ADVERTISEMENT

ಲೋಕೊ ಪೈಲಟ್ ಮುಂಬಡ್ತಿ ಪರೀಕ್ಷೆ ಕನ್ನಡದಲ್ಲಿ ನಡೆಸಲು ನೈರುತ್ಯ ರೈಲ್ವೆ ಅಧಿಸೂಚನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಆಗಸ್ಟ್ 2024, 13:28 IST
Last Updated 7 ಆಗಸ್ಟ್ 2024, 13:28 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ರೈಲ್ವೆಯಲ್ಲಿ ಸಹಾಯಕ ಲೋಕೊ ಪೈಲೆಟ್‌ ಪರೀಕ್ಷೆಯನ್ನು ಕನ್ನಡದಲ್ಲಿಯೂ ಬರೆಯಲು ಅವಕಾಶ ನೀಡಿ ನೈರುತ್ಯ ರೈಲ್ವೆ ಅಧಿಸೂಚನೆ ಹೊರಡಿಸಿದೆ. 

ಸಹಾಯಕ ಲೋಕೊ ಪೈಲೆಟ್‌ (ಬಡ್ತಿ) ಪರೀಕ್ಷೆ ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಮಾತ್ರ ಇರುವುದನ್ನು ವಿವಿಧ ಸಂಘಟನೆಗಳು ವಿರೋಧಿಸಿದ್ದವು. ಅದಕ್ಕಾಗಿ ಪರೀಕ್ಷೆಯನ್ನೇ ಮುಂದೂಡಲಾಗಿತ್ತು.

ADVERTISEMENT

ನೈರುತ್ಯ ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು, ‘ರೈಲ್ವೆಗೆ ಸಂಬಂಧಿಸಿದ ಎಲ್ಲ ಪರೀಕ್ಷೆಗಳು ಕನ್ನಡದಲ್ಲಿ ಇರಬೇಕು. ಈ ಬಗ್ಗೆ ಆದೇಶ ಹೊರಡಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಸಹಾಯಕ ಲೋಕೊ ಪೈಲೆಟ್‌ ಪರೀಕ್ಷೆ ಸಂಬಂಧಿಸಿದಂತೆ ಮಾತ್ರ ಆದೇಶ ಹೊರಡಿಸಲಾಗಿದ್ದು, ಕೇಂದ್ರೀಕೃತ ಕಂಪ್ಯೂಟರ್ ಆಧಾರಿತ ಈ ಪರೀಕ್ಷೆಯಲ್ಲಿ ಕನ್ನಡ, ಇಂಗ್ಲಿಷ್‌, ಹಿಂದಿಯಲ್ಲಿ ಪ್ರಶ್ನೆಪತ್ರಿಕೆ ಇರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಒಂದೇ ಪರೀಕ್ಷೆಗೆ ಸೀಮಿತ?: ಸಾಮಾನ್ಯ ವಿಭಾಗ ಸ್ಪರ್ಧಾತ್ಮಕ ಪರೀಕ್ಷೆ (ಜಿಡಿಸಿಇ), ಸೀಮಿತ ವಿಭಾಗದ ಸ್ಪರ್ಧಾತ್ಮಕ ಪರೀಕ್ಷೆ (ಎಲ್‌ಡಿಸಿಇ) ಸೇರಿದಂತೆ ಎಲ್ಲ ಪರೀಕ್ಷೆಗಳಲ್ಲಿ ಕನ್ನಡದಲ್ಲಿಯೂ ಅವಕಾಶ ನೀಡಬೇಕು ಎಂಬುದು ಬೇಡಿಕೆಯಾಗಿತ್ತು.

ಇದಕ್ಕೆ ಸ್ಪಂದಿಸಿದ್ದ ವಿ. ಸೋಮಣ್ಣ, ‘ಕನ್ನಡದಲ್ಲಿಯೂ ಪರೀಕ್ಷೆಗಳಿರಲಿವೆ’ ಎಂದು ತಿಳಿಸಿದ್ದರು. ಆದರೆ, ಈಗ ನೈರುತ್ಯ ರೈಲ್ವೆ ಹೊರಡಿಸಿರುವ ಆದೇಶ ಒಂದು ಪರೀಕ್ಷೆಗಷ್ಟೇ ಸೀಮಿತವಾಗಿದೆ. ಮುಂದಿನ ಎಲ್ಲ ಪರೀಕ್ಷೆಗಳಿಗೆ ಅನ್ವಯ ಎಂಬುದು ಆದೇಶದಲ್ಲಿಲ್ಲ. ಈ ಬಗ್ಗೆ ನೈರುತ್ಯ ರೈಲ್ವೆ ಅಧಿಕಾರಿಗಳು ಪ್ರತಿಕ್ರಿಯೆಗೆ ಲಭ್ಯರಾಗಿಲ್ಲ.

‘ಕನ್ನಡಿಗ ಸಿಬ್ಬಂದಿಗೆ ಅನುಕೂಲ’

‘ಸಚಿವ ವಿ. ಸೋಮಣ್ಣ ಅವರ ಸೂಚನೆಯಂತೆ ಲೋಕೊ ಪೈಲೆಟ್‌ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ನಡೆಸುವಂತೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಮೂರೂ ವಿಭಾಗಗಳಿಗೂ ಅಧಿಕೃತ ಆದೇಶ ಹೊರಡಿಸಲಾಗಿದೆ. ಇದರಿಂದ ರೈಲ್ವೆಯಲ್ಲಿ ಕಾರ್ಯ ನಿರ್ವಹಿಸುವ ಕನ್ನಡಿಗ ಸಿಬ್ಬಂದಿಗೆ ಸಹಾಯಕವಾಗಲಿದೆ. ಸದ್ಯದಲ್ಲಿಯೇ ದಿನಾಂಕವನ್ನು ಮರು-ನಿಗದಿಪಡಿಸಿ ಪರೀಕ್ಷೆಯನ್ನು ನಡೆಸಲು ಕ್ರಮವಹಿಸಲಾಗುವುದು’ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.