ಮಂಗಳೂರು: ಗಾನ ಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಕರಾವಳಿಯ ಜತೆಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಕಲೆ, ಸಾಹಿತ್ಯದ ತವರೂರಾಗಿರುವ ಕರಾವಳಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಅವರು ನೀಡಿದ್ದರು.
ಅವರ ಕಲಾ ಪ್ರೀತಿ, ಸಾಧನೆಯನ್ನು ಪರಿಗಣಿಸಿ, 2015–16 ರಲ್ಲಿ ನಡೆದಿದ್ದ 22 ನೇ ಆಳ್ವಾಸ್ ವಿರಾಸತ್‌ನ ಪ್ರಶಸ್ತಿಯನ್ನು ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಪ್ರದಾನ ಮಾಡಲಾಗಿತ್ತು. ಹಿನ್ನಲೆ ಗಾಯಕ, ಹಾಡುಗಾರ, ನಟ, ಸಂಗೀತ ನಿರ್ದೇಶಕರಾಗಿ ಬಹುಮುಖ ಪ್ರತಿಭಾ ಸಂಪನ್ನ, ಆಬಾಲವೃದ್ಧರಾದಿಯಾಗಿ ಜನಾನುರಾಗಿಯಾಗಿ ಜನಪ್ರಿಯತೆ ಗಳಿಸಿದ್ದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ₹1ಲಕ್ಷ ನಗದು ಹಾಗೂ ಸ್ಮರಣಿಕೆಯನ್ನೊಳಗೊಂಡಿದ್ದ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.
ವಿಶೇಷವಾಗಿ ಕರ್ನಾಟಕದ ಹಿರಿಯ ಶಾಸ್ತ್ರೀಯ ಸಂಗೀತದ ವಿದ್ವಾಂಸರಾದ ಆರ್.ಕೆ.ಪದ್ಮನಾಭ ಅವರು ಶಾಸ್ತ್ರೀಯ ಸಂಗೀತದ ಗೌರವವನ್ನು ಸಮರ್ಪಿಸಿದ್ದರು. ನಂತರ ಸತ್ಯನಾರಾಯಣ ಪುಣಿಂಚಿತ್ತಾಯ ಮತ್ತು ಬಳಗದವರಿಂದ ಯಕ್ಷ ಸಂಗೀತ, ಆಳ್ವಾಸ್ ವಿದ್ಯಾರ್ಥಿಗಳಿಂದ ಯಕ್ಷ ನಮನ, ಮಣಿಪುರಿ ಮತ್ತು ಶ್ರೀಲಂಕಾದ ಕಲಾ ಗೌರವ ಹಾಗೂ ಭಾವ ಸಂಗೀತದ ಮೂಲಕ ಗಾನ ಗಂಧರ್ವರಿಗೆ ಅಭಿವಂದನೆ ಸಲ್ಲಿಸಲಾಗಿತ್ತು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ್ದ ಎಸ್‍ಪಿಬಿ ಅವರು, ’ನಾನು ಇಂತಹ ಸನ್ಮಾನವನ್ನು ನನ್ನ ಈವರೆಗಿನ ಜೀವನದಲ್ಲಿ ನೋಡಿಲ್ಲ ಹಾಗೂ ಇಂತಹ ಸನ್ಮಾನವನ್ನು ಯಾರೂ ಮಾಡಿಲ್ಲ. ಭವಿಷ್ಯದಲ್ಲಿ ಈ ರೀತಿಯ ಸನ್ಮಾನ ಮಾಡುತ್ತಾರೆಂಬ ನಂಬಿಕೆ ಕೂಡಾ ಇಲ್ಲ' ಎಂದು ತಮ್ಮ ಮನದಾಳದಿಂದ ಹೇಳಿದ್ದರು.
’ಇನ್ನೊಂದು ಜನ್ಮವಿದ್ದರೆ ಕರ್ನಾಟಕದಲ್ಲಿಯೇ ಹುಟ್ಟಲು ಬಯಸುತ್ತೇನೆ. ಈ ಪ್ರಶಸ್ತಿಯನ್ನು ನನ್ನ ತಾಯಿಗೆ ಹಾಗೂ ನನ್ನನ್ನು ಬೆಳೆಸಿದ, ಆಶೀರ್ವದಿಸಿದ ಎಲ್ಲಾ ಹಿರಿಯರಿಗೂ ಸಮರ್ಪಿಸುತ್ತೇನೆ‘ ಎಂದು ಹೇಳಿದ್ದರು.
ನಂತರ ನಡೆದ ಕಾರ್ಯಕ್ರಮದಲ್ಲಿ ಎಸ್.ಪಿ ಬಾಲಸುಬ್ರಹ್ಮಣ್ಯಂ ಮತ್ತು ತಂಡ ಸಂಗೀತ ರಸಮಂಜರಿ ಕಾರ್ಯಕ್ರಮವು ಸಂಗೀತಾಸಕ್ತರನ್ನು ಸಂಗೀತ ಲೋಕಕ್ಕೆ ಕರೆದೊಯ್ದಿತ್ತು. ಏಕಕಾಲಕ್ಕೆ 35ಸಾವಿರ ಪ್ರೇಕ್ಷಕರು ಕಾರ್ಯಕ್ರಮವನ್ನು ಕಣ್ತುಂಬಿಕೊಂಡಿದ್ದರು.
ಅಡ್ಯಾರ್‌ನಲ್ಲಿ ನೆರೆ ಸಂತ್ರಸ್ತರಿಗಾಗಿ ಕಾರ್ಯಕ್ರಮ:
ಇದೇ ಜನವರಿಯಲ್ಲಿ ನಗರದ ಹೊರವಲಯದ ಅಡ್ಯಾರ್ ಗಾರ್ಡನ್‌ನಲ್ಲಿ ನೆರೆ ಸಂತ್ರಸ್ತರ ಸಹಾಯಾರ್ಥ ನಡೆದ ಕಾರ್ಯಕ್ರಮದಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸಂಗೀತದ ಸುಧೆ ಹರಿಸಿದ್ದರು. ಐದು ಭಾಷೆಗಳಲ್ಲಿ ಹಾಡುಗಳನ್ನು ಹಾಡುವ ಮೂಲಕ ಕಲಾಭಿಮಾನಿಗಳನ್ನು ರಂಜಿಸಿದ್ದರು.
2008 ರಲ್ಲಿ ಕಾರ್ಯಕ್ರಮ:
ತೆಲುಗು ಕಲಾ ಸಮಿತಿಯು ತನ್ನ ಕಟ್ಟಡಕ್ಕೆ ದೇಣಿಗೆ ಸಂಗ್ರಹಿಸಲು 2008 ರ ಜನವರಿ 19 ರಂದು ನಗರದ ಟಿ.ಎಂ.ಎ. ಪೈ ಹಾಲ್‌ನಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಎಸ್‌ಪಿಬಿ ಹಲವು ಗೀತೆಗಳನ್ನು ಹಾಡಿ, ಮಂಗಳೂರಿನ ಜನರನ್ನು ರಂಜಿಸಿದ್ದರು.
ಹಿಂದಿ, ತಮಿಳು, ಕನ್ನಡ, ತೆಲುಗು, ತುಳು ಹಾಡುಗಳನ್ನು ಹಾಡಿದ್ದ ಬಾಲಸುಬ್ರಹ್ಮಣ್ಯಂ ಅವರ ಪ್ರೇಮಲೋಕದ ಯಾರಿವನೂ ಹಾಡಿಗೆ ಜನರು ಹುಚ್ಚೆದ್ದು ಕುಣಿದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.