ಮಂಗಳೂರು: ‘ಸಾಹಿತ್ಯ ದಕ್ಕಬೇಕಾದರೆ, ಅದಕ್ಕೆ ಸಂಗೀತ, ನೃತ್ಯ ಸೇರಿದಂತೆ ಭಾರತೀಯ ಸಂಸ್ಕೃತಿಯ ಎಲ್ಲವೂ ಬೇಕು. ಅಂತಹ ಸಾಹಿತ್ಯ ನನ್ನದಾಗಿದ್ದು, ನನ್ನ ಸಾಹಿತ್ಯದ್ದು ಭಾರತೀಯ ಪರಂಪರೆ’ ಎಂದು ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಹೇಳಿದರು.
‘ತತ್ವಶಾಸ್ತ್ರದಿಂದಲೇ ನನ್ನ ಬರವಣಿಗೆಗಳಿಗೆ ತೂಕ ಬಂದಿದೆ. ತತ್ವಶಾಸ್ತ್ರದ ಅಧ್ಯಯನದಿಂದ ಯಾವುದೇ ವಿಷಯದ ಮೂಲವನ್ನು ತಿಳಿಯಲು ಸಾಧ್ಯವಾಗುತ್ತದೆ. ಈ ಮೂಲಕ ಪಾತ್ರದ ಆಳಕ್ಕೆ ಹೋಗಲು ಸಾಧ್ಯವಾಗುತ್ತದೆ. ಇದರಿಂದ ಕೃತಿಯ ಮೌಲ್ಯವೂ ಹೆಚ್ಚಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
‘ನನ್ನ ಕೃತಿಗಳು ದೇಶದ ಹಲವು ಭಾಷೆಗಳಿಗೆ ಅನುವಾದಿಗೊಂಡಿವೆ. ಅಲ್ಲಿನ ಓದುಗರು ಅದನ್ನು ತಮ್ಮದೇ ಎಂದು ಆ ಭಾಷಿಯಕರು ಭಾವಿಸುತ್ತಾರೆ. ಭಾರತ ಒಂದು ಎನ್ನುವುದು ನನ್ನ ಅಂತರಂಗದಲ್ಲಿದೆ. ಇಡೀ ಭಾರತದ ಆಚಾರ–ವಿಚಾರಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವಿದ್ದರೂ, ಮೂಲ ಸಂಸ್ಕೃತಿ ಮಾತ್ರ ಒಂದೇ ಆಗಿದೆ’ ಎಂದು ತಿಳಿಸಿದರು.
ಕನ್ನಡ ಸಾಹಿತ್ಯದಲ್ಲಿ ಇಂದು ನಮಗೆ ಬೇರೇನೂ ಬೇಕಾಗಿಲ್ಲ. ಹೀಗಾದರೆ ನಮ್ಮನ್ನು ಯಾರು ಒಪ್ಪಿಕೊಳ್ಳುತ್ತಾರೆ. ಸಣ್ಣ ಬಾವಿಯ ನೀರಿನಲ್ಲಿ ಗಂಗಾ, ಯಮುನಾ, ಸರಸ್ವತಿಯನ್ನು ಕಾಣುವ ನಾವು, ಜೀವನದಲ್ಲಿ ಇಡೀ ಭಾರತವನ್ನು ಒಂದಾಗಿ ಏಕೆ ಕಾಣುವುದಿಲ್ಲ ಎಂದು ಪ್ರಶ್ನಿಸಿದರು.
‘ನವ್ಯ ಸಾಹಿತ್ಯದಲ್ಲಿ ಸಾಹಿತಿಯೂ ಒಬ್ಬ ವಿಮರ್ಶಕನಾಗಿ ಇರಬೇಕು ಎನ್ನುವ ಕಟ್ಟುಪಾಡಿತ್ತು. ಇದು ಅತ್ಯಂತ ಅಪಾಯಕಾರಿ. ನಾನು ಅದನ್ನು ಗಣನೆಗೆ ತೆಗೆದುಕೊಳ್ಳದೇ, ನನ್ನಷ್ಟಕ್ಕೆ ಸಾಹಿತ್ಯವನ್ನು ಬರೆಯುತ್ತ ಹೋದೆ. ಬರೆಯುವಾಗ ಓದುಗರು ಗಣನೆಗೆ ಬರುವುದಿಲ್ಲ. ಅಲ್ಲಿ ಸತ್ಯ ಏನಿದೆ ಎಂಬುದಷ್ಟೇ ನನ್ನ ಶೋಧನೆ. ಅಧ್ಯಯನ, ಅನುಭವದಿಂದ ಗಟ್ಟಿ ಸಾಹಿತ್ಯ ನೀಡಿದ್ದೇನೆ’ ಎಂದು ಪ್ರತಿಪಾದಿಸಿದರು.
ಮೀಟು ಭಯ!: ‘ಹಿಮಾಲಯದಲ್ಲಿ ಮದುವೆಯ ವಿಶಿಷ್ಟ ಪದ್ಧತಿ ಇದೆ. ವರನು, ವಧುವನ್ನು ಹೊತ್ತುಕೊಂಡು ಹೋಗುತ್ತಾನೆ. ಗಂಡಿನವರು, ಹೆಣ್ಣಿನವರಿಗೆ ಪರಸ್ಪರ ಸಾಂಕೇತಿಕ ಹೊಡೆದಾಟ ನಡೆಯುತ್ತದೆ. ಅದರಲ್ಲಿ ಗಂಡಿನವರು ಗೆಲ್ಲುತ್ತಾರೆ. ಆಗ ಮದುವೆ ಆಗುತ್ತದೆ. ನಮ್ಮಲ್ಲೂ ಇಂತಹ ಪದ್ಧತಿ ಇರಬೇಕು ಎಂದು ನನಗೆ ಅನ್ನಿಸಿದ್ದಿದೆ’ ಎಂದು ಡಾ.ಎಸ್.ಎಲ್. ಭೈರಪ್ಪ ಹೇಳಿದರು.
‘ಆದರೆ, ಇಂದಿನ ಸ್ಥಿತಿಯಲ್ಲಿ ಅದು ಸಾಧ್ಯವಾಗಲಿಕ್ಕಿಲ್ಲ. ಏಕೆಂದರೆ ಒಂದು, ಈಗಿನ ಹುಡುಗರಿಗೆ ವಧುವನ್ನು ಎತ್ತಿಕೊಂಡು ಹೋಗುವಷ್ಟು ಶಕ್ತಿ ಇಲ್ಲ. ಇನ್ನೊಂದು ಮೀಟು ಭಯವೂ ಕಾಡುತ್ತದೆ’ ಎಂದು ಹೇಳುವ ಮೂಲಕ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.