ಬೆಂಗಳೂರು: ಕಬ್ಬಿಗೆ ಕೇಂದ್ರ ಸರ್ಕಾರ ₹2,750 ಬೆಲೆ ನಿಗದಿ ಮಾಡಿದೆ. ಈಗ ಕಬ್ಬಿನ ಇಳುವರಿ ಹಾಗೂ ಉಪ ಉತ್ಪನ್ನಗಳನ್ನು ಆಧರಿಸಿ ರಾಜ್ಯ ಸರ್ಕಾರ ಸ್ಥಳೀಯ ದರ ನಿಗದಿ ಮಾಡಲಿದೆ ಎಂದು ಸಕ್ಕರೆ ಸಚಿವ ಕೆ. ಜೆ. ಜಾರ್ಜ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಈಗಾಗಲೇ ಪ್ರಸ್ತಾವ ಸಿದ್ಧಪಡಿಸಿದ್ದೇವೆ. ಸಕ್ಕರೆ ಕಾರ್ಖಾನೆಗಳ ಅಭಿಪ್ರಾಯವನ್ನು ಕೇಳಿದ್ದೇವೆ. ಶೀಘ್ರವೇ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಸೋಮವಾರ ಕೂಡಾ ಸಕ್ಕರೆ ನಿಯಂತ್ರಣ ಮಂಡಳಿಯ ಸಭೆ ಮಾಡಿದ್ದೇವೆ. ಜಿಲ್ಲಾಧಿಕಾರಿ ಮತ್ತು ಮಂಡಳಿ ಜೊತೆ ನಾನು ಸಂಪರ್ಕದಲ್ಲಿದ್ದೇನೆ. ಯಾವ ಕಾರ್ಖಾನೆಗಳಿಂದ ಯಾವ ರೈತರಿಗೆ ಹಣ ಸಿಗಬೇಕೋ ಆ ಬಗ್ಗೆ ಮಾಹಿತಿ ಕೊಡಲಿ. ಆ ಮಾಹಿತಿ ಪರಿಶೀಲಿಸಿ, ಕಾರ್ಖಾನೆಗಳಿಂದ ಬರಬೇಕಿರುವ ಹಣ ಬಿಡುಗಡೆ ಮಾಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ನಮ್ಮ ಸರ್ಕಾರ ಬಂದ ಹೊಸದರಲ್ಲಿ ಸಕ್ಕರೆ ಕಾರ್ಖಾನೆಗಳಿಂದ ಎರಡು ಸಾವಿರ ಕೋಟಿ ರೂಪಾಯಿ ಬಾಕಿ ಇತ್ತು. ಈಗ ₹38 ಕೋಟಿ ಮಾತ್ರ ಬಾಕಿ ಇದೆ ಎಂದು ಅವರು ಹೇಳಿದರು.
'ರೈತರು ಈಗ ಕಬ್ಬಿಗೆ ಎಷ್ಟು ಬೆಂಬಲ ಬೆಲೆ ಕೇಳುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸದ ಜಾರ್ಜ್, ರೈತರು ಸಂಕಷ್ಟದಲ್ಲಿದ್ದಾರೆ. ರೈತರಿಗೆ ಸರಿಯಾದ ಬೆಲೆ ಕೊಡಬೇಕು' ಎಂದರು.
‘ಇಂಥದ್ದೇ ಖಾತೆ ಕೊಡಿ ಎಂದು ಕೇಳಿರಲಿಲ್ಲ’
ನಾನು ಶಾಸಕ ಆಗಬೇಕು, ಮಂತ್ರಿ ಆಗಬೇಕು ಅಂತಾ ರಾಜಕೀಯಕ್ಕೆ ಬಂದಿಲ್ಲ. ಇಂಥದ್ದೇ ಖಾತೆ ಬೇಕು ಅಂತಲೂ ನಾನು ಕೇಳಿರಲಿಲ್ಲ. ಈಗಾಗಲೇ ನಾನು ಬೇರೆ ಬೇರೆ ಖಾತೆಗಳನ್ನು ನಿಭಾಯಿಸಿದ್ದೇನೆ. ಐಟಿ-ಬಿಟಿಯ ಮೇಲೆಯೇ ನನಗೆ ಬಹಳ ಆಸಕ್ತಿ. ಕೈಗಾರಿಕೋದ್ಯಮ ಖಾತೆ ಬಹಳ ಮುಖ್ಯ. ಖಾತೆ ಬಗ್ಗೆ ನಿರಾಸಕ್ತಿ ವಹಿಸಿದ್ದಾರೆ ಅನ್ನೋದು ಸುಳ್ಳು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.