ಗೋಣಿಕೊಪ್ಪಲು: ವಿಶೇಷ ಖಗೋಳ ವಿಸ್ಮಯಕ್ಕೆ ದಿನಗಣನೆ ಪ್ರಾರಂಭವಾಗಿದೆ. ಡಿ. 26ರಂದು ಸಂಭವಿಸುವ ಸೂರ್ಯಗ್ರಹಣವು ಕೊಡಗು ಜಿಲ್ಲೆಯ ’ಕುಟ್ಟ‘ದಲ್ಲಿ ವಿಶೇಷವಾಗಿ ಗೋಚರಿಸಲಿದೆ.
ಏಕೆ ಹೀಗೆ?: ಉತ್ತರದ 12 ಡಿಗ್ರಿ ಸರಳರೇಖೆ ಮತ್ತು ಪಶ್ಚಿಮದ 75 ಡಿಗ್ರಿ ಸರಳರೇಖೆಯಲ್ಲಿ ಸೂರ್ಯ ಹಾದುಹೋಗುವುದರಿಂದ ಈ ಭಾಗದ ಪ್ರದೇಶಗಳಿಗೆ ಸೂರ್ಯಗ್ರಹಣ ಸಂಪೂರ್ಣವಾಗಿ ಗೋಚರಿಸಲಿದೆ. ಕುಟ್ಟ, ಬಿರುನಾಣಿ ಪ್ರದೇಶ ಈ ರೇಖೆಯಲ್ಲಿದ್ದು, ಈ ಪ್ರದೇಶ ಇದೀಗ ದೇಶದ ವಿಜ್ಞಾನಿಗಳ ಗಮನ ಸೆಳೆದಿದೆ.
ಅಂದು ಬೆಳಿಗ್ಗೆ 8.05ಕ್ಕೆ ಗ್ರಹಣ ಆರಂಭಗೊಂಡು, 9.25ಕ್ಕೆ ಪೂರ್ಣ ಪ್ರಮಾಣದಲ್ಲಿ ಗೋಚರವಾಗಲಿದೆ. 11 ಗಂಟೆಗೆ ಗ್ರಹಣ ಅಂತ್ಯಗೊಳ್ಳಲಿದೆ.
ಹೇಗಿರಲಿದೆ ಗ್ರಹಣ?: ಚಂದ್ರ ನಿಧಾನವಾಗಿ ಸೂರ್ಯನಿಗೆ ಅಡ್ಡ ಬರಲಿದೆ. ಇದರಿಂದ ಸೂರ್ಯನ ಸ್ವಲ್ಪ ಭಾಗ ಮರೆಯಾಗುತ್ತಾ ಹೋಗುತ್ತದೆ. ದೊಡ್ಡ ರೊಟ್ಟಿಯ ಮೇಲೆ ಚಿಕ್ಕ ರೊಟ್ಟಿ ಇಟ್ಟಂತೆ ಸೂರ್ಯನ ಹೊರಭಾಗ ಮಾತ್ರ ಗೋಚರಿಸುತ್ತದೆ. ನೋಡಲು ಉಂಗುರದ ಆಕಾರ ಕಾಣುತ್ತದೆ.
ಈ ಗ್ರಹಣ ವೀಕ್ಷಿಸಲು ಹಾಗೂ ಅಧ್ಯಯನ ನಡೆಸಲು ಕುಟ್ಟ ವ್ಯಾಪ್ತಿಯ ಕಾಯಮಾನಿ ಗ್ರಾಮದಲ್ಲಿ ಪುಣೆಯ ಖಗೋಳ ಮತ್ತು ಪರಿಸರ ಕೇಂದ್ರ (ಎಎಸ್‌ಇಇಎಂಟಿಐ) ವಿಜ್ಞಾನಿಗಳ ತಂಡವು ವಿಶೇಷ ವ್ಯವಸ್ಥೆ ಮಾಡಿದೆ. ಗ್ರಹಣದ ಬಗ್ಗೆ ಜನರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಗೋಣಿಕೊಪ್ಪಲು ಪ್ರೌಢಶಾಲೆಯಲ್ಲಿಯೂ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಈ ಕೌತುಕ ವೀಕ್ಷಿಸಲು ಕೇರಳ, ತಮಿಳುನಾಡು ಸೇರಿದಂತೆ ವಿವಿಧ ಭಾಗದ ಖಗೋಳ ಆಸಕ್ತರು ಬರುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.