ADVERTISEMENT

ಕರ್ನಾಟಕದ ಅರುಣ್ ಸೇರಿ 6 ಮಂದಿಗೆ ‘ಇನ್ಫೊಸಿಸ್ ಪ್ರಶಸ್ತಿ’

2024ನೇ ಸಾಲಿನ ಪ್ರಶಸ್ತಿ ಘೋಷಿಸಿದ ಇನ್ಫೊಸಿಸ್‌ ಸೈನ್ಸ್‌ ಫೌಂಡೇಷನ್‌

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 15:31 IST
Last Updated 14 ನವೆಂಬರ್ 2024, 15:31 IST
<div class="paragraphs"><p>ಇನ್ಫೊಸಿಸ್</p></div>

ಇನ್ಫೊಸಿಸ್

   

ಬೆಂಗಳೂರು: ಇನ್ಫೊಸಿಸ್‌ ಸೈನ್ಸ್‌ ಫೌಂಡೇಷನ್‌ 2024ನೇ ಸಾಲಿನ ‘ಇನ್ಫೊಸಿಸ್ ಪ್ರಶಸ್ತಿ’ಯನ್ನು ಘೋಷಿಸಿದ್ದು, ಕರ್ನಾಟಕದ ಅರುಣ್ ಚಂದ್ರಶೇಖರ್ ಸೇರಿ ವಿಜ್ಞಾನ ಕ್ಷೇತ್ರದ ವಿವಿಧ ವಿಭಾಗಗಳಲ್ಲಿನ ಸಂಶೋಧನೆಗೆ ಆರು ಮಂದಿ ಆಯ್ಕೆಯಾಗಿದ್ದಾರೆ. 

ಫೌಂಡೇಷನ್‌ನ ಟ್ರಸ್ಟಿಗಳಾದ ಕ್ರಿಸ್ ಗೋಪಾಲಕೃಷ್ಣನ್, ಎನ್.ಆರ್. ನಾರಾಯಣ ಮೂರ್ತಿ, ಕೆ. ದಿನೇಶ್, ಡಾ. ಪ್ರತಿಮಾ ಮೂರ್ತಿ, ಮೋಹನದಾಸ್ ಪೈ ಮತ್ತು ಎಸ್‌.ಡಿ. ಶಿಬುಲಾಲ್ ಅವರು ಪ್ರಶಸ್ತಿಗೆ ಆಯ್ಕೆಯಾದವರ ಹೆಸರನ್ನು ಗುರುವಾರ ಸುದ್ದಿಗೋಷ್ಠಿಯಲ್ಲಿ ಘೋಷಿಸಿದರು.

ADVERTISEMENT

ಅರ್ಥಶಾಸ್ತ್ರ ವಿಭಾಗದಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಅರುಣ್ ಚಂದ್ರಶೇಖರ್, ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲಿ ವಾಷಿಂಗ್ಟನ್ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸ್ಕೂಲ್‌ನ ಪ್ರಾಧ್ಯಾಪಕ ಶ್ಯಾಮ್ ಗೊಲ್ಲಕೋಟ, ಮಾನವಿಕ ಮತ್ತು ಸಮಾಜ ವಿಜ್ಞಾನ ವಿಭಾಗದಲ್ಲಿ ಎಡಿನ್‌ಬರ್ಗ್‌ ವಿಶ್ವವಿದ್ಯಾಲಯದ ಇತಿಹಾಸ, ಶಾಸ್ತ್ರೀಯ ಮತ್ತು ಪುರಾತತ್ವ ಸ್ಕೂಲ್‌ನ ಪ್ರಾಧ್ಯಾಪಕ ಮಹಮೂದ್ ಕೂರಿಯಾ ಆಯ್ಕೆಯಾಗಿದ್ದಾರೆ.

ಜೀವ ವಿಜ್ಞಾನ ವಿಭಾಗದಲ್ಲಿ ಪುಣೆಯ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಜೀವವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಸಿದ್ಧೇಶ್ ಕಾಮತ್, ಗಣಿತ ವಿಜ್ಞಾನ ವಿಭಾಗದಲ್ಲಿ ಕೊಲ್ಕತ್ತದ ಭಾರತೀಯ ಸಾಂಖ್ಯಿಕ ಸಂಸ್ಥೆಯ (ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌) ತಾತ್ತ್ವಿಕ ಸಂಖ್ಯಾ ವಿಜ್ಞಾನ ಮತ್ತು ಗಣಿತ ವಿಭಾಗದ ಪ್ರಾಧ್ಯಾಪಕಿ ನೀನಾ ಗುಪ್ತಾ ಹಾಗೂ ಭೌತವಿಜ್ಞಾನ ವಿಭಾಗದಲ್ಲಿ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕಿ ವೇದಿಕಾ ಖೇಮಾನಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಶಸ್ತಿಯು ಚಿನ್ನದ ಪದಕ, ಪ್ರಶಂಸಾ ಪತ್ರ ಮತ್ತು ತಲಾ ₹ 84.40 ಲಕ್ಷ (1 ಲಕ್ಷ ಅಮೆರಿಕನ್ ಡಾಲರ್‌) ನಗದನ್ನು ಒಳಗೊಂಡಿದೆ ಎಂದು ಟ್ರಸ್ಟಿಗಳು ವಿವರಿಸಿದರು.

ಕ್ರಿಸ್ ಗೋಪಾಲಕೃಷ್ಣನ್, ‘ವಿದ್ವಾಂಸರು ಹಾಗೂ ತಜ್ಞರನ್ನು ಒಳಗೊಂಡ ಅಂತರರಾಷ್ಟ್ರೀಯ ತೀರ್ಪುಗಾರರ ಮಂಡಳಿಯು ಈ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಿದೆ. ಕಳೆದ 15 ವರ್ಷಗಳಿಂದ ಫೌಂಡೇಷನ್, ಮಾನವನ ಬದುಕಿನ ವಿವಿಧ ಆಯಾಮಗಳ ಮೇಲೆ ಪ್ರಭಾವ ಬೀರಿರುವ ಹೊಸ ಬಗೆಯ ಸಂಶೋಧನೆಗಳು ಹಾಗೂ ವಿದ್ವತ್ತನ್ನು ಗುರುತಿಸುವ ಕೆಲಸ ಮಾಡುತ್ತಿದೆ. ಈ ವರ್ಷ ಪ್ರಶಸ್ತಿಗೆ ಸಾಧಕರ ವಯೋಮಿತಿಯನ್ನು 50ರಿಂದ 40ಕ್ಕೆ ಇಳಿಸಲಾಗಿತ್ತು. ಅಸಾಮಾನ್ಯ ಪ್ರತಿಭೆಗಳನ್ನು ಬೇಗ ಗುರುತಿಸಬೇಕೆಂಬ ಉದ್ದೇಶ ವಯೋಮಿತಿ ತಗ್ಗಿಸಿದ್ದರ ಹಿಂದಿತ್ತು’ ಎಂದು ತಿಳಿಸಿದರು.

‘ಪ್ರಶಸ್ತಿ ಪ್ರದಾನ ಸಮಾರಂಭವು ಜನವರಿಯಲ್ಲಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

ಮಾನವ ಕುಲಕ್ಕೆ ಪ್ರಯೋಜನಕಾರಿಯಾಗುವ ಅತ್ಯುತ್ತಮ ಸಂಶೋಧನೆಗಳನ್ನು ಗುರುತಿಸಲು ಮಾದರಿ ವ್ಯಕ್ತಿಗಳನ್ನು ಸೃಷ್ಟಿಸಿಕೊಡಲು ಈ ಪ್ರಶಸ್ತಿ ಸಹಕಾರಿಯಾಗಿದೆ.
–ಎನ್.ಆರ್. ನಾರಾಯಣ ಮೂರ್ತಿ, ಇನ್ಫೊಸಿಸ್‌ ಸೈನ್ಸ್‌ ಫೌಂಡೇಷನ್‌ ಟ್ರಸ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.