ಬೆಂಗಳೂರು: ಬೆಂಕಿ ಅವಘಡ, ರಸ್ತೆ ಅಪಘಾತ ಸೇರಿ ವಿವಿಧ ಪ್ರಕರಣಗಳಿಂದಾಗಿ ಮನುಷ್ಯರ ಚರ್ಮಕ್ಕೆ ಬೇಡಿಕೆ ಹೆಚ್ಚುತ್ತಿದೆ. ಆದರೆ, ಚರ್ಮ ದಾನದ ಬಗ್ಗೆ ಜನರಲ್ಲಿ ಅಷ್ಟಾಗಿ ಜಾಗೃತಿ ಮೂಡದಿದ್ದರಿಂದ ರಾಜ್ಯದ ಪ್ರಥಮ ಸರ್ಕಾರಿ ಚರ್ಮ ಬ್ಯಾಂಕ್‌ನಲ್ಲಿ ಸದ್ಯ 11 ಸಾವಿರ ಚದರ ಸೆಂ.ಮೀ. ಚರ್ಮ ಮಾತ್ರ ದಾಸ್ತಾನು ಇದೆ.
ಇಷ್ಟು ಚರ್ಮ 6 ರಿಂದ 15 ಮಂದಿಗೆ ಸಹಕಾರಿಯಾಗಲಿದೆ. ಪ್ರತಿ ವರ್ಷ ದೀಪಾವಳಿ ಸಂದರ್ಭದಲ್ಲಿ ಹೆಚ್ಚಾಗಿ ಪಟಾಕಿ ಅವಘಡಗಳು ವರದಿಯಾಗುತ್ತಿವೆ. ಈ ಅವಧಿಯಲ್ಲಿ ಸಹಜವಾಗಿ ಚರ್ಮಕ್ಕೆ ಹೆಚ್ಚಿನ ಬೇಡಿಕೆ ಉಂಟಾಗಲಿದೆ. ವಿವಿಧ ಆಸ್ಪತ್ರೆಗಳೂ ಚರ್ಮ ಕಸಿಗಾಗಿ ಚರ್ಮಕ್ಕೆ ಬೇಡಿಕೆ ಸಲ್ಲಿಸಲಿವೆ. ಚರ್ಮ ದಾನಿಗಳ ಸಂಖ್ಯೆ ಏರಿಕೆಯಾಗದಿದ್ದರೆ ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.
2016ರಲ್ಲಿ ಆರಂಭವಾದ ಚರ್ಮ ಬ್ಯಾಂಕ್, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್‌ಐ) ವಿಕ್ಟೋರಿಯಾ ಆಸ್ಪತ್ರೆಯಡಿ ಕಾರ್ಯನಿರ್ವಹಿಸುತ್ತಿದೆ. ಇದುವರೆಗೆ 202 ಮೃತ ದಾನಿಗಳಿಂದ ಚರ್ಮ ಸಂಗ್ರಹಿಸಿರುವ ಬ್ಯಾಂಕ್, ಇತರ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳಿಗೆ ಪೂರೈಸಿದೆ. ಈವರೆಗೆ 201 ಮಂದಿಗೆ ಚರ್ಮ ಕಸಿ ನಡೆಸಲು ಈ ಬ್ಯಾಂಕ್ ಸಹಕಾರಿಯಾಗಿದೆ.
2020 ಹಾಗೂ 2021ರಲ್ಲಿ ಕೋವಿಡ್ ಕಾರಣ ಚರ್ಮ ಸಂಗ್ರಹಕ್ಕೆ ಹಿನ್ನಡೆಯಾಗಿತ್ತು. ಕೋವಿಡ್ ಮೊದಲ ಅಲೆಯಲ್ಲಿ ಒಬ್ಬರಿಂದ ಮಾತ್ರ ಚರ್ಮ ಸಂಗ್ರಹ ಪ್ರಕ್ರಿಯೆ ನಡೆದಿತ್ತು. ಎರಡನೇ ಅಲೆಯ ಅವಧಿಯಲ್ಲಿ ಯಾವುದೇ ಮೃತ ವ್ಯಕ್ತಿಯ ಕುಟುಂಬದ ಸದಸ್ಯರು ಚರ್ಮ ದಾನಕ್ಕೆ ಸಂಬಂಧಿಸಿದಂತೆ ಚರ್ಮದ ಬ್ಯಾಂಕ್ ಸಂಪರ್ಕಿಸಿರಲಿಲ್ಲ. ಇದರಿಂದ ಬೇಡಿಕೆ ಹಾಗೂ ಪೂರೈಕೆ ನಡುವೆ ಭಾರಿ ವ್ಯತ್ಯಯವಾಗಿತ್ತು.
ಚರ್ಮದ ಕಸಿಗೆ ನೆರವು: ‘ಸುಟ್ಟ ಗಾಯ, ರಸ್ತೆ ಅಪಘಾತ ಸೇರಿದಂತೆ ವಿವಿಧ ಸಂದರ್ಭದಲ್ಲಿ ಶೇ 50ಕ್ಕೂ ಅಧಿಕ ಚರ್ಮ ಹಾನಿಯಾದವರು ಚೇತರಿಸಿಕೊಳ್ಳಲು ಚರ್ಮದ ಕಸಿ ಅಗತ್ಯ. ವ್ಯಕ್ತಿ ಮೃತಪಟ್ಟ 6ರಿಂದ 8 ಗಂಟೆಯೊಳಗೆ ಚರ್ಮ ಪಡೆದುಕೊಳ್ಳಬೇಕು. ಚರ್ಮ ದಾನದ ಬಗ್ಗೆ ಬಹುತೇಕರಲ್ಲಿ ತಪ್ಪುಕಲ್ಪನೆಯಿದೆ. ಇದರಿಂದಾಗಿ ಚರ್ಮ ಸಂಗ್ರಹಕ್ಕೆ ಹಿನ್ನಡೆಯಾಗುತ್ತಿದೆ’ ಎಂದು ಸ್ಕಿನ್ ಬ್ಯಾಂಕ್ ಮುಖ್ಯಸ್ಥ ಡಾ.ಕೆ.ಟಿ. ರಮೇಶ್ ತಿಳಿಸಿದರು.
‘ವ್ಯಕ್ತಿ ಮೃತಪಟ್ಟಾಗ ಕುಟುಂಬಸ್ಥರು ಅಂಗಾಂಗದ ಮಾದರಿಯಲ್ಲಿಯೇ ಚರ್ಮವನ್ನು ಕೂಡ ದಾನ ಮಾಡಬಹುದು. ರಾಜ್ಯದ ವಿವಿಧೆಡೆಯಿಂದಷ್ಟೇ ಅಲ್ಲದೆ, ಹೊರರಾಜ್ಯಗಳಿಂದಲೂ ಚರ್ಮಕ್ಕೆ ಬೇಡಿಕೆ ಸಲ್ಲಿಕೆಯಾಗುತ್ತಿದೆ. ಆದರೆ, ಬೇಡಿಕೆಯಷ್ಟು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದರು.
18 ವರ್ಷ ದಾಟಿದ ವ್ಯಕ್ತಿ ಮರಣ ಹೊಂದಿದ ಬಳಿಕ ಕುಟುಂಬದ ಸದಸ್ಯರ ಒಪ್ಪಿಗೆ ಪಡೆದು ಕಾಲು ಹಾಗೂ ತೊಡೆಯ ಭಾಗದ ಚರ್ಮದ ಮೇಲ್ಪದರ ಪಡೆಯಲಾಗುತ್ತದೆ. ದಾನಿಯು ಎಚ್ಐವಿ ಎಚ್‌ಸಿವಿ ಚರ್ಮದ ಕ್ಯಾನ್ಸರ್ ಪೀಡಿತರಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಚರ್ಮ ಪಡೆದು ಅಗತ್ಯ ಇರುವವರಿಗೆ ಅದನ್ನು ನೀಡಲಾಗುತ್ತದೆ. ವೈದ್ಯಕೀಯ ಉಪಕರಣದ ಸಹಾಯದಿಂದ ರಕ್ತಸ್ರಾವ ಆಗದ ರೀತಿಯಲ್ಲಿ ಚರ್ಮದ ಮೇಲ್ಪದರವನ್ನು ಮಾತ್ರ ತೆಗೆದು ಬ್ಯಾಂಡೇಜ್ ಮಾಡಲಾಗುತ್ತದೆ. ಸಂಸ್ಕರಿಸಿದ ಚರ್ಮವನ್ನು 5 ವರ್ಷದವರೆಗೂ ಶೇಖರಣೆ ಮಾಡಬಹುದು ಎಂದು ಚರ್ಮ ಬ್ಯಾಂಕಿನ ಉಸ್ತುವಾರಿ ಬಿ.ಎನ್. ನಾಗರಾಜ್ ತಿಳಿಸಿದರು. ‘ಜನರು ನೇತ್ರದಾನ ಹಾಗೂ ಇತರ ಅಂಗಾಂಗಗಳನ್ನು ದಾನ ಮಾಡಲು ಸಿದ್ಧರಿದ್ದಾರೆ. ಆದರೆ ಚರ್ಮದಾನ ಮಾಡುವುದರಿಂದ ದೇಹ ವಿರೂಪಗೊಳ್ಳುತ್ತದೆ ಎಂಬ ತಪ್ಪು ಕಲ್ಪನೆಯಿಂದ ಹಿಂಜರಿಯುತ್ತಾರೆ. ದಾನಿಗಳಿಂದ ದೇಹದ ಎಲ್ಲ ಚರ್ಮ ಪಡೆಯುವುದಿಲ್ಲ. ತೊಡೆಗಳು ಮತ್ತು ಕಾಲುಗಳಿಂದ (1000ದಿಂದ 1500 ಚದರ ಸೆಂ.ಮೀ) ಚರ್ಮದ ಹೊರ ಪದರವನ್ನು ಮಾತ್ರ ಪಡೆಯಲಾಗುತ್ತದೆ’ ಎಂದರು.
ಸಹಾಯವಾಣಿ: 080 26703633 ಅಥವಾ 8277576147
ಚರ್ಮ ದಾನದ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಜನರಿಗೆ ಜಾಗೃತಿ ಮೂಡುತ್ತಿದೆ. ಇದು ಕೂಡ ಅಂಗಾಂಗ ದಾನದಂತೆ ಸರಳ ಪ್ರಕ್ರಿಯೆ. ಜನರು ದಾನಕ್ಕೆ ಮುಂದೆ ಬರಬೇಕು.-ಡಾ.ಕೆ.ಟಿ. ರಮೇಶ್ ಚರ್ಮ, ಬ್ಯಾಂಕ್ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.