ಬೆಂಗಳೂರು: ವಿಧಾನಸಭೆಯಲ್ಲಿ ಅಂಗೀಕಾರವಾದ ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ (ಕ್ರಷರ್‌ಗಳ) ನಿಯಂತ್ರಣ (ತಿದ್ದುಪಡಿ) ಮಸೂದೆ ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ (ತಿದ್ದುಪಡಿ) ಮಸೂದೆಯನ್ನುವಿಧಾನಪರಿಷತ್ತಿನಲ್ಲಿ ಮಂಡಿಸಲು ಆಡಳಿತ ಪಕ್ಷ ಯತ್ನಿಸಿದರೂ ಸಫಲವಾಗಲಿಲ್ಲ!
ಧನವಿನಿಯೋಗ ಮಸೂದೆ ಅಂಗೀಕಾರಗೊಂಡ ಬೆನ್ನಲ್ಲೆ ಕಲಾಪ ಸಂಪನ್ನಗೊಳಿಸಲು ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಮುಂದಾದರು. ಈ ವೇಳೆ, ಗಣಿ ಸಚಿವ ಸಿ.ಸಿ. ಪಾಟೀಲ ಮತ್ತು ಕಾನೂನು ಸಚಿವ ಮಾಧುಸ್ವಾಮಿ ಅವರು ಸಭಾಪತಿ ಪೀಠದ ಬಳಿಗೆ ತೆರಳಿ ಮನವಿ ಮಾಡಿದರೂ ಮನ್ನಣೆ ನೀಡದ ಅವರು, ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿ.ಸಿ. ಪಾಟೀಲ, ‘ಕ್ರಷರ್‌ಗಳ ನಿಯಂತ್ರಣ ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದು, ಪರಿಷತ್‌ನಲ್ಲಿ ಅಂಗೀಕಾರಗೊಳ್ಳದೇ ಇರುವುದರಿಂದ ಮಾರ್ಚ್ 31ಕ್ಕೆ ಪರವಾನಗಿ ರದ್ದುಗೊಳ್ಳುವ ಪರವಾನಗಿಗಳ ಮರುನವೀಕರಣ ಸಾಧ್ಯ ಇಲ್ಲ. ಸರ್ಕಾರದ ಬೊಕ್ಕಸಕ್ಕೂ ರಾಯಧನ ನಷ್ಟವಾಗಲಿದೆ‘ ಎಂದರು.
ಹೀಗಾಗಿ, ಇದೀಗ ಸರ್ಕಾರ ಸುಗ್ರೀವಾಜ್ಷೆ ಹೊರಡಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಉದ್ದೇಶಿಸಿತ ಮಸೂದೆಯಲ್ಲಿ ಕ್ರಷರ್‌ಗಳು ಪರವಾನಗಿ ಅವಧಿಯನ್ನು 5 ವರ್ಷದಿಂದ 20 ವರ್ಷಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ, ಬಫರ್ ಝೋನ್ ನಿಗದಿಪಡಿಸಲಾಗಿದ್ದು, ಪರವಾನಗಿ ಕೊಟ್ಟ ಬಳಿಕ ಆ ವ್ಯಾಪ್ತಿಯಲ್ಲಿ ಯಾವುದೇ ಧಾರ್ಮಿಕ ಕೇಂದ್ರ, ಶಾಲೆ, ಮನೆ ನಿರ್ಮಣಗೊಂಡರೆ ಕ್ರಷರ್ ಘಟಕಕ್ಕೆ ಸಮಸ್ಯೆ ಇಲ್ಲ. ಅಲ್ಲದೆ, 2011ರ ಬಳಿಕ ಮೃತಪಟ್ಟವರ ಮಾಲೀಕತ್ವದಲ್ಲಿರುವ ಕ್ರಷರ್
ಗಳನ್ನು ಅವರ ಕಾನೂನುಬದ್ಧ ಅವಲಂಬಿತರ ಹೆಸರಿಗೆ ವರ್ಗಾಯಿಸಲು ಅವಕಾಶವಿದೆ. ಕ್ರಷರ್‌ಗಳಿಗೆ ಪರವಾನಗಿ ನೀಡದೇ ಇದ್ದರೆ ಅಕ್ರಮ ಗಣಿಗಾರಿಕೆಗೆ ಅವಕಾಶ ಆಗಲಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.