ADVERTISEMENT

ಬೆಂಗಳೂರು ದಕ್ಷಿಣ: ಪ್ರಖರ ಮಾತುಗಾರ ತೇಜಸ್ವಿ ವಿರುದ್ಧ ಅನುಭವಿ ಹರಿಪ್ರಸಾದ್‌

ಪ್ರಖರ ಮಾತುಗಾರನ ವಿರುದ್ಧ ಅನುಭವಿ ಹರಿಪ್ರಸಾದ್‌, ಅಸಮಾಧಾನದ ಲಾಭ ಎತ್ತಲು ಕಾಂಗ್ರೆಸ್‌ ಹವಣಿಕೆ

ನಾಗೇಶ್ ಶೆಣೈ ಪಿ.
Published 24 ಏಪ್ರಿಲ್ 2019, 12:27 IST
Last Updated 24 ಏಪ್ರಿಲ್ 2019, 12:27 IST
ಲಾಲ್‌ಬಾಗ್‌ನ  ಗಾಜಿನಮನೆ
ಲಾಲ್‌ಬಾಗ್‌ನ  ಗಾಜಿನಮನೆ   

ಬೆಂಗಳೂರು: ತೇಜಸ್ವಿನಿ ಅನಂತಕುಮಾರ್‌ ಬದಲು ಯುವ ಮುಖಂಡ ತೇಜಸ್ವಿ ಸೂರ್ಯ ಅವರನ್ನು ಬಿಜೆಪಿ ವರಿಷ್ಠರು ಕೊನೆಯ ಗಳಿಗೆಯಲ್ಲಿ ಕಣಕ್ಕಿಳಿಸಿದ್ದರಿಂದ ಸುದ್ದಿಯಾದ ಕ್ಷೇತ್ರ ಬೆಂಗಳೂರು ದಕ್ಷಿಣ. ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್‌ ಕೂಡ ಈ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿದ್ದು ಕೊನೆಯ ಗಳಿಗೆಯಲ್ಲೇ. ಬಿಜೆಪಿಯ ಭದ್ರಕೋಟೆಯೆನಿಸಿರುವ ಈ ಕ್ಷೇತ್ರದಲ್ಲಿ ಸುತ್ತಾಡಿದರೆ ಚುನಾವಣಾ ಕಾವು ನಿಧಾನಕ್ಕೆ ಏರುತ್ತಿರುವಂತೆ ಕಾಣುತ್ತಿದೆ. ಕಡಲೆ ಪರಿಷೆಗೆ ಹೆಸರಾಗಿರುವ ಈ ಪ್ರದೇಶದಲ್ಲಿ ಈಗ ಮತ ಪರಿಷೆಯ ಅಬ್ಬರ.

ಎಚ್‌.ಎನ್‌.ಅನಂತಕುಮಾರ್‌ ಗರಡಿ ಯಲ್ಲೇ ಬೆಳೆದ ತೇಜಸ್ವಿಗೆ ಟಿಕೆಟ್‌ ಕೊಟ್ಟಿದ್ದರ ಚರ್ಚೆಯ ಕಾವು ಈ ಬಿಸಿಲ ನಡುವೆಯೂ ಸಂಪೂರ್ಣ ಆರಿಲ್ಲ. ಅನಂತಕುಮಾರ್‌ ಪತ್ನಿ ತೇಜಸ್ವಿನಿ ಅನಂತಕುಮಾರ್‌ ಅವರಿಗೆ ಟಿಕೆಟ್‌ ಕೊಟ್ಟಿದ್ದರೆ ಈ ಕ್ಷೇತ್ರ ಬಿಜೆಪಿಗೆ ಕೇಕ್‌ವಾಕ್‌ ಆಗುತ್ತಿತ್ತು ಎನ್ನುವ ಮಾತುಗಳನ್ನು ಬಿಜೆಪಿ ಹಾಗೂ ಕಾಂಗ್ರೆಸ್‌ನ ಕೆಲವರು ಆಡುತ್ತಾರೆ.

ADVERTISEMENT

‘ತೇಜಸ್ವಿಗೆ ಟಿಕೆಟ್‌ ಕೊಟ್ಟಿದ್ದರಲ್ಲಿ ತಪ್ಪೇನಿದೆ. ಯುವಕನನ್ನು ಬೆಳೆಸಬಾರದೇ. ಬರೇ ಕುಟುಂಬದವರಿಗೇ ಟಿಕೆಟ್‌ ಕೊಡಬೇಕೆಂದೇನಿದೆ’ ಎಂದು ವರಿಷ್ಠರ ನಿರ್ಧಾರ ಸಮರ್ಥಿಸುವ ಕಟ್ಟಾ ಬಿಜೆಪಿ ಬೆಂಬಲಿಗರಿದ್ದಾರೆ. ಈ ಚರ್ಚೆಯ ನಡುವೆಯೇ, ಇನ್ನು ಕೆಲವರು ‘ನಮಗೆ ಅಭ್ಯರ್ಥಿ ಮುಖ್ಯವಲ್ಲ, ಪ್ರಧಾನಿ ನರೇಂದ್ರ ಮೋದಿ ಮುಖ ನೋಡಿ ಬಿಜೆಪಿಗೆ ವೋಟ್‌ ಹಾಕುತ್ತೇವೆ’ ಎನ್ನುತ್ತಾರೆ.

ಕಳೆದ ವರ್ಷದ ನವೆಂಬರ್‌ನಲ್ಲಿ ನಿಧನರಾದ ಅನಂತಕುಮಾರ್‌ ಸತತ ಆರು ಬಾರಿ ಗೆದ್ದಿರುವ ಕ್ಷೇತ್ರವಿದು. ‘ಈಗ ಅಭ್ಯರ್ಥಿಯಾಗಿರುವ ಯುವಕ ತೀಕ್ಷ್ಣ ಭಾಷಣಕಾರ. ಆದರೆ, ಅನಂತಕುಮಾರ್‌ ಭಾಷಣ ಹೆಚ್ಚು ಮಾಡುತ್ತಿರಲಿಲ್ಲ. ತಂತ್ರಗಾರಿಕೆಯಿಂದಲೇ ಗೆಲುವಿಗೆ ಬುನಾದಿ ಹಾಕುತ್ತಿದ್ದರು. ಬೇರೆ ಪಕ್ಷಗಳ ಮುಖಂಡರನ್ನು ಒಲಿಸಿಕೊಳ್ಳುವ ಕಲೆ ಅವರಿಗೆ ಕರಗತವಾಗಿತ್ತು. ಈ ಬಾರಿ ಹೊಸ ಮುಖ ಕಣಕ್ಕಿಳಿಸಿದ್ದರಿಂದ ಬಿಜೆಪಿಗೆ ಗೆಲುವು ಸುಲಭವಿಲ್ಲ. ಹರಿಪ್ರಸಾದ್‌ ರಾಜಕಾರಣಕ್ಕೆ ಹೊಸಬರೇನಲ್ಲ. ಮೈತ್ರಿ ಪಕ್ಷ ಜೆಡಿಎಸ್‌ ಬೆಂಬಲವೂ ಇರುವುದರಿಂದ ಇಬ್ಬರ ನಡುವೆ ಉತ್ತಮ ಹೋರಾಟ ಎದುರಾಗಬಹುದು’ ಎಂದು ಹೇಳುತ್ತಾರೆ ಶ್ರೀನಗರದ ನಿವೃತ್ತ ಬ್ಯಾಂಕ್‌ ಉದ್ಯೋಗಿಯೊಬ್ಬರು.

ಹನುಮಂತನಗರ ಮುಖ್ಯರಸ್ತೆಯಲ್ಲಿ ಯುವಕರ ಜೊತೆ ಕುಳಿತು ಹರಟೆ ಹೊಡೆಯುತ್ತಿದ್ದ ಎಚ್‌ಎಎಲ್‌ (ಹೆಲಿಕಾಪ್ಟರ್‌ ವಿಭಾಗದ) ನಿವೃತ್ತ ಸಿಬ್ಬಂದಿ ರಘುನಾಥ್‌ ಅವರು ಇದನ್ನು ಪೂರ್ಣವಾಗಿ ಒಪ್ಪಲು ತಯಾರಿಲ್ಲ.

‘ಬೆಂಗಳೂರು ದಕ್ಷಿಣ ಕ್ಷೇತ್ರ ಸಾಂಪ್ರದಾಯಿಕವಾಗಿ ಬಿಜೆಪಿಯ ಸ್ಟ್ರಾಂಗ್‌ ಬೆಲ್ಟ್‌. ಇಲ್ಲಿ ಬಿಜೆಪಿಯಿಂದ ಯಾರು ನಿಂತರೂ ಗೆಲ್ಲುತ್ತಾರೆಂಬ ಮಾತಿದೆ. 1989ರಲ್ಲಿ ಆರ್‌.ಗುಂಡೂರಾವ್‌ ಇಲ್ಲಿಂದ ಆಯ್ಕೆಯಾಗಿದ್ದರು. ಆಗ ಬ್ರಾಹ್ಮಣ ಸಮುದಾಯ ಪೂರ್ಣಪ್ರಮಾಣದಲ್ಲಿ ಗುಂಡೂರಾವ್‌ ಬೆನ್ನಿಗೆ ನಿಂತಿತ್ತು. ನಂತರ ಇಲ್ಲಿ ಕಾಂಗ್ರೆಸ್‌ ಗೆದ್ದೇ ಇಲ್ಲ’ ಎಂದು ಸ್ವಲ್ಪ ಇತಿಹಾಸ ಕೆದಕುತ್ತಾರೆ.

ಜೆ ಕಚೇರಿ ಮುಗಿಯುವ ಸಮಯ ಸಮೀಪಿಸುತ್ತಿದ್ದಂತೆ ಪ್ರಯಾಣಿಕರಿಗೆ ಕಾಯುತ್ತಿದ್ದ ಹೊಸೂರು ರಸ್ತೆಯ ಬೊಮ್ಮನಹಳ್ಳಿ ವೃತ್ತದ ರಿಕ್ಷಾ ಸ್ಟ್ಯಾಂಡ್‌ನ ಚಾಲಕರು ಭಿನ್ನ ಅಭಿಪ್ರಾಯ ನೀಡುತ್ತಾರೆ. ಚಾಲಕ ಬಿ.ಚಂದ್ರು ‘ಈ ಬಾರಿ ಬಿಜೆಪಿ ಪರ ವಾತಾವರಣವಿದೆ. ದೇಶದಲ್ಲಿ ಮೋದಿ ಅಲೆ ಕಾಣುತ್ತಿದೆ. ನಾವು ಪಕ್ಷ ನೋಡಿ ಮತಹಾಕುವವರು’ ಎನ್ನುತ್ತಾರೆ.

ತೇಜಸ್ವಿಗೆ ಟಿಕೆಟ್‌ ಕೊಟ್ಟಿದ್ದನ್ನೂ ಸಮರ್ಥಿಸುತ್ತಾರೆ. ‘ವಂಶಾಡಳಿತವೇ ಬೇಕಾ? ಹೊಸ ಹುಡುಗನಿಗೆ ಅವಕಾಶ ಕೊಟ್ಟಿದ್ದಾರೆ. ನನಗೇನೂ ತಪ್ಪು ಕಾಣುತ್ತಿಲ್ಲ’ ಎನ್ನುತ್ತಾರೆ. ಇದನ್ನು ಅನುಮೋದಿಸುವಂತೆ, ‘ಯುವಕರು ಬರಲಿ ಬಿಡಿ. ಈಗ ಮೋದಿ ಅಲೆಯಿರುವಾಗ ಅವಕಾಶ ಕೊಡದಿದ್ದರೆ ಮತ್ತ್ಯಾವಾಗ?’ ಎಂದು ಮಾಗಡಿ ಮುಖ್ಯ ರಸ್ತೆಯ ವೀರೇಶ ಚಿತ್ರಮಂದಿರ ಬಳಿ ಪತ್ರಿಕೆಗಳ ಸ್ಟಾಲ್‌ ಇಟ್ಟುಕೊಂಡಿರುವ ಚಂದ್ರಶೇಖರ ಶೆಟ್ಟಿ ಕೇಳುತ್ತಾರೆ.

ಮೋದಿ ಅವರನ್ನು ತರಾಟೆಗೆ ತೆಗೆದುಕೊಳ್ಳುವವರೂ ಇದ್ದಾರೆ. ಬೊಮ್ಮನಹಳ್ಳಿಯ ಆಟೊ ಚಾಲಕ ಸೈಯದ್‌ ರಿಯಾಜ್‌, ‘ಎಲ್ಲಿ ಬಂದಿವೆ ಮೋದಿಯ ಅಚ್ಛೇ ದಿನ್‌? ಅವರಿರುವವರೆಗೆ ಅಚ್ಛೇ ದಿನ್‌ ಬರುವುದೂ ಇಲ್ಲ. ಕಾಂಗ್ರೆಸ್‌ ಬಡವರಿಗೆ 30 ಕೆ.ಜಿ. ಅಕ್ಕಿಕೊಟ್ಟಿತ್ತು. ಇವರೇನು ಕೊಟ್ಟಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಅಭ್ಯರ್ಥಿ ಜತೆ ಪ್ರಜಾವಾಣಿ ಪ್ರತಿನಿಧಿ :ಬೆಳಗಿನಿಂದ ಬೈಗಿನವರೆಗೆ ಮತ ಅರಸುತ್ತಾ

ಜಯನಗರ ಮೆಟ್ರೊ ಸ್ಟ್ರೇಷನ್‌ಗೆ ತಾಗಿರುವ ಹೋಟೆಲ್‌ ಹೊರಗೆ ಪತ್ರಿಕೆ ಓದುತ್ತಿದ್ದ ಬೆಮೆಲ್‌ ನಿವೃತ್ತ ನೌಕರ ಯಲ್ಲಪ್ಪ ಅವರನ್ನು ಮಾತಿಗೆಳೆದರೆ, ‘ಅಧಿಕಾರಕ್ಕೆ ಬರುವ ಮೊದಲು ಮೋದಿ ವಿದೇಶದಿಂದ ಕಪ್ಪುಹಣ ತರ್ತೇನೆ ಅಂದ್ರು. ಎಲ್ಲಿ ತಂದಿದ್ದಾರೆ. ಗಂಗಾ ನದಿ ಸ್ವಚ್ಛ ಮಾಡ್ತೇವೆ ಅಂದ್ರು. ಎಷ್ಟು ಸ್ವಚ್ಛವಾಗಿದೆ? ಆ ಯಪ್ಪಂದು ಬರೇ ಬೂಟಾಟಿಕೆ’ ಎನ್ನುತ್ತಾರೆ ಖಾರವಾಗಿ.

ಅಭ್ಯರ್ಥಿ ಜತೆ ಪ್ರಜಾವಾಣಿ ಪ್ರತಿನಿಧಿ :ಸೂರ್ಯನಿಗೆ 4 ಗಂಟೆಯಷ್ಟೇ ನಿದ್ದೆ

ಸುಶಿಕ್ಷಿತ ಮಧ್ಯಮವರ್ಗ, ಪ್ರಬಲ ಕಾರ್ಯಕರ್ತರ ಪಡೆ ಬೆನ್ನಿಗಿರುವುದು ಬಿಜೆಪಿಗೆ ಅನುಕೂಲಕರ. ಜೆಡಿಎಸ್‌ ಜೊತೆ ಮೈತ್ರಿಯಿಂದ ಫಲಿತಾಂಶದ ಮೇಲೆ ಹೆಚ್ಚೇನೂ ಪರಿಣಾಮ ಆಗದು. ದೊಡ್ಡ ಅಂತರದಲ್ಲಿಯೇ ಬಿಜೆಪಿ ಗೆಲ್ಲುತ್ತದೆ ಎನ್ನುತ್ತಾರೆ ಕದಿರೇನಹಳ್ಳಿಯಲ್ಲಿ ಮಾತಿಗೆ ಸಿಕ್ಕಿದ ಜೆಡಿಎಸ್‌ ಕಾರ್ಯಕರ್ತ ರವಿಪ್ರಕಾಶ್‌.

ಆದರೆ, ಹರಿಪ್ರಸಾದ್‌ ಅವರಿಗೆ ಈ ಕ್ಷೇತ್ರ ಅಪರಿಚಿತವೇನಲ್ಲ. 20 ವರ್ಷಗಳ ಹಿಂದೆ ಅವರು ಇದೇ ಕ್ಷೇತ್ರದಲ್ಲಿ ಅನಂತಕುಮಾರ್‌ ಎದುರಾಳಿಯಾಗಿದ್ದರು. ‘ಹರಿಪ್ರಸಾದ್‌ ಹಿರಿಯ ನಾಯಕ. ರಾಜ್ಯಸಭೆಯಲ್ಲಿ ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದಾರೆ. ಮಹಿಳೆಯರ ಮೀಸಲಾತಿ ಪರ ಧ್ವನಿ ಎತ್ತಿದ್ದಾರೆ. ತೇಜಸ್ವಿನಿ ಅವರಿಗೆ ಟಿಕೆಟ್‌ ನೀಡದೇ ಬಿಜೆಪಿ ತಪ್ಪು ಮಾಡಿದೆ. ಇದರಿಂದ ನಮಗೇ ಅನುಕೂಲವಾಗಲಿದೆ. ಬೆಂಗಳೂರು ದಕ್ಷಿಣದ ಶಾಸಕರು ಈ ಬಾರಿ ಒಟ್ಟಾಗಿ ಪ್ರಚಾರ ಮಾಡುತ್ತಿದ್ದಾರೆ’ ಎಂದು ಇಂಟಕ್‌ ರಾಜ್ಯ ಉಪಾಧ್ಯಕ್ಷ ಪ್ರಭುಸ್ವಾಮಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸುತ್ತಾರೆ.

‘ಈ ಹಿಂದೆ ಅಭ್ಯರ್ಥಿಗೆ ಕಾರ್ಯಕರ್ತರ ಜೊತೆ ಸಂಪರ್ಕ ಇರುತ್ತಿರಲಿಲ್ಲ. ನಂದನ್‌ ನಿಲೇಕಣಿ ಅವರಿಗೆ ಕಾರ್ಯಕರ್ತರ ಪರಿಚಯ ಇರಲಿಲ್ಲ. ಆದರೆ, ಹರಿಪ್ರಸಾದ್‌ ಹಿಂದೊಮ್ಮೆ ಸ್ಪರ್ಧಿಸಿದ್ದಾರೆ. ಕಾರ್ಯಕರ್ತರ ಜೊತೆ ಒಡನಾಟವಿದೆ. ಇದು ಅನುಕೂಲಕರವಾಗಲಿದೆ’ ಎನ್ನುತ್ತಾರೆ ಕವಿಕಾ ಮಾಜಿ ಅಧ್ಯಕ್ಷ ಎಸ್‌.ಮನೋಹರ್‌.

ಹಳೆ ಬೆಂಗಳೂರಿನ ಸೊಗಡು, ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಕಳೆದ ಐದು ಲೋಕಸಭಾ ಚುನಾವಣೆಗಳಲ್ಲಿ ಮತದಾನ ಪ್ರಮಾಣ ಶೇ 57 ದಾಟಿಲ್ಲ. ಈ ಪ್ರಮಾಣ ಈ ಬಾರಿಯಾದರೂ ಏರುವುದೇ. ಗಣನೀಯವಾಗಿ ಏರಿದ್ದಲ್ಲಿ ಯಾವ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರವೂ ನಡೆಯುತ್ತಿದೆ.

ಸುತ್ತಾಟದ ಸ್ಥಳಗಳು

* ವಿಜಯನಗರ

* ಮಾಗಡಿ ರಸ್ತೆ

* ಚಿಕ್ಕಪೇಟೆ

* ಗಾಂಧಿಬಜಾರ್‌

* ಹನುಮಂತನಗರ

* ಪದ್ಮನಾಭನಗರ

* ಬನಶಂಕರಿ

* ಜಯನಗರ

* ಬಿಟಿಎಂ ಲೇಔಟ್‌

ಒಲಿಸಿಕೊಳ್ಳುವ ಗುಣವಿತ್ತು!
ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಐವರು ಬಿಜೆಪಿ (ಬೊಮ್ಮನಹಳ್ಳಿ, ಬಸವನಗುಡಿ, ಗೋವಿಂದರಾಜನಗರ, ಪದ್ಮನಾಭನಗರ, ಚಿಕ್ಕಪೇಟೆ) ಶಾಸಕರಿದ್ದಾರೆ. ಬಿಟಿಎಂ ಲೇಔಟ್‌, ಜಯನಗರ, ವಿಜಯನಗರದಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ, ಬಸವನಗುಡಿ ಶಾಸಕ ಎಲ್‌.ಎ.ರವಿಸುಬ್ರಹ್ಮಣ್ಯ ಅವರ ಅಣ್ಣನ ಮಗ.

ಬೆಂಗಳೂರಿನಲ್ಲಿ ಹೊಂದಾಣಿಕೆ ರಾಜಕಾರಣವಿದೆ ಎಂಬ ಮಾತು ಜನಜನಿತ. ಅನಂತಕುಮಾರ್‌ ಅವರು ಬೇರೆ ಪಕ್ಷಗಳ ಶಾಸಕರ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಹೊಸ ಅಭ್ಯರ್ಥಿಯ ಜೊತೆಗೆ ಈ ಟ್ರೆಂಡ್‌ ಕೂಡ ಬದಲಾಗಬಹುದು ಎಂಬುದು ಕ್ಷೇತ್ರದ ಕೆಲವೆಡೆ ಕೇಳಿಬಂದ ಮಾತು.

ತೇಜಸ್ವಿನಿ, ತೇಜಸ್ವಿ ಸೂರ್ಯ, ಬಿ.ಕೆ ಹರಿಪ್ರಸಾದ್‌ ಸಂದರ್ಶನಗಳು

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ನಡೆದ ಪ್ರಮುಖ ಬೆಳವಣಿಗೆಗಳು

ಪ್ರಜಾವಾಣಿ ವಿಶೇಷಸಂದರ್ಶನಗಳು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.