ADVERTISEMENT

ಸೌರಶಕ್ತಿ ಟೆಂಡರ್‌: ‘ಲೋಕಾ’ ತನಿಖೆ?

ಪ್ರಕ್ರಿಯೆ ಬಗ್ಗೆ ಅನುಮಾನ l ತನಿಖೆಗೆ ಶಿಫಾರಸು

ರಾಜೇಶ್ ರೈ ಚಟ್ಲ
Published 20 ಅಕ್ಟೋಬರ್ 2022, 21:34 IST
Last Updated 20 ಅಕ್ಟೋಬರ್ 2022, 21:34 IST
ಡಿ.ಕೆ.ಶಿವಕುಮಾರ್‌
ಡಿ.ಕೆ.ಶಿವಕುಮಾರ್‌   

ಬೆಂಗಳೂರು: ‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನಡೆದ ಸೌರಶಕ್ತಿ ಘಟಕಗಳ ಟೆಂಡರ್‌ ಪ್ರಕ್ರಿಯೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಕುರಿತು ಬಾಹ್ಯ ತಜ್ಞರನ್ನು ಒಳಗೊಂಡ ತನಿಖಾ ಸಮಿತಿ ರಚಿಸಲು ಆದೇಶಿಸಬಹುದು’ ಎಂದು ಇಂಧನ ಇಲಾಖೆ ಅಧಿಕಾರಿಗಳು ನೀಡಿದ ಸಲಹೆಯನ್ನು ಆಧರಿಸಿ, ಪ್ರಕರಣದ ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ.

‘ಸಿದ್ದರಾಮಯ್ಯ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಪಾವಗಡ ಸೋಲಾರ್‌ ಪಾರ್ಕ್‌ ಸೇರಿದಂತೆ ಒಟ್ಟು ₹ 2,100 ಕೋಟಿ ಮೊತ್ತದ ಸೌರಶಕ್ತಿ ಘಟಕಗಳ ಸ್ಥಾಪನೆ, ದೀರ್ಘಾವಧಿ ವಿದ್ಯುತ್‌ ಖರೀದಿ ಒಪ್ಪಂದದಲ್ಲಿ ಭಾರಿ ಅಕ್ರಮ ನಡೆದಿದೆ’ ಎಂದು ಇಂಧನ ಸಚಿವ ವಿ. ಸುನಿಲ್‌ ಕುಮಾರ್‌ ಇತ್ತೀಚೆಗೆ ಆರೋಪಿಸಿದ್ದರು. ಯಾವೆಲ್ಲ ವಿಚಾರಗಳ ಬಗ್ಗೆ ತನಿಖೆ ನಡೆಸಬಹುದೆಂದು ಅಧಿಕಾರಿಗಳು ಸಿದ್ಧಪಡಿಸಿದ್ದರು. 50 ಪುಟಗಳ ಟಿಪ್ಪಣಿಯ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಟಿಪ್ಪಣಿಯಲ್ಲಿ ಏನಿದೆ?: ‘ಒಟ್ಟು ₹ 2,100 ಕೋಟಿ ಮೊತ್ತದ ಸೌರಶಕ್ತಿ ಘಟಕಗಳನ್ನು ಸ್ಥಾಪಿಸಲು ಎಂಟೇ ನಿಮಿಷಗಳಲ್ಲಿ ಅರ್ಜಿ ಸ್ವೀಕೃತಿ ಪ್ರಕ್ರಿಯೆ ಮುಗಿಸಿ ಮಂಜೂರಾತಿ ನೀಡಿರುವುದು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ (ಕೆಟಿಪಿಪಿ) ಅನುಸಾರ ಸರಿ ಇದೆಯೇ ಎಂಬುದನ್ನು ವಿಚಾರಣೆಗೆ ಒಳಪಡಿಸಬೇಕಿದೆ.

ADVERTISEMENT

1 ಮೆಗಾ ವ್ಯಾಟ್‌ ಸೌರ ಶಕ್ತಿ ಘಟಕಕ್ಕೆ ₹ 7 ಕೋಟಿಯಿಂದ ₹ 8 ಕೋಟಿ ಹೂಡಿಕೆ ಎಂಬ ಲೆಕ್ಕದಲ್ಲಿ 330 ಮೆಗಾ ವ್ಯಾಟ್‌ ಉತ್ಪಾದನೆಗೆ ಎಂಟೇ ನಿಮಿಷದಲ್ಲಿ ಅವಕಾಶ ಕೊಟ್ಟು ಮುಗಿಸುವುದು ಸಾರ್ವಜನಿಕ ಹೊಣೆಗಾರಿಕೆಯ ನೀತಿಯ ಉಲ್ಲಂಘಟನೆಯಾಗಿದೆ.

ಅರ್ಜಿ ಸ್ವೀಕೃತಿಯ ಮೊದಲ 120 ಸೆಕೆಂಡುಗಳಲ್ಲಿ 10 ಹಂತಗಳಲ್ಲಿ ಭರ್ತಿ ಮಾಡಬೇಕಾದ ಆನ್‌ಲೈನ್‌ ಅರ್ಜಿ ಯನ್ನು ಭೂ ಒಡೆತನ ಹೊಂದಿದ 136 ರೈತರು ತುಂಬಿದ್ದಾರೆ ಎಂಬುವುದು ತರ್ಕಕ್ಕೆ ಮತ್ತು ವಾಸ್ತವಕ್ಕೆ ನಿಲುಕದ ವಿಚಾರ. 120 ಸೆಕೆಂಡುಗಳಲ್ಲಿ ಈ ಅರ್ಜಿ ಗಳನ್ನು ತುಂಬುವುದು ಅಸಾಧ್ಯ. ಎಂಟೇ ನಿಮಿಷಗಳಲ್ಲಿ 295 ಅರ್ಜಿಗಳು ಬಂದಿವೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಇ– ಆಡಳಿತ ಕೇಂದ್ರ ವರದಿ ನೀಡಿದೆ. ಆದರೆ, 10 ಸಾವಿರ ಅರ್ಜಿಗಳು ಬಂದಿದ್ದವು ಎಂದು ಆಗಿನ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದ್ದರು. ಇದು ತನಿಖೆಗೆ ಅರ್ಹ ವಿಚಾರ.

ಇನ್ನೊಂದೆಡೆ, 26 ಸಾವಿರ ಅರ್ಜಿ ಗಳು ಬಂದಿದ್ದವು. ಅವುಗಳಲ್ಲಿ 295ನ್ನು ಆಯ್ಕೆ ಮಾಡಲಾಗಿದೆ ಎಂದೂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದರು. ಹಾಗಾದರೆ ಇ–ಆಡಳಿತ ಕೇಂದ್ರ ಮಾಹಿತಿ ತಪ್ಪು ಆಗುತ್ತದೆ. ಆದ್ದರಿಂದ, ಈ ಸತ್ಯಾಸತ್ಯತೆ ಅರಿಯಲು ತನಿಖೆಯ ಅಗತ್ಯವಿದೆ. ಮೊದಲ ನಾಲ್ಕೇ ನಿಮಿಷಗಳಲ್ಲಿ 251 ಅರ್ಜಿಗಳು ಸೂಕ್ತವಾಗಿ ಸಲ್ಲಿಕೆ ಆಗಿವೆ ಎಂದರೆ ಮಾಹಿತಿ ಸೋರಿಕೆ ಮಾಡಿರುವ ಶಂಕೆಯನ್ನೂ ಹುಟ್ಟಿಸುತ್ತದೆ.

ಅರ್ಜಿ ಸಲ್ಲಿಸಿ ಆಯ್ಕೆಯಾದ ಫಲಾನುಭವಿಗಳಿಗೆ ಮೊದಲು ತಿಳಿಸಿದ ಕೃಷಿ ಭೂಮಿಯ ಬದಲಾಗಿ ಬೇರೆ ಕೃಷಿ ಭೂಮಿಯನ್ನು ನಿಗದಿ ಮಾಡಲು ಸಮ್ಮತಿಸಿರುವುದು, ಕೆಲವರಿಗೆ ಜಮೀನಿನ ಸಂಖ್ಯೆಯನ್ನು ಸರಿಪಡಿಸಲು ಅವಕಾಶ ನೀಡಿರುವುದೂ ಅನುಮಾನಾಸ್ಪದವಾಗಿದೆ. ಯಾಕೆಂದರೆ, ಕೃಷಿ ಭೂಮಿಯನ್ನೇ ಸೌರ ವಿದ್ಯುತ್‌ ಘಟಕಗಳಿಗೆ ನೀಡಬೇಕು ಎಂದು ಮೊದಲೇ ಸೂಚಿಸಲಾಗಿತ್ತು. ಈ ಎಲ್ಲ ಅನುಮಾನಗಳಿಂದಾಗಿ ಈ ಪ್ರಕ್ರಿಯೆ ಬಗ್ಗೆ ಕೂಲಂಕಷ ತನಿಖೆಯ ಅವಶ್ಯಕತೆ ಇದೆ ಎಂದು ಟಿಪ್ಪಣಿಯಲ್ಲಿದೆ.

‘ಪೂರ್ವಯೋಜಿತ ಅವ್ಯವಹಾರ ಶಂಕೆ’

‘ಆಯ್ಕೆಯಾದ ಅರ್ಜಿಗಳಲ್ಲಿ ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಸಹೋದರ, ಹರ್ಷ ಶುಗರ್ಸ್‌ ಪ್ರೈ. ಲಿ. ನಿರ್ದೇಶಕ, ಈಗ ಎಂಎಲ್‌ಸಿ ಆಗಿರುವ ಚನ್ನರಾಜ ಹಟ್ಟಿಹೊಳಿ, ಲಕ್ಷ್ಮಿ ಅವರ ತಾಯಿ ಗಿರಿಜಾ ಹಟ್ಟಿಹೊಳಿ ಅವರ ಅರ್ಜಿಗಳೂ ಇದ್ದವು. ಚನ್ನರಾಜ ಅವರು 2014ರ ಆಗಸ್ಟ್‌ನಲ್ಲಿ ಮತ್ತು ಗಿರಿಜಾ ಅವರು ಆನ್‌ಲೈನ್ ಅರ್ಜಿ ಪ್ರಕ್ರಿಯೆಗಿಂತ ಕೇವಲ 1ತಿಂಗಳು ಮೊದಲು ಕೃಷಿ ಭೂಮಿ ಖರೀದಿಸಿದ್ದರು. ಈ ಎರಡೂ ಅರ್ಜಿಗಳನ್ನು ಆನ್‌ಲೈನ್‌ ಪ್ರಕ್ರಿಯೆ ಆರಂಭವಾದ 52 ಸೆಕೆಂಡುಗಳಲ್ಲಿ ಭರ್ತಿ ಮಾಡಲಾಗಿದೆ. ಇದು ಪೂರ್ವಯೋಜಿತ ಅವ್ಯವಹಾರದ ಅನುಮಾನ ಹುಟ್ಟಿಸುತ್ತದೆ’ ಎಂಬುದೂ ಟಿಪ್ಪಣಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.