ADVERTISEMENT

ಹಾಸ್ಯಲಹರಿಯ ಸಭಾಧ್ಯಕ್ಷರ ಕೋಪ–ತಾಪ!

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 20:15 IST
Last Updated 12 ಡಿಸೆಂಬರ್ 2018, 20:15 IST
   

ಬೆಳಗಾವಿ: ಇಷ್ಟು ದಿನ ಹಾಸ್ಯ ಚಟಾಕಿ ಹಾರಿಸಿ, ನಗು ನಗುತ್ತಾ ಕಾಲೆಳೆಯುತ್ತಿದ್ದ ಸಭಾಧ್ಯಕ್ಷ ಕೆ.ಆರ್‌. ರಮೇಶ್‌ ಕುಮಾರ್‌ ಅವರನ್ನು ಕಂಡಿದ್ದ ವಿಧಾನಸಭೆಗೆ, ಬುಧವಾರ ಅವರ ಕೋಪತಾಪದ ಇನ್ನೊಂದು ಮುಖದ ದರ್ಶನವೂ ಆಯಿತು.

ಮೊದಲು ತಮ್ಮದೇ ಸಚಿವಾಲಯದ ಸಿಬ್ಬಂದಿ ಮೇಲೆ ಕೋಪಿಸಿಕೊಂಡು ಎಚ್ಚರಿಕೆ ಕೊಟ್ಟರೆ, ಮತ್ತೊಮ್ಮೆ ಬಿಜೆಪಿ ಶಾಸಕರಿಗೆ ಖಡಕ್ ವಾರ್ನಿಂಗ್‌ ನೀಡಿದರು. ಆಡಳಿತ– ವಿರೋಧ ಪಕ್ಷಗಳ ಶಾಸಕರೇ ಇರಲಿ, ತಮ್ಮದೇ ಸಚಿವಾಲಯದ ಸಿಬ್ಬಂದಿ ಇರಲಿ, ತಪ್ಪು ಮಾಡಿದರೆ ಸುಮ್ಮನಿರಲ್ಲ ಎಂದು ತೋರಿಸಿಕೊಟ್ಟರು.

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಕಸ ವಿಲೇವಾರಿ ಅಕ್ರಮಕ್ಕೆ ಸಂಬಂಧಿಸಿದ ಪ್ರಶ್ನೆಗೆ ನೀಡಲಾದ ಉತ್ತರದಲ್ಲಿ ‘ಪ್ರಕರಣದ ಪ್ರಮುಖ ರೂವಾರಿ’ ಎಂಬ ಪದ ಬಳಕೆ ಮಾಡಲಾಗಿತ್ತು. ಆ ಪದವನ್ನು ಕಂಡ ತಕ್ಷಣ ರಮೇಶ್ ಕುಮಾರ್ ಅವರಲ್ಲಿ ರೋಷಾಗ್ನಿ ಉರಿಯಿತು.

ADVERTISEMENT

ಸದನದಲ್ಲೇ ತಮ್ಮ ಸಚಿವಾಲಯದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಅವರು, ‘ನಿಮಗೆ ಕನ್ನಡ ಬರೋದಿಲ್ವಾ, ಯಾವ ಪದವನ್ನು ಹೇಗೆ ಬಳಕೆ ಮಾಡಬೇಕು ಅಂತಾ ಗೊತ್ತಿಲ್ವಾ, ಇನ್ನೊಮ್ಮೆ ಹೀಗೆ ಪದ ಬಳಕೆ ಮಾಡಿದ್ರೆ ಸುಮ್ಮನಿರಲ್ಲ. ಬೀ ಕೇರ್‌ಫುಲ್’ ಎಂದು ಎಚ್ಚರಿಕೆ ಕೊಟ್ಟರು.

ಮತ್ತೊಮ್ಮೆ ಸಭಾಧ್ಯಕ್ಷರ ಸಹನೆಯ ಕಟ್ಟೆಯೊಡೆದಿದ್ದು ಶೂನ್ಯವೇಳೆಯಲ್ಲಿ. ಬಂಟ್ವಾಳ ಶಾಸಕ ರಾಜೇಶ್ ನಾಯಕ್‌ ಉಳಿಪಾಡಿ, ತಮ್ಮ ಕ್ಷೇತ್ರದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಸಂದರ್ಭದಲ್ಲಿ ತಮಗೆ ಅವಮಾನ ಮಾಡಲಾಯಿತು ಎಂದು ನೋವು ತೋಡಿಕೊಂಡ ತಕ್ಷಣ ಬಿಜೆಪಿಯ ಎಲ್ಲ ಶಾಸಕರು ಸಹೋದ್ಯೋಗಿಯ ನೆರವಿಗೆ ಧಾವಿಸಿದರು. ಎಲ್ಲರೂ ಎದ್ದು ನಿಂತು ಧ್ವನಿಗೂಡಿಸಿದರು.

ಮೊದಲು ಸ್ಪೀಕರ್ ಕೂಡ ತಾಳ್ಮೆಯಿಂದಲೇ ಶಾಸಕರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದರು. ಆದರೆ, ಸದನದಲ್ಲಿ ಕೋಲಾಹಲ, ಗಲಾಟೆ ಹೆಚ್ಚಾಗುತ್ತಿದ್ದಂತೆ ತಾಳ್ಮೆ ಕಳೆದುಕೊಂಡರು.

‘ಸದನ ನಡೆಸೋದಿಲ್ಲ. ಎದ್ದು ಹೋಗುತ್ತೇನೆ’ ಎಂದು ಬಿಜೆಪಿ ಶಾಸಕರಿಗೆ ಎಚ್ಚರಿಕೆ ನೀಡಿದರು. ಸಭಾಧ್ಯಕ್ಷರ ಕೋಪ ಕಂಡು, ಬಿಜೆಪಿ ಶಾಸಕರೆಲ್ಲ ಅವಾಕ್ಕಾದರು. ಕೊನೆಗೆ ಬಿ.ಎಸ್. ಯಡಿಯೂರಪ್ಪ ಮಧ್ಯ ಪ್ರವೇಶಿಸಿ, ಸಭಾಧ್ಯಕ್ಷರನ್ನು ಸಮಾಧಾನ ಪಡಿಸಬೇಕಾಯಿತು.

ಬಿಜೆಪಿಯಿಂದ ನೂತನವಾಗಿ ಆಯ್ಕೆಯಾಗಿರುವ ದಿನಕರ್ ಶೆಟ್ಟಿ ಪ್ರಶ್ನೋತ್ತರ ಅವಧಿಯಲ್ಲಿ ಮರು ಪ್ರಶ್ನೆ ಕೇಳುವ ವೇಳೆ ತಬ್ಬಿಬ್ಬಾದರು. ಕೇಳಿದ ಲಿಖಿತ ಪ್ರಶ್ನೆಯನ್ನೇ ಓದಲು ಆರಂಭಿಸಿದರು.

ಆಗ ಸಭಾಧ್ಯಕ್ಷರು, ‘ಹೊಸ ಶಾಸಕರಿಗೆ ಶಾಸನ ಸಭೆಯಲ್ಲಿ ಹಿರಿಯರು ಮಾರ್ಗದರ್ಶನ ಮಾಡಬೇಕು. ಸುರೇಶ್‍ ಕುಮಾರ್ ಅವರಂಥ ಹಿರಿಯರು ಸೂಕ್ತ ತಿಳಿವಳಿಕೆ ನೀಡಬೇಕು’ ಎಂದು ಸಲಹೆ ನೀಡಿದರು.

ಹೊಸ ಶಾಸಕರಿಗೆ ಧೈರ್ಯ ತುಂಬುವ ಮಾತುಗಳನ್ನು ಆಡಿದ ಸಭಾಧ್ಯಕ್ಷರು, ‘ಆತಂಕ ಪಡಬೇಡಿ, ನಿಮ್ಮ ಬಗ್ಗೆ ಸದನದಲ್ಲಿ ಗೌರವವಿದೆ, ಸಮಾಧಾನವಾಗಿ ಪ್ರಶ್ನೆ ಕೇಳಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.