ಬೆಂಗಳೂರು: ನಿರ್ಲಕ್ಷ್ಯ ಮತ್ತು ತುಳಿತಕ್ಕೆ ಒಳಗಾಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ನೋವು ಆಲಿಸಲು, ಸರ್ಕಾರದ ಸೌಲಭ್ಯಗಳು ತಲುಪದಿದ್ದರೆ ದೂರು ತೋಡಿಕೊಳ್ಳಲು ದೇಶದಲ್ಲೇ ಮೊದಲ ಬಾರಿಗೆ ‘ಕಲ್ಯಾಣ ಕೇಂದ್ರ’ವೊಂದನ್ನು ಸಮಾಜ ಕಲ್ಯಾಣ ಇಲಾಖೆ ಆರಂಭಿಸಿದೆ.
ಸಹಾಯವಾಣಿಗೆ ಕರೆ ಮಾಡಿ, ವ್ಯಾಟ್ಸ್ ಆ್ಯಪ್, ಎಸ್‌ಎಂಎಸ್ ಸಂಖ್ಯೆಗೆ ಸಂದೇಶ ಕಳುಹಿಸಿ ಅಹವಾಲು ಹೇಳಿಕೊಳ್ಳಲು ಈ ಕೇಂದ್ರ ನೆರವು ನೀಡಲಿದೆ. 24 ತಾಸು ಕೇಂದ್ರ ಕೆಲಸ ಮಾಡಲಿದ್ದು, 19 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.
ಕೇಂದ್ರವನ್ನು ಮಂಗಳವಾರ ಉದ್ಘಾಟಿಸಿದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ‘ಸಮಾಜ ಕಲ್ಯಾಣ ಇಲಾಖೆ ಸುಮಾರು 2,500 ವಿದ್ಯಾರ್ಥಿ ನಿಲಯಗಳನ್ನು ಹೊಂದಿದೆ. ಅಲ್ಲಿ ಯಾವುದೇ ಸಮಸ್ಯೆಗಳಿದ್ದರೂ ವಿದ್ಯಾರ್ಥಿಗಳು ಈ ಸಹಾಯವಾಣಿಗೆ ಕರೆ ಅಥವಾ ವಾಟ್ಸ್‌ಆ್ಯಪ್ ಮಾಡಬಹುದು. ಜೊತೆಗೆ ಇಲಾಖೆ ನೀಡುವ ಸೌಲಭ್ಯಗಳ ಮಾಹಿತಿಯನ್ನೂ ಇಲ್ಲಿ ಪಡೆಯಬಹುದು’ ಎಂದು ಹೇಳಿದರು.
‘ಕಸ್ಟಮರ್ ರಿಲೇಶನ್‌ಷಿಪ್ ಮ್ಯಾನೇಜ್‌ಮೆಂಟ್ (ಸಿಆರ್‌ಎಂ) ತಂತ್ರಾಂಶದ ಮೂಲಕ ಈ ವ್ಯವಸ್ಥೆ ಕಾರ್ಯನಿರ್ವಹಿಸುತ್ತದೆ. ಕೇಂದ್ರಕ್ಕೆ ಬರುವ ಕರೆಗಳ ವಿವರಗಳನ್ನು ಸಿಆರ್‌ಎಂಗೆ ಅಪ್‌ಲೋಡ್ ಮಾಡುತ್ತೇವೆ. ಅದು ಸಂಬಂಧಪಟ್ಟ ಅಧಿಕಾರಿಗೆ ದೂರನ್ನು ಕಳುಹಿಸುತ್ತದೆ. ಜೊತೆಗೆ ದೂರುದಾರರಿಗೂ ಸ್ವೀಕೃತ ಸಂದೇಶ ಹೋಗುತ್ತದೆ’ ಎಂದುಕೇಂದ್ರ ಸಹಾಯಕ ವ್ಯವಸ್ಥಾಪಕ ಪ್ರೇಮ್ ವಿವರಿಸಿದರು.
‘ದೌರ್ಜನ್ಯ ಕುರಿತದಾದ ದೂರುಗಳು 24 ತಾಸಿನೊಳಗೆ ಎಫ್‌ಐಆರ್ ಆಗಬೇಕು. ಅದನ್ನು ಈ ವ್ಯವಸ್ಥೆಯಲ್ಲಿ ಗಮನಿಸಲಾಗುತ್ತದೆ. ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ದೂರು ಪರಿಹಾರವಾಗದಿದ್ದರೆ, ನಂತರ ಅದನ್ನು ಇಲಾಖೆಯ ಆಯುಕ್ತರಿಗೆ, ಮುಖ್ಯ ಕಾರ್ಯದರ್ಶಿಗೆ ರವಾನಿಸಲಾಗುತ್ತದೆ. ಆಗಲೂ ಯಾವುದೇ ಕ್ರಮಕೈಗೊಳ್ಳದಿದ್ದರೆ ಸಮಾಜ ಕಲ್ಯಾಣ ಸಚಿವರಿಗೆ ಮಾಹಿತಿ ಹೋಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.