ADVERTISEMENT

ಅನಿವಾರ್ಯವಾಗಿ ಸದನ ಮುಂದೂಡಿದೆ: ಸಭಾಪತಿ ಶೆಟ್ಟಿ

ರಾಜ್ಯಪಾಲರಿಗೆ ಮಾಹಿತಿ ನೀಡಲು ಚಿಂತನೆ?

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 19:31 IST
Last Updated 16 ಡಿಸೆಂಬರ್ 2020, 19:31 IST
ಕೆ. ಪ್ರತಾಪಚಂದ್ರ ಶೆಟ್ಟಿ
ಕೆ. ಪ್ರತಾಪಚಂದ್ರ ಶೆಟ್ಟಿ   

ಬೆಂಗಳೂರು: ವಿಧಾನ‍ಪರಿಷತ್ತಿನಲ್ಲಿ ಮಂಗಳವಾರ ನಡೆದ ಘಟನೆಯನ್ನು ದಾಖಲಿಸಿಕೊಂಡಿರುವ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅದನ್ನು ರಾಜ್ಯಪಾಲ ರಿಗೆ ಕಳುಹಿಸಲು ಉದ್ದೇಶಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಅವರು ದಾಖಲಿಸಿರುವ ಮಾಹಿತಿ ಈ ರೀತಿ ಇದೆ– ‘ಬೆಳಿಗ್ಗೆ 11.15ಕ್ಕೆ ಕಾರ್ಯಕಲಾಪ ಆರಂಭಿಸಲು ಬೆಲ್ ಹಾಕಲು ಕಾರ್ಯ ದರ್ಶಿಗೆ ಸೂಚಿಸಿದ್ದೆ. ಕಚೇರಿಯಲ್ಲಿ ಕುಳಿತಿ ರುವಾಗ ಕೋರಂ ಬೆಲ್ ಹಾಕಿದರು. ಬೆಲ್ ಆಫ್‌ ಆಗುವ ಮೊದಲೇ, ಯಾವುದೇ ಸೂಚನೆ ನೀಡದೆ ಏಕಾಏಕಿ ಉಪಸಭಾಪತಿ ಪೀಠ ಅಲಂಕರಿಸಿದರು. ಸಭಾಪತಿ ಪೀಠವನ್ನು ಬಹುತೇಕ ಸದಸ್ಯರು ಸುತ್ತುವರೆದರು. ತಳ್ಳಾಟ, ನೂಕಾಟ, ಕೈಕೈಮಿಲಾಯಿಸುವ ಹಂತಕ್ಕೆ ಹೋಗಿತ್ತು. ಪೀಠದ ಮುಂದಿನ ಗಾಜನ್ನು ಧ್ವಂಸಗೊಳಿಸಲಾಯಿತು. ಈ ನಡುವೆ ಕೆಲ ಸದಸ್ಯರು ಸಭಾಪತಿ ಪ್ರವೇಶಿಸುವ ಕಚೇರಿಯ ಬಾಗಿಲು ಹಾಕಿದರು. ಸಭಾಪತಿ ಪೀಠದ ಸ್ಥಾನದಲ್ಲಿದ್ದ ಉಪಸಭಾಪತಿಯನ್ನು ಎಳೆದಾಡಿದರು. ಸದನದಲ್ಲಿದ್ದ ಅಧಿಕಾರಿಗಳಿಗೂ ಭಯದ ವಾತಾವರಣ ಇದೆ ಎಂಬ ಮಾಹಿತಿ ಬಂತು’.

‘ಬೆಲ್ ಆಫ್ ಮಾಡುವಂತೆ ಕಾರ್ಯ ದರ್ಶಿಗೆ ಸೂಚಿಸಿ, ಮಾರ್ಷಲ್‌ಗಳ ರಕ್ಷಣೆಯೊಂದಿಗೆ ನಾನು ಪೀಠಕ್ಕೆ ತೆರಳಿದಾಗಲೂ ಸದನದಲ್ಲಿ ಸದಸ್ಯರ ಕೂಗಾಟ– ಜಗ್ಗಾಟ ಮುಂದುವರೆದಿತ್ತು. ಅಲ್ಲದೆ, ಪೀಠದ ಸುತ್ತಲೂ ಸದಸ್ಯರು ಸುತ್ತುವರೆದು ಭಯದ ವಾತಾವರಣ ಇತ್ತು. ನಾನು ಪೀಠದಿಂದ ಎಲ್ಲ ಸದಸ್ಯರಿಗೆ ಮನವಿ ಮಾಡಿದರೂ ಶಾಂತ ವಾತಾವರಣ ಮೂಡದೇ ಇದ್ದುದರಿಂದ ಅನಿವಾರ್ಯವಾಗಿ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ಪೀಠದಿಂದ ತೀರ್ಮಾನಿಸಿರುತ್ತೇನೆ. ಈ ಎಲ್ಲ ಅಂಶಗಳನ್ನು ಸದನದ ದೃಶ್ಯಾವಳಿಂದ ಖಾತ್ರಿಪಡಿಸಿಕೊಳ್ಳಬಹುದು’ ಎಂದೂ ಹೇಳಿದ್ದಾರೆ.

ADVERTISEMENT

‘ರಾಜೀನಾಮೆಗೆ ಸಿದ್ಧ’
‘ನಾನು ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ. ಆದರೆ, ಅದಕ್ಕೂ ಮೊದಲು ನನ್ನಿಂದ ಯಾವುದೇ ಕ್ರಿಯಾ ಲೋಪ ಅಥವಾ ತಪ್ಪು ಆಗಿಲ್ಲ ಎನ್ನುವುದಕ್ಕೆ ನನಗೆ ಸ್ಪಷ್ಟನೆ ಬೇಕು’ ಎಂದು ವಿಧಾನ ಪರಿಷತ್‌ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಹೇಳಿದರು.

‘ಸ್ಪಷ್ಟನೆ ಯಾರು ನೀಡಬೇಕು’ ಎಂದು ಕೇಳಿದ ಪ್ರಶ್ನೆಗೆ, ‘ಈ ಬಗ್ಗೆ ರಾಜ್ಯಪಾಲರು ಅಥವಾ ನ್ಯಾಯಾಲಯ ತಿಳಿಸಬೇಕು. ನೋಡೋಣ ಏನಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

‘ಬಹುಮತ ಇಲ್ಲ ಎಂದ ಮೇಲೆ ನಾನು ರಾಜೀನಾಮೆ ನೀಡಲು ಸಿದ್ಧ. ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಲು ನಾನು ಬಯಸುವುದಿಲ್ಲ. ತೀರ್ಮಾನ ನೀಡುವ ವಿಷಯದಲ್ಲಿ ನಾನು ನಿಯಮಾವಳಿ ಮೀರಿ ವರ್ತಿಸಿಲ್ಲ ಎನ್ನುವುದು ನನಗೆ ಸ್ಪಷ್ಟವಾಗಬೇಕು’ ಎಂದೂ ಹೇಳಿದರು.

ಪರಿಷತ್‌ ಘಟನೆ: ಹೊರಟ್ಟಿ ಕ್ಷಮೆಯಾಚನೆ
ಹುಬ್ಬಳ್ಳಿ:
ವಿಧಾನ ಪರಿಷತ್‌ನಲ್ಲಿ ನಡೆದ ಘಟನೆಯ ಬಗ್ಗೆ ಇಡೀ ಸದನದ ಪರವಾಗಿ ರಾಜ್ಯದ ಜನತೆಗೆ ಕ್ಷಮೆ ಕೋರುವುದಾಗಿ ಹಿರಿಯ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

‘ಈ ಘಟನೆಯಿಂದ ಗೌರವ ಮತ್ತು ಘನತೆ ಕಡಿಮೆಯಾಗಿದೆ’ ಎಂದಿದ್ದಾರೆ.

‘ಸತತ 7 ಬಾರಿ ಆಯ್ಕೆಯಾಗಿ 41 ವರ್ಷಗಳಿಂದ ಸದಸ್ಯನಾಗಿ, ಸಚಿವ, ಸಭಾಪತಿಯಾಗಿ ಗೌರವ ಕಾಪಾಡಿ ಕೊಂಡು ಬಂದಿರುವೆ. ಆದರೆ ಈಗ ಮಾಧ್ಯಮಗಳಲ್ಲಿ ಘಟನೆಯ ಕುರಿತು ಓದಿ, ನೋಡಿದ ರಾಜ್ಯದ ಜನತೆ ನಮ್ಮನ್ನು ಕ್ಷಮಿಸಲಾರರು ಎಂಬ ಭಾವನೆ ಕಾಡುತ್ತಿದೆ. ನಮ್ಮ ಮೇಲೆ ರಾಜ್ಯದ ಜನತೆಯಿಟ್ಟ ಭರವಸೆ, ನಂಬಿಕೆ ಉಳಿಸಿಕೊಳ್ಳುತ್ತೇವೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.