ಬೆಂಗಳೂರು: ರಾಜ್ಯದಲ್ಲಿ ಹಾವು ಕಡಿತವನ್ನು ‘ಘೋಷಿತ ಕಾಯಿಲೆ’ಯೆಂದು ಗುರುತಿಸಿದ್ದರಿಂದ ಖಾಸಗಿ ಆಸ್ಪತ್ರೆಗಳೂ ಹಾವು ಕಡಿತ ಪ್ರಕರಣಗಳನ್ನು ದಾಖಲಿಸ ಲಾರಂಭಿಸಿವೆ. ಇದರಿಂದಾಗಿ ಈ ವರ್ಷ ಗರಿಷ್ಠ ಸಂಖ್ಯೆಯಲ್ಲಿ ಹಾವು ಕಡಿತ ಹಾಗೂ ಕಡಿತದಿಂದಾದ ಮರಣ ಪ್ರಕರಣಗಳು ವರದಿಯಾಗಿವೆ.
ಹಾವು ಕಡಿತ ಪ್ರಕರಣಗಳ ವರದಿಯನ್ನು ಆರೋಗ್ಯ ಇಲಾಖೆ ಕಡ್ಡಾಯಗೊಳಿಸಿದೆ. ಈ ವರ್ಷ ಒಂಬತ್ತು ತಿಂಗಳ ಅವಧಿಯಲ್ಲಿಯೇ 9,529 ಹಾವು ಕಡಿತ ಪ್ರಕರಣಗಳು ವರದಿಯಾದರೆ, ಕಡಿತದಿಂದ 69 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಹಾವು ಕಡಿತಕ್ಕೆ ಒಳಗಾದವರ ಹಾಗೂ ಈ ಕಡಿತದಿಂದ ಮೃತಪಟ್ಟವರ ಸಮಗ್ರ ಮಾಹಿತಿ ದೊರೆಯದಿದ್ದುದರಿಂದಾಗಿ ಆರೋಗ್ಯ ಇಲಾಖೆಯು ಫೆಬ್ರವರಿಯಲ್ಲಿ ಹಾವು ಕಡಿತವನ್ನು ಘೋಷಿತ ಕಾಯಿಲೆಯೆಂದು ಗುರುತಿಸಿತ್ತು. ಇದರಿಂದಾಗಿ ಹಾವು ಕಡಿತಕ್ಕೆ ಒಳಗಾಗಿ ಒಳರೋಗಿ ಹಾಗೂ ಹೊರರೋಗಿಗಳಾಗಿ ಆಸ್ಪತ್ರೆಗೆ ಭೇಟಿ ನೀಡಿದವರು, ಮರಣ ಹೊಂದಿದವರ ವಿವರವನ್ನು ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ವಿಜ್ಞಾನ ಸಂಸ್ಥೆಗಳು ಕಡ್ಡಾಯವಾಗಿ ಕೇಂದ್ರ ಸರ್ಕಾರದ ಸಮಗ್ರ ಆರೋಗ್ಯ ಮಾಹಿತಿ ವೇದಿಕೆಯಡಿ ದಾಖಲಿಸುತ್ತಿವೆ.
ಹಾವು ಕಡಿತವನ್ನು ಘೋಷಿತ ಕಾಯಿಲೆಯೆಂದು ಗುರುತಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ. ಈ ಕ್ರಮದಿಂದ ಹಾವು ಕಡಿತ ಪ್ರಕರಣಗಳ ಮೇಲೆ ನಿಗಾ ಮತ್ತು ನಿರ್ವಹಣೆ ಇಲಾಖೆಗೆ ಸಾಧ್ಯವಾಗಿದ್ದು, ಮಾರ್ಚ್ ಬಳಿಕ ಅಧಿಕ ಸಂಖ್ಯೆಯಲ್ಲಿ ಹಾವು ಕಡಿತ ಹಾಗೂ ಮರಣ ಪ್ರಕರಣಗಳು ವರದಿಯಾಗುತ್ತಿವೆ. 2022ರಲ್ಲಿ ರಾಜ್ಯದಲ್ಲಿ 3,425 ಹಾವು ಕಡಿತ ಪ್ರಕರಣಗಳು ವರದಿಯಾದರೆ, 17 ಮಂದಿ ಕಡಿತದಿಂದ ಮೃತಪಟ್ಟಿದ್ದರು.
ಕಳೆದ ವರ್ಷ 6,596 ಪ್ರಕರಣಗಳು ವರದಿಯಾಗಿವೆ. ಕಡಿತಕ್ಕೆ ಒಳಗಾದವ ರಲ್ಲಿ 19 ಮಂದಿ ಮೃತಪಟ್ಟಿದ್ದರು. ಕೃಷಿ ಕೆಲಸದಲ್ಲಿ ತೊಡಗಿರುವಾಗ ಹಾವು ಕಚ್ಚಿ ಮೃತಪಟ್ಟವರಿಗೆ ಕೃಷಿ ಇಲಾಖೆಯಿಂದ ₹1 ಲಕ್ಷ ಪರಿಹಾರ ನೀಡುವ ಯೋಜನೆ ಜಾರಿಯಲ್ಲಿದೆ. ಇತರರಿಗೂ ಪರಿಹಾರ ಒದಗಿಸುವ ಬಗ್ಗೆ ಆರೋಗ್ಯ ಇಲಾಖೆಯಿಂದ ಕ್ರಿಯಾಯೋಜನೆ ರೂಪಿಸಲಾಗುತ್ತಿದೆ.
ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆಗಳು ಹಾಗೂ ಆಯ್ದ ಸಮುದಾಯ ಆರೋಗ್ಯ ಕೇಂದ್ರಗಳನ್ನು ಹಾವು ಕಡಿತ ಚಿಕಿತ್ಸಾ ಕೇಂದ್ರಗಳನ್ನಾಗಿ ಗುರುತಿಸಲಾಗಿದೆ. ಹಾವಿನ ನಂಜಿನ ಲಕ್ಷಣಗಳು ವ್ಯಕ್ತಿಗೆ ಕಂಡುಬಂದಲ್ಲಿ ತಕ್ಷಣ ರೋಗಿಯ ಅಥವಾ ಸಂಬಂಧಿಕರ ಒಪ್ಪಿಗೆ ಪತ್ರ ಪಡೆದು, ‘ಆ್ಯಂಟಿ ಸ್ನೇಕ್ ವೆನಮ್’ ಒದಗಿಸಲಾಗುತ್ತಿದೆ. 2030ರ ವೇಳೆಗೆ ಹಾವು ಕಡಿತ ಪ್ರಕರಣ ಹಾಗೂ ಮರಣವನ್ನು ಅರ್ಧದಷ್ಟು ಇಳಿಸುವ ಗುರಿಯನ್ನು ಇಲಾಖೆ ಹಾಕಿಕೊಂಡಿದೆ. ಇದಕ್ಕೆ ಪೂರಕವಾಗಿ ಹಾವು ಕಡಿತಕ್ಕೆ ಒಳಗಾದವರಿಗೆ ಆಂಬುಲೆನ್ಸ್ ಸೇವೆ ಹಾಗೂ ಚಿಕಿತ್ಸೆಗೆ ಆದ್ಯತೆ ನೀಡಲಾಗಿದೆ.
‘ಕೃಷಿ ಕೆಲಸ ಸೇರಿ ವಿವಿಧ ಸಂದರ್ಭದಲ್ಲಿ ಹಾವು ಕಡಿತಕ್ಕೆ ಒಳಗಾದವರು ಚಿಕಿತ್ಸೆ ಪಡೆಯುವುದು ವಿಳಂಬವಾದಲ್ಲಿ ಜೀವಕ್ಕೆ ತೊಂದರೆ ಯಾಗುತ್ತದೆ. ಘೋಷಿತ ರೋಗವೆಂದು ಗುರುತಿಸಿದ್ದರಿಂದ ಹಾವು ಕಡಿತದಿಂದ ಉಂಟಾಗುತ್ತಿದ್ದ ಪ್ರಾಣ ಹಾನಿ ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಂದು ವೇಳೆ ಹಾವು ಕಡಿತದಿಂದ ವ್ಯಕ್ತಿ ಮರಣ ಹೊಂದಿದಲ್ಲಿ ‘ಸಾವಿನ ಲೆಕ್ಕಗಳ ವರದಿ’ (ಡೆತ್ ಆಡಿಟ್) ಮಾಡಿಸಲಾಗುತ್ತಿದೆ. ಇದರಿಂದಾಗಿ ಹಾವು ಕಡಿತದ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತಿದೆ’ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದರು.
ರಾಜ್ಯದಲ್ಲಿ ಹಾವು ಕಚ್ಚಿದ ಹೆಚ್ಚಿನ ಪ್ರಕರಣಗಳು ಈ ಹಿಂದೆ ಗಮನಕ್ಕೆ ಬರುತ್ತಿರಲಿಲ್ಲ. ಘೋಷಿತ ಕಾಯಿಲೆಯೆಂದು ಗುರುತಿಸಿದ ಬಳಿಕ ಎಲ್ಲ ಪ್ರಕರಣಗಳ ಮಾಹಿತಿ ದೊರೆಯುತ್ತಿದೆಡಾ. ಅನ್ಸರ್ ಅಹಮದ್ ಆರೋಗ್ಯ ಇಲಾಖೆಯ ಸಮಗ್ರ ರೋಗ ಕಣ್ಗಾವಲು ಯೋಜನೆ (ಐಡಿಎಸ್‌ಪಿ) ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.