ADVERTISEMENT

ಸೋಮಶೇಖರ್‌ ಜೈರಾಜ್‌ ಅರ್ಜಿ ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2018, 19:15 IST
Last Updated 11 ಅಕ್ಟೋಬರ್ 2018, 19:15 IST

ಬೆಂಗಳೂರು: ‘ನನ್ನನ್ನು ಹಾಗೂ ನನ್ನ ಕುಟುಂಬದ ಸದಸ್ಯರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಪೊಲೀಸರು ಯತ್ನಿಸುತ್ತಿದ್ದು, ಭದ್ರತೆ ನೀಡಬೇಕು’ ಎಂದು ಕೋರಿದ್ದ ಸಕಲೇಶಪುರದ ಬಿಜೆಪಿ ಮುಖಂಡ ಸೋಮಶೇಖರ್ ಜಯರಾಜ್ ಅರ್ಜಿಯನ್ನು ಹೈಕೋರ್ಟ್ ವಿಲೇವಾರಿ ಮಾಡಿದೆ.

‘ಈ ಕುರಿತಂತೆ ಡಿಜಿಪಿಗೆ ಮತ್ತೆ ಮನವಿ ಸಲ್ಲಿಸಿ‘ ಎಂದು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮಶೇಖರ್ ಅವರಿಗೆ ಗುರುವಾರ ಸೂಚಿಸಿದೆ.

ವಿಚಾರಣೆ ವೇಳೆ ಸೋಮಶೇಖರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರು, ‘ರಾಜ್ಯದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಉರುಳಿಸಲು ಆಪರೇಷನ್ ಕಮಲ ನಡೆಸುವ ಯತ್ನ ನಡೆಸಿದ ಪ್ರಮುಖ ಸೂತ್ರಧಾರರಲ್ಲಿ ಸೋಮಶೇಖರ್‌ ಅವರೂ ಒಬ್ಬರು ಎಂದು ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ, ಗುಪ್ತಚರ ಇಲಾಖೆಯ ಮೂಲಗಳನ್ನು ಉಲ್ಲೇಖಿಸಿವೆ’ ಎಂದು ವಿವರಿಸಿದರು.

ADVERTISEMENT

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಡ್ವೊಕೇಟ್‌ ಜನರಲ್‌ ಉದಯ ಹೊಳ್ಳ ಅವರು, ‘ಮಾಧ್ಯಮಗಳ ವರದಿ ಸಾಕ್ಷ್ಯಗಳಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಅಂತೆಯೇ, ಅರ್ಜಿದಾರರ ಮನವಿ ಡಿಜಿಪಿಗೆ ತಲುಪಿಲ್ಲ’ ಎಂದರು.

ಈ ಮಾತಿಗೆ ನ್ಯಾಯಪೀಠ, ‘ಮಾಧ್ಯಮ ವರದಿಗಳನ್ನು ನೀವು ನಂಬಬಾರದು’ ಎಂದು ಅರ್ಜಿದಾರರಿಗೆ ಹೇಳಿ, ‘ಮತ್ತೊಮ್ಮೆ ಮನವಿ ಸಲ್ಲಿಸಿ’ ಎಂದು ಹೇಳಿತು.

ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಕಲೇಶಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸೋಮಶೇಖರ್ ಜೆಡಿಎಸ್‌ನ ಎಚ್.ಕೆ.ಕುಮಾರಸ್ವಾಮಿ ಎದುರು ಸೋಲು ಅನುಭವಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.