ADVERTISEMENT

ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ಸ್ಕಿನ್‌ ಬ್ಯಾಂಕ್‌ ಆರಂಭ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2018, 13:24 IST
Last Updated 27 ಸೆಪ್ಟೆಂಬರ್ 2018, 13:24 IST

ಬೆಳಗಾವಿ: ಇಲ್ಲಿನ ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ರೋಟರಿ ಕ್ಲಬ್‌ ಸಹಯೋಗದಲ್ಲಿ ಸ್ಥಾಪನೆಯಾದ ಸ್ಕಿನ್‌ (ಚರ್ಮ) ಬ್ಯಾಂಕ್‌ಗೆ ಗುರುವಾರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಚಾಲನೆ ನೀಡಿದರು.

ಬ್ಲಡ್‌ ಬ್ಯಾಂಕ್‌, ಕಣ್ಣಿನ ಬ್ಯಾಂಕ್‌ ರೀತಿಯಲ್ಲಿಯೇ ಸ್ಕಿನ್‌ ಬ್ಯಾಂಕ್‌ ಕಾರ್ಯನಿರ್ವಹಿಸಲಿದೆ. ಯಾರು ಬೇಕಾದರೂ ತಮ್ಮ ಚರ್ಮವನ್ನು ದಾನ ಮಾಡಬಹುದು. ಆ ಚರ್ಮವನ್ನು ಇಲ್ಲಿ ರಾಸಾಯನಿಕವಾಗಿ ಸಂಸ್ಕರಿಸಿ, ಸುರಕ್ಷಿತವಾಗಿ ಇಟ್ಟುಕೊಳ್ಳಲಾಗುವುದು. ಮೈ ಸುಟ್ಟುಕೊಂಡ ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಈ ಚರ್ಮವನ್ನು ಬಳಸಿಕೊಳ್ಳಲಾಗುತ್ತದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ತಿಳಿಸಿದರು.

ಕಣ್ಣು, ಮೂತ್ರಪಿಂಡ, ರಕ್ತವನ್ನು ದಾನ ಮಾಡುವಂತೆ ಚರ್ಮ ದಾನದ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ರೋಟರಿ ಕ್ಲಬ್‌ ಸೇರಿದಂತೆ ಇತರ ಸ್ವಯಂ ಸೇವಾ ಸಂಸ್ಥೆಗಳು ಜಾಗೃತಿ ಮೂಡಿಸಲು ಮುಂದಾಗಬೇಕು ಎಂದು ಹೇಳಿದರು.

ADVERTISEMENT

ಯಾರು ದಾನ ಮಾಡಬಹುದು

ಚರ್ಮ ಸಂಬಂಧಿತ ರೋಗಕ್ಕೆ ಒಳಪಡದವರು ಯಾರು ಬೇಕಾದವರೂ ತಮ್ಮ ಚರ್ಮವನ್ನು ದಾನವಾಗಿ ಕೊಡಬಹುದು. ದಾನ ಮಾಡಲು ಒಪ್ಪಿಕೊಂಡ ವ್ಯಕ್ತಿಯ ಮರಣಾನಂತರವೇ ಚರ್ಮವನ್ನು ತೆಗೆದುಕೊಳ್ಳಲಾಗುತ್ತದೆ. ವ್ಯಕ್ತಿಯು ಮೃತ ಹೊಂದಿದ 6 ಗಂಟೆಯೊಳಗೆ ಚರ್ಮವನ್ನು ತೆಗೆಯಲಾಗುತ್ತದೆ. ಬೆನ್ನು, ಎದೆ, ಹೊಟ್ಟೆ ಹಾಗೂ ತೊಡೆ ಚರ್ಮದ ಮೇಲಿನ ಪದರವನ್ನು ತೆಗೆಯಲಾಗುತ್ತದೆ. ಇದನ್ನು ಸ್ಕಿನ್‌ ಬ್ಯಾಂಕ್‌ಗೆ ತಂದು ರಾಸಾಯನಿಕ ಮಿಶ್ರಣದಲ್ಲಿ ಸಂಸ್ಕರಿಸಿ, ಶೇಖರಿಸಿ ಇಡಲಾಗುತ್ತದೆ. ಸುಮಾರು 5 ವರ್ಷಗಳ ಕಾಲ ಕೆಡದಂತೆ ಇಡಬಹುದು.

ಯಾವ ರೀತಿ ಉಪಯೋಗ

ಬೆಂಕಿಯಿಂದ ಮೈ ಸುಟ್ಟುಕೊಂಡ ರೋಗಿಗಳಿಗೆ ಚಿಕಿತ್ಸೆ ನೀಡಲು ಈ ಚರ್ಮವನ್ನು ಬಳಸಲಾಗುತ್ತದೆ. ಸುಟ್ಟುಹೋದ ದೇಹದ ಭಾಗದ ಮೇಲೆ ದಾನಿಯ ಚರ್ಮವನ್ನು ಅಂಟಿಸಲಾಗುತ್ತದೆ. ಹೊಸಚರ್ಮ ಉತ್ಪನ್ನವಾಗುವವರೆಗೆ ದಾನಿಯ ಚರ್ಮವು ರಕ್ಷಾ ಕವಚದಂತೆ ಕೆಲಸ ನಿರ್ವಹಿಸುತ್ತದೆ. ಯಾವುದೇ ಸೋಂಕು ತಾಗದಂತೆ ನೋಡಿಕೊಳ್ಳುತ್ತದೆ. ಇದರಿಂದ ರೋಗಿಯು ಬೇಗ ಗುಣಮುಖ ಹೊಂದುತ್ತಾರೆ.

ವೆಚ್ಚವೂ ಕಡಿಮೆ

ಇತ್ತೀಚಿನ ಆಧುನಿಕ ಚಿಕಿತ್ಸಾ ಪದ್ಧತಿಯಲ್ಲಿ ಸುಟ್ಟುಹೋದ ಭಾಗಗಳಿಗೆ ಕೃತಕ ಚರ್ಮ ಅಂಟಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಇದು ತುಂಬಾ ದುಬಾರಿಯಾಗಿದ್ದು, ಬಡ ರೋಗಿಗಳ ಕೈಗೆಟ್ಟುಕುತ್ತಿಲ್ಲ. ದಾನಿಗಳಿಂದ ಚರ್ಮ ದೊರೆತರೆ ಅತ್ಯಂತ ಕಡಿಮೆ ವೆಚ್ಚದಲ್ಲಿಯೇ ಚಿಕಿತ್ಸೆ ನೀಡಬಹುದಾಗಿದೆ ಎಂದು ಆಸ್ಪತ್ರೆಯ ಪ್ಲಾಸ್ಟಿಕ್‌ ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ರಾಜೇಶ ಶಂಕರ ಪವಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.