ಬೆಂಗಳೂರು: ವಿಶ್ವದ ಹಲವೆಡೆ ಗುರುವಾರ ಗೋಚರಿಸಲಿರುವ ಸೂರ್ಯಗ್ರಹಣವು ಖಗೋಳ ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಕಂಕಣ ಮತ್ತು ಪೂರ್ಣ ಸೂರ್ಯಗ್ರಹಣಗಳು ಒಟ್ಟಿಗೇ ಸಂಭವಿಸುವುದರಿಂದ ಈ ಗ್ರಹಣವನ್ನು ‘ಸಮ್ಮಿಶ್ರ ಸೂರ್ಯ ಗ್ರಹಣ’ ಎಂದೇ ಕರೆಯಲಾಗುತ್ತದೆ. ಇದು ಅತ್ಯಂತ ಅಪರೂಪ.
ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದು ಅವು ಮೂರು ಒಂದೇ ಸರಳರೇಖೆಯಲ್ಲಿ ನೆಲೆ ನಿಂತಾಗ, ಚಂದ್ರನ ನೆರಳು ಭೂಮಿಯ ಮೇಲೆ ಬೀಳುತ್ತದೆ. ಇದರಿಂದ ಕೆಲವು ಕ್ಷಣಗಳು ಸೂರ್ಯ ಮರೆಯಾಗುತ್ತಾನೆ. ‘ಈ ಗ್ರಹಣವು ಕಂಕಣ ಮತ್ತು ಪೂರ್ಣ ಸೂರ್ಯಗ್ರಹಣದ ಸಮ್ಮಿಶ್ರಣವಾಗಿರುತ್ತದೆ. ಈ ವಿಧಾನದಲ್ಲಿ ಸೂರ್ಯನು ಉಂಗುರವಾಗಿ ಕೆಲವು ಸೆಕೆಂಡುಗಳ ಕಾಲ ಕಂಡು ಬರಲಿದ್ದು,
ಬಳಿಕ ಪೂರ್ಣವಾಗಿ ಮರೆಯಾಗುತ್ತದೆ’ ಎನ್ನುತ್ತಾರೆ ಬಸವನಗುಡಿ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರೂ ಆಗಿರುವ ಭೌತಶಾಸ್ತ್ರ ಪ್ರಾಧ್ಯಾಪಕಿ ಡಾ.ವೈ.ಸಿ.ಕಮಲಾ.
‘ಸಮ್ಮಿಶ್ರ ಗ್ರಹಣವು ನೋಡುಗನ ಸ್ಥಳದ ಮೇಲೆ ಅವಲಂಬಿತವಾಗಿರುತ್ತದೆ. ಈ ಗ್ರಹಣದ ಸಂದರ್ಭದಲ್ಲಿ ಭೂಮಿಯು ಆಂಶಿಕವಾಗಿ ಚಂದ್ರನ ದಟ್ಟ ನೆರಳಿನ ಪ್ರದೇಶದಲ್ಲಿದ್ದು, ಇತರೆ ಭಾಗವು ದಟ್ಟ ನೆರಳಿನಿಂದ ಹೊರಭಾಗದಲ್ಲಿರುತ್ತದೆ. ಒಟ್ಟಾರೆಯಾಗಿ ಭೂಮಿಯು ಚಂದ್ರನ ದಟ್ಟ ನೆರಳು, ಪಾರ್ಶ್ವ ನೆರಳನ್ನು ಸಂಧಿಸುವ ಜಾಗದಲ್ಲಿ ದಾಟುವಾಗ ‘ಸಮ್ಮಿಶ್ರ ಗ್ರಹಣ’ವಾಗುತ್ತದೆ’ ಎಂದು ಅವರು ವಿವರಿಸಿದರು.
ಸೂರ್ಯಗ್ರಹಣ ಬೆಳಿಗ್ಗೆ 10.04 ನಿಮಿಷಕ್ಕೆ ಆರಂಭವಾಗಲಿದ್ದು, ಅಂತಿಮ ಘಟ್ಟ 11.30 ಕ್ಕೆ ತಲುಪುತ್ತದೆ. ಚಂದ್ರನು ಸೂರ್ಯನನ್ನು ಪೂರ್ಣ ಆವರಿಸುವ ಅವಧಿ ಕೆಲವು ಸೆಕೆಂಡುಗಳು ಮಾತ್ರ. ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಆಸ್ಟ್ರೇಲಿಯಾದ ಹಲವು ಭಾಗಗಳಲ್ಲಿ ಗೋಚರಿಸಲಿದೆ. ಆಗ್ನೇಯಾ ಏಷ್ಯಾ, ಫೆಸಿಫಿಕ್, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಗೋಚರಿಸಲಿದೆ. ಆಸ್ಟ್ರೇಲಿಯಾದ ಪಶ್ಚಿಮಭಾಗದಲ್ಲಿ ಪೂರ್ಣ ಪ್ರಮಾಣದಲ್ಲಿ ಗ್ರಹಣ ಗೋಚರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.