ಮೈಸೂರು: ‘ಸೌಲಭ್ಯ ವಂಚಿತರನ್ನು ಗುರುತಿಸಲೆಂದೇ ನಮ್ಮ ಸರ್ಕಾರ ಸಾಮಾಜಿಕ ಗಣತಿಯನ್ನು ನಡೆಸಿದ್ದು, ಮುಂದಿನ ದಿನಗಳಲ್ಲಿ ಈ ವರದಿಯನ್ನು ಸಚಿವ ಸಂಪುಟದ ಮುಂದಿಟ್ಟು, ಶಿಫಾರಸುಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಲ್ಲಿನ ಕಲಾಮಂದಿರದಲ್ಲಿ ಭಾನುವಾರ ಜಿಲ್ಲಾ ಹಿಂದುಳಿದ ವರ್ಗಗಳ ವಸತಿನಿಲಯಗಳ ಹಳೆಯ ವಿದ್ಯಾರ್ಥಿಗಳ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಸಾಮಾಜಿಕ ಗಣತಿ ವರದಿಯನ್ನು ಸರ್ಕಾರ ಸ್ವೀಕರಿಸಿದೆ. ಆದರೆ, ಹಲವು ಕಾರಣದಿಂದ ಆ ವರದಿ ಇನ್ನೂ ಜಾರಿಯಾಗಿಲ್ಲ. ಜಾತಿ ಜನಗಣತಿ ಕಾಂಗ್ರೆಸ್ ಪಕ್ಷದ ಸಿದ್ಧಾಂತವೂ ಆಗಿದೆ. ದೇಶದಲ್ಲಿ 1931ರ ನಂತರ ಜನಸಂಖ್ಯೆಯ ಗಣತಿಯೊಂದಿಗೆ ಜಾತಿ ಗಣತಿ ಕಾರ್ಯ ಆಗಿಲ್ಲ. ಈಗ ಎಲ್ಲ ರಾಜ್ಯಗಳಲ್ಲಿ ಜಾತಿ ಗಣತಿ ಕುರಿತು ಚರ್ಚೆ ನಡೆಯುತ್ತಿದೆ’ ಎಂದು ವಿವರಿಸಿದರು.
‘ನನಗೆ ಒಂದೆರಡು ತಿಂಗಳು ರಾಜಕೀಯವಾಗಿ ತೊಂದರೆ ಕೊಡಬಹುದು. ಆದರೆ, ಇದಕ್ಕೆಲ್ಲಾ ಹೆದರುವವನಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.
ಇಲ್ಲಿನ ಅಶೋಕಪುರಂನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ನನ್ನನ್ನು ಅಲುಗಾಡಿಸಲಾಗದು. ನನ್ನ ಆತ್ಮಸಾಕ್ಷಿ ಸರಿಯಾಗಿದೆ. ಆತ್ಮಸಾಕ್ಷಿಗೆ ದ್ರೋಹ ಮಾಡಿಕೊಂಡಿಲ್ಲ. ಹೀಗಾಗಿ ನಾನು ಹೆದರುವ, ಜಗ್ಗುವ-ಬಗ್ಗುವ ಪ್ರಶ್ನೆಯೇ ಇಲ್ಲ’ ಎಂದರು.
‘ಬಹಳ ಜನ ನನ್ನ ಬಳಿಗೆ ಬಂದು, ‘ಧೈರ್ಯವಾಗಿರಿ, ರಾಜೀನಾಮೆ ಕೊಡಬೇಡಿ’ ಎನ್ನುತ್ತಿದ್ದಾರೆ. ಕಾನೂನು ಹೋರಾಟದಲ್ಲಿ ನಾನು ಗೆದ್ದೇ ಗೆಲ್ತೇನೆ. ರಾಜಕೀಯವಾಗಿ ಇವನ್ನೆಲ್ಲಾ ಎದುರಿಸಿ ನಿಲ್ಲುವುದು ಗೊತ್ತಿದೆ’ ಎಂದು ಹೇಳಿದರು.
ವೆಚ್ಚ ಹೆಚ್ಚಳ:
ರಾಜ್ಯದ ವಿದ್ಯಾರ್ಥಿನಿಲಯಗಳಲ್ಲಿ ಪ್ರಸ್ತುತ 1.87 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರತಿ ವಿದ್ಯಾರ್ಥಿಗೆ ನೀಡಲಾಗುವ ತಿಂಗಳ ‘ಘಟಕ ವೆಚ್ಚ’ವನ್ನು ಈ ವರ್ಷ ₹1750ರಿಂದ ₹1850ಕ್ಕೆ ಹೆಚ್ಚಿಸಲಾಗಿದೆ. ರಾಜ್ಯದಲ್ಲಿ ಪ್ರಸ್ತುತ 822 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿದ್ದು, ಈ ವರ್ಷ ಹೊಸತಾಗಿ 20 ವಸತಿ ಶಾಲೆಗಳನ್ನು ತೆರೆಯಲಾಗುವುದು. ಹೋಬಳಿಗೆ ಕನಿಷ್ಠ ಒಂದು ವಸತಿ ಶಾಲೆ ತೆರೆಯುವುದು ಸರ್ಕಾರದ ಗುರಿ; ಅದರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಮೀಸಲಾತಿ ಇದ್ದಿದ್ದರೆ ವೈದ್ಯನಾಗುತ್ತಿದ್ದೆ!:
‘ನಾನು ಓದುವಾಗ ರಾಜ್ಯದಲ್ಲಿ ಶಿಕ್ಷಣದಲ್ಲಿ ಮೀಸಲಾತಿ ಇರಲಿಲ್ಲ. ಹೀಗಾಗಿ ಮೆಡಿಕಲ್, ಎಂ.ಎಸ್ಸಿ. ಸೀಟು ಸಹ ಸಿಗಲಿಲ್ಲ. ಸಿಕ್ಕಿದ್ದರೆ ವೈದ್ಯನಾಗುತ್ತಿದ್ದೆ’ ಎಂದು ಸಿದ್ದರಾಮಯ್ಯ ಹೇಳಿದರು. ‘ಪಿಯುಸಿ, ಪದವಿ ಓದುವಾಗ ವಸತಿ ವ್ಯವಸ್ಥೆ ಇಲ್ಲದೆ ರೂಂ ಮಾಡಿಕೊಂಡು ಓದುತ್ತಿದ್ದೆ. ಆ ಕಷ್ಟಗಳ ಅನುಭವವೇ ವಿದ್ಯಾಸಿರಿ ಯೋಜನೆ ಜಾರಿಗೆ ಪ್ರೇರಣೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.