ADVERTISEMENT

ಸಂಪತ್‌ರಾಜ್‌ ಕಣ್ಮರೆಯಾಗಿದ್ದು ನೋವಿನ ಸಂಗತಿ: ವಿ.ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2020, 12:47 IST
Last Updated 17 ನವೆಂಬರ್ 2020, 12:47 IST
ವಿ.ಸೋಮಣ್ಣ
ವಿ.ಸೋಮಣ್ಣ   

ರಾಯಚೂರು: ‘ಬೆಂಗಳೂರು ಮಹಾಪೌರ ಸಂಪತ್‌ರಾಜ್‌ ಮಾಡಿರುವುದು ಸರಿಯೋ ತಪ್ಪೋ ಎಂಬುದು ತನಿಖೆಯಿಂದ ಗೊತ್ತಾಗುತ್ತದೆ. ಆದರೆ, ಕಾನೂನಿಗೆ ಅಗೌರವ ತೋರಿಸಿ ಕಣ್ಮರೆಯಾಗಿ ಓಡಾಡಿದ್ದು ನೋವಿನ ಸಂಗತಿ. ಅವರನ್ನು ಬಂಧಿಸಿರುವುದು ಪೊಲೀಸರ ದಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ’ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಮಂಗಳವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆ ಪೂರ್ವ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.

ರಾಜ್ಯದ ಗಡಿನಾಡಿನಲ್ಲಿ ಮರಾಠಿಗರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂಥವರ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಲಾಗುತ್ತಿದೆ. ಮರಾಠಿಗರು ವಾಸಿಸುವ ಗಡಿನಾಡು ಕನ್ನಡ ಶಾಲೆಗಳ ಅಭಿವೃದ್ದಿಗೆ ₹50 ಕೋಟಿ ಕೊಡಲಾಗುತ್ತಿದೆ. ಗಡಿಭಾಗದ ಮರಾಠಿಗರನ್ನೂ ಮುಖ್ಯವಾಹಿನಿಗೆ ತರಲು ಸರ್ಕಾರ ಮುಂದಾಗಿದೆ ಎಂದು ನಿಗಮ ಸ್ಥಾಪನೆಯನ್ನು ಸಮರ್ಥಿಸಿಕೊಂಡರು.

ADVERTISEMENT

ದೇಶದಲ್ಲಿ 2022 ರ ವೇಳೆಗೆ ಪ್ರತಿ ಪ್ರಜೆಗೂ ಸೂರು ಕಲ್ಪಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪವಾಗಿದೆ. ವಸತಿ ಸೌಲಭ್ಯ ಕಲ್ಪಿಸುವಲ್ಲಿ ರಾಜ್ಯಸರ್ಕಾರವೂ ಮುಂಚೂಣಿಯಲ್ಲಿದ್ದು, ಈಗಾಗಲೇ 5 ಲಕ್ಷ ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಇದುವರೆಗೂ 1.17 ಲಕ್ಷ ಮನೆಗಳ ನಿರ್ಮಾಣ ಕಾಮಗಾರಿ ಮುಗಿದಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.