ಮೈಸೂರು: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇಯ ಬಿಡದಿಯ ಬೈಪಾಸ್ ಮುಕ್ತಾಯದ ಜಾಗದಲ್ಲಿ ರಸ್ತೆ ಕಿತ್ತು ಬಂದಿರುವ ಬಗ್ಗೆ ಸಂಸದ ಪ್ರತಾಪಸಿಂಹ ಬುಧವಾರ ಟ್ವಿಟರ್ ಹಾಗೂ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದು, ‘ಮಾಧ್ಯಮಗಳೇ ರಸ್ತೆ ಕಿತ್ತು ಬಂದಿಲ್ಲ, ಎಕ್ಸ್‌ಪ್ಯಾನ್‌ಶನ್ ಜಾಯಿಂಟ್ ಬಳಿ ಇದ್ದ ಸಣ್ಣ ನ್ಯೂನತೆಯನ್ನು ಸರಿಪಡಿಸಲಾಗುತ್ತಿದೆ’ ಎಂದಿದ್ದಾರೆ.
‘ಉದ್ಘಾಟನೆ ಮರುದಿನವೇ ಕಿತ್ತುಬಂದ ದಶಪಥ!’ ಎಂಬ ‘ಪ್ರಜಾವಾಣಿ’ ವರದಿಯನ್ನು ಸಂಸದರು ಹಂಚಿಕೊಂಡಿದ್ದು, ‘ಎಕ್ಸ್‌ಪ್ಯಾನ್‌ಶನ್ ಜಾಯಿಂಟ್’ ಚಿತ್ರವನ್ನೂ ಹಾಕಿದ್ದಾರೆ. ಅದಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
‘ಎರಡೂ ಫೋಟೊಗಳಲ್ಲಿ ಯಾಕೆ ವ್ಯತ್ಯಾಸವಿದೆ. ಎಲ್ಲ ಓಕೆ ಡಿವೈಡರ್ ಬಣ್ಣ ಬದಲಿ ಯಾಕೆ’ ಎಂದು ಪ್ರಶ್ನಿಸಿದ್ದಾರೆ. ಎಲ್ಲಾ ನ್ಯೂನತೆಗಳನ್ನು ಸರಿಪಡಿಸಿಕೊಂಡೇ ಉದ್ಘಾಟಿಸಬೇಕಿತ್ತು. ಸರ್ವಿಸ್ ರಸ್ತೆಯಿಲ್ಲದೇ ಟೋಲ್ ಸುಲಿಗೆ ಪ್ರಾರಂಭಿಸಿದ್ದೀರಾ’ ಎಂದು ಯಶವಂತ್ ಎಂಬುವರು ಟ್ವೀಟ್ ಮಾಡಿದ್ದಾರೆ.
ಎಲ್ಲೂ ತೊಂದರೆ ರಹಿತವಾಗಿ ಸರ್ವಿಸ್ ರಸ್ತೆ ಕೊಟ್ಟಿಲ್ಲ: ‘ಸರ್ವಿಸ್ ರಸ್ತೆಯಲ್ಲಿ ಉಚಿತವಾಗಿ ಹೋಗಬಹುದು. ಆದರೆ, ದೇಶದ ಯಾವುದೇ ಎಕ್ಸ್‌ಪ್ರೆಸ್‌ವೇಯ ಸರ್ವೀಸ್ ರಸ್ತೆಗಳಲ್ಲಿ ತೊಂದರೆ ಇದ್ದೇ ಇರುತ್ತದೆ’ ಎಂದು ಪ್ರತಾಪಸಿಂಹ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತ ನಾಡಿರುವ ವಿಡಿಯೊ ಹಂಚಿ ಕೊಂಡಿರುವ ಅವರು, ‘ನೈಸ್ ರಸ್ತೆ, ತುಮಕೂರು ರಸ್ತೆಯಲ್ಲೂ ಟೋಲ್ ಇದೆ. ಅಲ್ಲಿ ಸರ್ವೀಸ್ ರಸ್ತೆ ಇದೆಯೇ? ಲೋಕೋಪಯೋಗಿ ಇಲಾಖೆ ನಿರ್ಮಿಸಿರುವ ತಿ.ನರಸೀಪುರ ರಸ್ತೆ, ಪಿರಿಯಾಪಟ್ಟಣ– ಗೋಣಿಕೊಪ್ಪ ರಸ್ತೆಯಲ್ಲಿ ಟೋಲ್ ಇಲ್ಲವೇ? ವಿಶ್ವದ ಎಲ್ಲ ಎಕ್ಸ್‌ಪ್ರೆಸ್‌ವೇಯಲ್ಲೂ ಟೋಲ್ ಕಟ್ಟಿಸಿಕೊಳ್ಳುತ್ತಿಲ್ಲವೇ’ ಎಂದು ಪ್ರತಾಪಸಿಂಹ ಪ್ರಶ್ನಿಸಿದ್ದಾರೆ.
‘ದೇಶದ ಮೊದಲ ಎಕ್ಸ್‌ಪ್ರೆಸ್ ವೇನಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ ಅವಕಾಶವಿಲ್ಲ. ಸರ್ವೀಸ್ ರಸ್ತೆಯ ಕೆಲವು ಜಾಗಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಬಾಕಿ ಇದೆ. ಹಳೆ ರಸ್ತೆಯಲ್ಲಿ ವ್ಯತ್ಯಾಸವೇನಾಗಿಲ್ಲ. ಅಲ್ಲಿ ಪ್ರಯಾಣಿಸಬಹುದು. ರಾಮನಗರ, ಚನ್ನಪಟ್ಟಣದ ಜನ ₹ 135 ಟೋಲ್ ಕಟ್ಟಬೇಕು. ಹಳೆ ಕ್ರಿಯಾಯೋಜನೆ ಸರಿಪಡಿಸಿ ಸಮಸ್ಯೆ ಬಗೆಹರಿಸಲಾಗುವುದು’ ಎಂದಿದ್ದಾರೆ.
‘ಮನೆ ಕಟ್ಟಿದರೂ ತೊಂದರೆಯಾಗುತ್ತದೆ. ದೊಡ್ಡ ರಸ್ತೆ ಮಾಡುವಾಗ ಸಣ್ಣಪುಟ್ಟ ತೊಡಕುಗಳಾಗಿವೆ. ಎಲ್ಲವನ್ನೂ ನಿವಾರಿಸಲಾಗುವುದು’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.