿಸಲಾಗಿತ್ತು. ಈ ವರದಿಯ ಆಧಾರದಲ್ಲಿ ತನಿಖೆ ಮಾಡಿ ವರದಿ ಸಲ್ಲಿಸಲು ನ್ಯಾಯಮೂರ್ತಿ ಡಿಕುನ್ಹಾ ಆಯೋಗವನ್ನು ನೇಮಿಸಲಾಗಿತ್ತು. ಈ ಆಯೋಗವು 12 ವಿಶ್ಲೇಷಣಾ ವರದಿಗಳನ್ನು ನೀಡಿದೆ ಎಂದೂ ಸಚಿವರು ವಿವರಿಸಿದರು.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನಲ್ಲಿರುವ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಖರೀದಿಗೆ ಮೀಸಲಾಗಿದ್ದ ಧಾರವಾಡ ಜಿಲ್ಲೆಯ 19 ಗ್ರಾಮಗಳನ್ನು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಕುಟುಂಬದ ಮೃಣಾಲ್ ಸಕ್ಕರೆ ಕಾರ್ಖಾನೆಗೆ ಮರು ಹಂಚಿಕೆ ಮಾಡಲು ಸಚಿವ ಸಭೆ ಒಪ್ಪಿಗೆ ನೀಡಿದೆ ಎಂದು ಎಚ್.ಕೆ. ಪಾಟೀಲ ತಿಳಿಸಿದರು.
‘ಪುಡಕಲಕಟ್ಟೆ, ಉಪ್ಪಿನ ಬೆಟಗೇರಿ, ಹನುಮನಾಳ, ಕಲ್ಲೆ, ಕಬ್ಬೇನೂರ, ಕರಡಿಗುಡ್ಡ, ತಿಮ್ಮಾಪೂರ, ಮರೇವಾಡ, ಅಮ್ಮಿನಭಾವಿ, ಹಾರೋಬೆಳವಡಿ, ಕಲ್ಲೂರ, ಲೋಕೂರ, ಶಿಬಾರಗಟ್ಟಿ, ಯಾದವಾಡ, ಮುಳಮುತ್ತಲ, ಮಂಗಳಗಟ್ಟಿ, ಲಕಮಾಪುರ, ದಾಸನಕೊಪ್ಪ ಮತ್ತು ಕುರುಬಗಟ್ಟೆ ಈ ಗ್ರಾಮಗಳನ್ನು ಮೃಣಾಲ್ ಸಕ್ಕರೆ ಕಾರ್ಖಾನೆಗೆ ಮರುಹಂಚಿಕೆ ಮಾಡಲಾಗುವುದು. ಈ ಸಕ್ಕರೆ ಕಾರ್ಖಾನೆಯಿಂದ 7.50 ಕಿ.ಮೀ ಸುತ್ತಲಿನ ಗ್ರಾಮಗಳಿವು’ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಒಂದೂವರೆ ವರ್ಷದಿಂದಲೂ ಎಸ್‌ಐಟಿ ಭಜನೆ ಮಾಡುತ್ತಿದೆ. ವಿರೋಧ ಪಕ್ಷದಲ್ಲಿ ಇದ್ದಾಗಲೂ ಇದೇ ಚರ್ಚೆ ಮಾಡಿದ್ದರು. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರು ಕಾಂಗ್ರೆಸ್‌ನವರೇ ಇದ್ದರು. ಇಷ್ಟು ದಿನ ತನಿಖೆ ಏಕೆ ಮಾಡಲಿಲ್ಲ? ಮುಡಾ, ವಾಲ್ಮೀಕಿ ನಿಗಮದ ಹಗರಣದ ಗಮನ ಬೇರೆ ಕಡೆ ಸೆಳೆಯಲು ಈಗ ನಾಟಕ ಮಾಡುತ್ತಿದ್ದಾರೆ.-ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಬೃಹತ್ ಕೈಗಾರಿಕಾ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.