ADVERTISEMENT

ನಿವೇಶನಗಳ ಅಕ್ರಮ ನೋಂದಣಿ: ನಿವೃತ್ತ ನ್ಯಾಯಾಧೀಶರಿಂದ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 20:32 IST
Last Updated 12 ನವೆಂಬರ್ 2019, 20:32 IST
   

ಬೆಂಗಳೂರು: ಕಂದಾಯ ಮತ್ತಿತರ ನಿವೇಶನಗಳನ್ನು ಸೇಲ್ ಅಗ್ರಿಮೆಂಟ್ ಮೇಲೆ ಅಕ್ರಮವಾಗಿ ನೋಂದಾಯಿಸಿ ಸರ್ಕಾರಕ್ಕೆ ಭಾರಿ ನಷ್ಟ ಉಂಟು ಮಾಡಿರುವ ಪ್ರಕರಣ ಕುರಿತು ನಿವೃತ್ತ ನ್ಯಾಯಾಧೀಶರೊಬ್ಬರಿಂದ ಇಲಾಖಾ ವಿಚಾರಣೆ ನಡೆಸಲು ನೋಂದಣಿ ಮತ್ತು ಮುದ್ರಾಂಕ ಇಲಾಖೆ ತೀರ್ಮಾನಿಸಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಅಕ್ರಮಗಳು ನಡೆದಿದ್ದು, ಸುಮಾರು 20 ಸಬ್ ರಿಜಿಸ್ಟ್ರಾರ್‌ಗಳು ಇದರಲ್ಲಿ ಭಾಗಿಯಾಗಿರುವ ಶಂಕೆ ಇದೆ. ಈ ಸಂಬಂಧ ಸಬ್‌ ರಿಜಿಸ್ಟ್ರಾರ್‌ಗಳಿಗೆ ನೋಟಿಸ್‌ ನೀಡಲಾಗಿದೆ. ಉತ್ತರ ನೋಡಿಕೊಂಡು ಆರೋಪ ಹೊರಿಸಲಾಗುವುದು. ಬಳಿಕ ನಿವೃತ್ತ ನ್ಯಾಯಾಧೀಶರೊಬ್ಬರನ್ನು ವಿಚಾರಣೆಗೆ ನೇಮಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ನಿವೃತ್ತ ನ್ಯಾಯಾಧೀಶರ ಪಟ್ಟಿ ಇಲಾಖೆಯಲ್ಲಿದೆ. ಅವರಲ್ಲಿ ಒಬ್ಬರನ್ನು ವಿಚಾರಣೆಗೆ ನೇಮಕ ಮಾಡಲಾಗುವುದು. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಕೆಲವು ದಿನಗಳು ಹಿಡಿಯಲಿವೆ. ಯಾವುದೇ ಒತ್ತಡಕ್ಕೂ ಮಣಿಯದೆ ಅಕ್ರಮ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ಹೇಳಿವೆ.

ADVERTISEMENT

ವರದಿ ಸಲ್ಲಿಕೆ: ಈ ಅಕ್ರಮ ಕುರಿತು ತನಿಖೆ ನಡೆಸುತ್ತಿರುವ ಕೇಂದ್ರ ತನಿಖಾ ದಳ (ಸಿಸಿಬಿ) ಅಧಿಕಾರಿಗಳು ಕೆಲ ಮಾಹಿತಿ ಕೇಳಿದ್ದಾರೆ. ಈವರೆಗೆ ನಾಲ್ಕು ಪತ್ರಗಳು ಬಂದಿವೆ. ಅಕ್ರಮಕ್ಕೆ ಸಂಬಂಧಿಸಿದ ವರದಿಯನ್ನು ಸದ್ಯದಲ್ಲೇ ತನಿಖಾಧಿಕಾರಿಗೆ ಕಳುಹಿಸಲಾಗುವುದು ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಬೆಂಗಳೂರು ಹಾಗೂ ರಾಜ್ಯದ ವಿವಿಧೆಡೆ 350 ಕಂದಾಯ ಮತ್ತಿತರ ನಿವೇಶನಗಳನ್ನು ಸೇಲ್‌ ಅಗ್ರಿಮೆಂಟ್‌ ಆಧಾರದಲ್ಲಿ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಸೇಲ್‌ ಡೀಡ್‌ ಮಾಡಿಕೊಡುವ ಮೂಲಕ ಸರ್ಕಾರಕ್ಕೆ ನಷ್ಟಉಂಟು ಮಾಡಿದ ಪ್ರಕರಣ ಇದಾಗಿದೆ. ನೋಂದಣಿ ಮತ್ತು ಮುದ್ರಾಂಕ ಅಧಿಕಾರಿಗಳ ದೂರಿನ ಮೇಲೆ ಸಿಸಿಬಿ ತನಿಖೆ ಕೈಗೆತ್ತಿಕೊಂಡಿದೆ.

ವಿಚಾರಣೆಗೆ ಬಂದ ಅಧಿಕಾರಿಗಳು
ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಬೆಂಗಳೂರಿನ ಕೆಲವು ಸಬ್‌ ರಿಜಿಸ್ಟ್ರಾರ್‌ಗಳು ಸೋಮವಾರ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು.ಮಂಗಳವಾರವೂ ವಿಚಾರಣೆ ಮುಂದುವರಿದಿದೆ.

ಆನೇಕಲ್‌ನ ಶಿವಪುತ್ರ ಗಂಗಾ, ದಾಸನಪುರದ ಬಿ. ಮಧುಕುಮಾರ್‌, ಪೀಣ್ಯದ ಕೆ.ಆರ್‌. ನಾಗರಾಜ, ಬಸವನಗುಡಿಯ ಭಾಸ್ಕರ್‌ ಸಿದ್ರಾಮಪ್ಪ ಚೌರ, ಮಾದನಾಯಕನಹಳ್ಳಿಯ ಲಲಿತಾ ಅಮೃತೇಶ್‌, ಲಗ್ಗೆರೆಯ ಅರವಿಂದ ಎಚ್‌.ಎಸ್‌, ಕೆಂಗೇರಿಯ ಎಂ.ವಿ ಸತೀಶ್‌, ಶಾಂತಿನಗರದ ವೈ.ಎಚ್‌.ಸರೋಜ, ಹೊಸಕೋಟೆಯ ಗಿರೀಶ್‌, ಬ್ಯಾಟರಾಯನಪುರದ ಪ್ರಭಾವತಿ ಹಾಗೂ ಕುಮಾರಪಾರ್ಕ್‌ ಪಶ್ಚಿಮದ ಎಚ್‌.ಟಿ. ಶಿವನಂಜಯ್ಯ ಸೇರಿದಂತೆ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಸಿಸಿಬಿ ಕಚೇರಿಗೆ ಬಂದಿದ್ದರು.

ಕಳೆದ ವಾರ ಆರೋಪಿಗಳಿಗೆ ಇಲ್ಲಿನ ಸಿಸಿಎಚ್‌ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿ, ವಾರದೊಳಗೆ ತನಿಖಾಧಿಕಾರಿ ಮುಂದೆ ಹಾಜರಾಗಬೇಕೆಂದು ಸೂಚಿಸಿತ್ತು. ಅದರಂತೆ ಕೋರ್ಟ್‌ ನೀಡಿದ್ದ ಗಡುವಿನೊಳಗೆ ಅಧಿಕಾರಿಗಳು ಹಾಜರಾದರು.

*
ಅಕ್ರಮ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಅಧಿಕಾರಿಗಳು ಕೇಳಿರುವ ಎಲ್ಲ ಮಾಹಿತಿಯನ್ನು ಕಳುಹಿಸಲಾಗುತ್ತಿದೆ.
-ತ್ರಿಲೋಕಚಂದ್ರ, ಕಮಿಷನರ್‌, ನೋಂದಣಿ ಮತ್ತು ಮುದ್ರಾಂಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.