ADVERTISEMENT

ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ₹17 ಸಾವಿರ ಶಿಷ್ಯ ವೇತನ

ಸಾಂಪ್ರದಾಯಿಕ ಕೋರ್ಸ್‌ಗಳ ಜೊತೆಗೆ ಒಂದು ಕೌಶಲ ಅಧ್ಯಯನ

ಚಂದ್ರಹಾಸ ಹಿರೇಮಳಲಿ
Published 27 ಜೂನ್ 2024, 23:59 IST
Last Updated 27 ಜೂನ್ 2024, 23:59 IST
<div class="paragraphs"><p>ಶಿಷ್ಯ ವೇತನ</p></div>

ಶಿಷ್ಯ ವೇತನ

   

ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸಾಮಾನ್ಯ ಕೋರ್ಸ್‌ಗಳ ಜೊತೆಗೆ ಒಂದು ಕೌಶಲ ವಿಷಯ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಒಂದು ವರ್ಷದವರೆಗೆ (ಎರಡು ಸೆಮಿಸ್ಟರ್‌) ಪ್ರತಿ ತಿಂಗಳು ₹11 ಸಾವಿರದಿಂದ ₹17 ಸಾವಿರವರೆಗೆ ಶಿಷ್ಯವೇತನ ಸಿಗಲಿದೆ.

ರಾಜ್ಯದ ಉನ್ನತ ಶಿಕ್ಷಣದಲ್ಲಿ ಸಾಮಾನ್ಯ ಪದವಿ ಕೋರ್ಸ್‌ಗಳ ಜೊತೆಗೇ ಕೌಶಲಾಧಾರಿತ ವಿಷಯಗಳ ಅಧ್ಯಯನಕ್ಕೂ ಅವಕಾಶ ಮಾಡಿಕೊಡಲಾಗಿದ್ದು, ಇದೇ ಶೈಕ್ಷಣಿಕ ಸಾಲಿನಿಂದ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಕೊನೆಯ ಐದು ಮತ್ತು ಆರನೇ ಸೆಮಿಸ್ಟರ್‌ನಲ್ಲಿ ಶಿಷ್ಯ ವೇತನದ ಸೌಲಭ್ಯ ದೊರಕಲಿದೆ.

ADVERTISEMENT

ಹತ್ತು ಮಂದಿ ನಿವೃತ್ತ ಐಎಎಸ್‌ ಅಧಿಕಾರಿಗಳು ಸ್ಥಾಪಿಸಿರುವ ‘ಕ್ರಿಸ್ಪ್‌’ (ಸೆಂಟರ್‌ ಫಾರ್ ರಿಸರ್ಚ್‌ ಇನ್ ಸ್ಕೀಮ್ಸ್‌ ಆ್ಯಂಡ್‌ ಪಾಲಿಸೀಸ್‌) ಜೊತೆ ಉನ್ನತ ಶಿಕ್ಷಣದಲ್ಲಿ ಕೌಶಲಾಧಾರಿತ ಕೋರ್ಸ್‌ಗಳನ್ನು ಪರಿಚಯಿಸುವ ಒಪ್ಪಂದಕ್ಕೆ ರಾಜ್ಯ ಸರ್ಕಾರ ಸಹಿ ಹಾಕಿದೆ. ಮೊದಲ ವರ್ಷ 60 ಕಾಲೇಜುಗಳಲ್ಲಿ 3,600 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದೆ. ಮೂರು ವರ್ಷಗಳಲ್ಲಿ 239 ಕಾಲೇಜುಗಳಿಗೆ ಯೋಜನೆ ವಿಸ್ತರಿಸಲಾಗುವುದು. 2026–27ರ ವೇಳೆಗೆ 14,340 ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಗುರಿ ಹೊಂದಲಾಗಿದೆ.

ಮೊದಲ ಹಂತದಲ್ಲಿ ಬಿ.ಎಸ್‌ಸಿ, ಬಿ.ಕಾಂ, ಬಿ.ಬಿ.ಎಂ, ಬಿ.ಸಿ.ಎ ವಿದ್ಯಾರ್ಥಿಗಳಿಗೆ ಇ–ಕಾಮರ್ಸ್, ಆಹಾರ ಸರಪಳಿ ನಿರ್ವಹಣೆ, ಸರಕು ಸಾಗಣೆ ಉದ್ಯಮ, ರಿಟೇಲ್‌, ಹೆಲ್ತ್‌ಕೇರ್, ಪ್ರವಾಸೋದ್ಯಮ ಮತ್ತು ಆತಿಥ್ಯ ನಿರ್ವಹಣೆ, ಜೀವನ ವಿಜ್ಞಾನ, ಔಷಧ ಮಾರುಕಟ್ಟೆ ಮತ್ತು ಮಾರಾಟ, ಔಷಧ ತಯಾರಿ ಮತ್ತು ಗುಣಮಟ್ಟ, ಡಿಜಿಟಲ್‌ ಮಾರುಕಟ್ಟೆ, ಸಿನಿಮಾ ನಿರ್ಮಾಣ, ಜಾಹೀರಾತು, ಮಾಧ್ಯಮ ಮತ್ತು ಮನರಂಜನೆ, ಫ್ಯಾಷನ್‌ ಡಿಸೈನ್‌, ಬ್ಯಾಂಕಿಂಗ್‌, ಹಣಕಾಸು ಸೇವೆ ಮತ್ತು ಜೀವವಿಮೆ, ಎಲೆಕ್ಟ್ರಾನಿಕ್ಸ್‌, ದತ್ತಾಂಶ ವಿಶ್ಲೇಷಣೆ, ಮಾಹಿತಿ ತಂತ್ರಜ್ಞಾನ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ. ಮುಂದಿನ ಹಂತದಲ್ಲಿ ಕಲಾ ವಿಭಾಗದ ವಿದ್ಯಾರ್ಥಿಗಳಿಗೂ ಕೌಶಲ ದೊರಕಿಸಲು ಸರ್ಕಾರ ಚಿಂತನೆ ನಡೆಸಿದೆ.

‘ಆಂಧ್ರ ಪ್ರದೇಶ, ಅಸ್ಸಾಂ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಮೇಘಾಲಯ, ರಾಜಸ್ಥಾನ, ತಮಿಳುನಾಡು,  ತೆಲಂಗಾಣ, ಉತ್ತರ ಪ್ರದೇಶದ ಪದವಿ ಕಾಲೇಜುಗಳಲ್ಲಿ ‘ಕ್ರಿಸ್ಪ್‌’, ಸಾಮಾನ್ಯ ಪದವಿ ಶಿಕ್ಷಣದ ಜೊತೆಗೆ ಕೌಶಲ ವಿಷಯಗಳನ್ನು ಪರಿಚಯಿಸಿದ್ದು, ಅಲ್ಲಿನ ವಿದ್ಯಾರ್ಥಿಗಳಿಂದ ಭಾರಿ ಬೇಡಿಕೆ ಬರುತ್ತಿದೆ. ಈ ಒಪ್ಪಂದದಿಂದಾಗಿ ರಾಜ್ಯದ ಸಾಮಾನ್ಯ ಪದವಿ ವಿದ್ಯಾರ್ಥಿಗಳಿಗೂ ಭವಿಷ್ಯದಲ್ಲಿ ಕೌಶಲಾಧಾರಿತ ಉದ್ಯೋಗದ ಅವಕಾಶಗಳು ಹೆಚ್ಚಲಿವೆ’ ಎನ್ನುತ್ತಾರೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್.

ಆಗಸ್ಟ್‌ನಿಂದ ಪ್ರವೇಶ

ಸಾಮಾನ್ಯ ಶಿಕ್ಷಣದ ಜೊತೆಗೆ ಕೌಶಲ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಇದೇ ತಿಂಗಳು 30ರಿಂದ ಅರ್ಜಿಗಳನ್ನು ವಿತರಿಸಲಾಗುತ್ತದೆ. ಆಗಸ್ಟ್‌ನಿಂದ ಪ್ರವೇಶ ಪ್ರಕ್ರಿಯೆಗಳು ಆರಂಭವಾಗಲಿವೆ. 

ಕೌಶಲ ವಿಷಯಗಳ ಬೋಧನೆಗೆ ಗುರುತಿಸಿದ ಪ್ರತಿ ಕಾಲೇಜಿನ ಇಬ್ಬರು ಅಧ್ಯಾಪಕರಿಗೆ ಆಯಾ ವಿಷಯಗಳ ಬೋಧನೆಗೆ ತರಬೇತಿ ನೀಡಲಾಗುತ್ತದೆ. ಅಲ್ಲದೇ, ಆಯಾ ವಿಷಯಗಳಿಗೆ ಸಂಬಂಧಿಸಿದ ಕಂಪನಿಗಳ ಅಧಿಕಾರಿಗಳು ಹಾಗೂ ತಜ್ಞರು ವಿಶೇಷ ತರಗತಿಗಳನ್ನು ತೆಗೆದುಕೊಳ್ಳಲಿದ್ದಾರೆ. ಕೊನೆಯ ಎರಡು ಸೆಮಿಸ್ಟರ್‌ನಲ್ಲಿ ಶಿಷ್ಯ ವೇತನ ನೀಡಲಾಗುತ್ತದೆ. ವಿದ್ಯಾರ್ಥಿಗಳು ಪದವಿ ಶಿಕ್ಷಣ ಪೂರೈಸಿದ ತಕ್ಷಣ ಅವರಿಗೆ ಉದ್ಯೋಗ ದೊರಕಿಸುವ ಭರವಸೆಯನ್ನೂ ‘ಕ್ರಿಸ್ಪ್‌’ ನೀಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.