ADVERTISEMENT

ನೆನಪು | ಗೌಡರ ಸರ್ಕಾರ ಪತನಕ್ಕೆ ‘ಕೇಸರಿ’ ಕಾರಣ: ಎಸ್‌.ಎಂ. ಕೃಷ್ಣ

ನೆನಪು ಹಂಚಿಕೊಂಡ ಹಿರಿಯ ನಾಯಕ ಎಸ್‌.ಎಂ. ಕೃಷ್ಣ

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 16:17 IST
Last Updated 5 ಜೂನ್ 2021, 16:17 IST
ಎಸ್‌.ಎಂ.ಕೃಷ್ಣ
ಎಸ್‌.ಎಂ.ಕೃಷ್ಣ   

ಬೆಂಗಳೂರು: ಎಐಸಿಸಿ ಅಧ್ಯಕ್ಷರಾಗಿದ್ದ ಸೀತಾರಾಂ ಕೇಸರಿ ಅವರಲ್ಲಿ ಎಚ್‌.ಡಿ. ದೇವೇಗೌಡರ ಕುರಿತು ಮೂಡಿದ ಅನುಮಾನಗಳೇ 1997ರಲ್ಲಿ ಗೌಡರ ನೇತೃತ್ವದ ಸರ್ಕಾರದ ಪತನಕ್ಕೆ ಕಾರಣವಾಯಿತು ಎಂದು ಆಗ ಕಾಂಗ್ರೆಸ್‌ನಿಂದ ರಾಜ್ಯಸಭಾ ಸದಸ್ಯರಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಹೇಳಿದ್ದಾರೆ.

ದೇವೇಗೌಡರು ಪ್ರಧಾನಿ ಹುದ್ದೆಗೇರಿ 25 ವರ್ಷಗಳಾದ ಪ್ರಯುಕ್ತ ಜೆಡಿಎಸ್‌ ಹಮ್ಮಿಕೊಂಡಿರುವ ನೆನಪಿನ ಸರಣಿಯಲ್ಲಿ ಶನಿವಾರ ಪ್ರಸಾರವಾದ ವಿಡಿಯೊ ತುಣುಕಿನಲ್ಲಿ ತಮ್ಮ ನೆನಪುಗಳನ್ನು ಅವರು ಹಂಚಿಕೊಂಡಿದ್ದಾರೆ.

‘ದೇವೇಗೌಡರು ಪ್ರಧಾನಿ ಹುದ್ದೆಗೇರಿದ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷರಾಗಿದ್ದ ಪಿ.ವಿ. ನರಸಿಂಹ ರಾವ್‌ ಮುಕ್ತವಾಗಿ ಬೆಂಬಲ ಸೂಚಿಸಿದ್ದರು. ನಂತರ ಎಐಸಿಸಿ ಅಧ್ಯಕ್ಷರಾದ ಸೀತಾರಾಂ ಕೇಸರಿ ಗೌಡರ ಸರ್ಕಾರ ಪತನಕ್ಕೆ ಕಾರಣವಾದರು’ ಎಂದಿದ್ದಾರೆ.

ADVERTISEMENT

1996ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರ ಪತನವಾದ ಬಳಿಕ ತಮ್ಮನ್ನು ಮತ್ತು ರಾಜ್ಯಸಭೆಯ ಇನ್ನೊಬ್ಬ ಸದಸ್ಯ ಸಚ್ಚಿದಾನಂದ ಅವರನ್ನು ನರಸಿಂಹ ರಾವ್‌ ಅವರು ಮನೆಗೆ ಕರೆಸಿಕೊಂಡಿದ್ದರು. ಅಲ್ಲಿಗೆ ದೇವೇಗೌಡರನ್ನೂ ಆಹ್ವಾನಿಸಿದ್ದರು. ಪ್ರಧಾನಿಯಾಗಿ ದೇವೇಗೌಡರನ್ನು ಕಾಂಗ್ರೆಸ್‌ ಬೆಂಬಲಿಸುವ ವಿಷಯವನ್ನು ನರಸಿಂಹ ರಾವ್‌ ಆಗ ಪ್ರಕಟಿಸಿದ್ದರು ಎಂದು ಕೃಷ್ಣ ತಿಳಿಸಿದ್ದಾರೆ.

‘ಸೀತಾರಾಂ ಕೇಸರಿ ಎಐಸಿಸಿ ಅಧ್ಯಕ್ಷರಾದ ಬಳಿಕ ಗೌಡರ ಜತೆಗೆ ಸಂಬಂಧ ಚೆನ್ನಾಗಿಯೇ ಇತ್ತು. ಆದರೆ, ದೇವೇಗೌಡರ ಬಗ್ಗೆ ಅವರಿಗೆ ಅನುಮಾನ ಇತ್ತು. ಅದೇ ಸಮಯದಲ್ಲಿ ಕರ್ನಾಟಕದ ಕಾಂಗ್ರೆಸ್‌ನ ಮುಖಂಡರೂ ಗೌಡರ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆಯುವಂತೆ ಒತ್ತಡ ಹೇರುತ್ತಿದ್ದರು. ಆ ಒತ್ತಡಕ್ಕೆ ಸೀತಾರಾಂ ಕೇಸರಿ ಬಲಿಯಾಗಬೇಕಾಯಿತು’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

‘ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಕಾಂಗ್ರೆಸ್‌ ಹಿಂಪಡೆಯುವ ಹಿಂದಿನ ದಿನ ಸಂಜೆ ನಾನು ಪ್ರಧಾನಿ ನಿವಾಸಕ್ಕೆ ಹೋಗಿದ್ದೆ. ಆಗ ರಾಜ್ಯಸಭಾ ಸದಸ್ಯರಾಗಿದ್ದ ಆರ್‌.ಕೆ. ಧವನ್‌ ಕೂಡ ನನ್ನೊಂದಿಗೆ ಇದ್ದರು. ನಾವು ಮೂವರೂ ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಗುಪ್ತದಳದ ಅಧಿಕಾರಿಗಳು, ಸೀತಾರಾಂ ಕೇಸರಿಯವರು ಸರ್ಕಾರ ಪತನಗೊಳಿಸಲು ಸಿದ್ಧತೆ ನಡೆಸಿರುವ ಕುರಿತು ಮಾಹಿತಿ ನೀಡಿದರು’ ಎಂದಿದ್ದಾರೆ.

ಕಾಂಗ್ರೆಸ್‌ ನಾಯಕರ ಜತೆ ಉತ್ತಮ ಬಾಂಧವ್ಯ ಹೊಂದಿದ್ದ ಧವನ್‌, ಸೀತಾರಾಂ ಕೇಸರಿ ಅವರನ್ನು ಭೇಟಿ ಮಾಡಿ ಮುಂದಿನ ಬೆಳವಣಿಗೆ ತಡೆಯುವ ಭರವಸೆ ನೀಡಿದ್ದರು. ಆದರೆ, ಮರುದಿನ ಕೇಸರಿ ಯಾರ ಕೈಗೂ ಸಿಗಲಿಲ್ಲ. ಭೇಟಿಗೆ ಅವಕಾಶವನ್ನೂ ಪಡೆಯದೆ ರಾಷ್ಟ್ರಪತಿ ಭವನಕ್ಕೆ ತೆರಳಿದ್ದರು. ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆಯುವ ಪತ್ರವನ್ನು ಸಲ್ಲಿಸಿದ್ದರು. ಬಳಿಕ ರಾಷ್ಟ್ರಪತಿಯವರು ಗೌಡರಿಗೆ ವಿಶ್ವಾಸಮತ ಯಾಚನೆಗೆ ಸೂಚಿಸಿದರು. ವಿಶ್ವಾಸಮತ ಯಾಚನೆಯಲ್ಲಿ ಗೌಡರು ಸೋತರು. ಈ ಇತಿಹಾಸಕ್ಕೆ ನಾನೂ ಒಬ್ಬ ಸಾಕ್ಷಿ’ ಎಂದು ಕೃಷ್ಣ ನೆನಪಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.