ADVERTISEMENT

ರಾಜೀನಾಮೆ ಕೊಟ್ಟವರಿಗೂ ವಿಪ್‌ ಅನ್ವಯ; ವಿಧಾನಸಭಾಧ್ಯಕ್ಷ ರಮೇಶ್‌ ಕುಮಾರ್‌ ರೂಲಿಂಗ್

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 19:36 IST
Last Updated 22 ಜುಲೈ 2019, 19:36 IST
   

ಬೆಂಗಳೂರು: ‘ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 15 ಶಾಸಕರಿಗೂ ವಿಪ್‌ ಅನ್ವಯವಾಗುತ್ತದೆ’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್ ರೂಲಿಂಗ್‌ ನೀಡಿದರು.

ವಿಧಾನಸಭೆಯಲ್ಲಿ ವಿಶ್ವಾಸಮತ ನಿರ್ಣಯದ ಪ್ರಸ್ತಾವ ಮಂಡನೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ಪ್ರಸ್ತಾ‍ಪಿಸಿದ್ದರು. ಆಗ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ‘15 ಶಾಸಕರು ಸದನದ ಕಲಾಪಕ್ಕೆ ಹಾಜರಾಗುವಂತೆ ಬಲವಂತ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಧ್ಯಂತರ ಆದೇಶ ಹೊರಡಿಸಿದೆ. 12 ಶಾಸಕರು ನಮ್ಮ ಪಕ್ಷದಿಂದ ಆಯ್ಕೆಯಾಗಿದ್ದು, ಕಲಾಪದಲ್ಲಿ ಹಾಜರಾಗುವಂತೆ ವಿಪ್‌ ನೀಡಲಾಗಿದೆ. ಆದರೆ, ಸುಪ್ರೀಂ ಕೋರ್ಟ್‌ ಆದೇಶದಿಂದ ನನ್ನ ಹಕ್ಕು ಮೊಟಕಾಗಿದೆ’ ಎಂದು ಕ್ರಿಯಾಲೋಪ ಎತ್ತಿದ್ದರು. ಇದರ ರೂಲಿಂಗ್‌ ಅನ್ನು ಸಭಾಧ್ಯಕ್ಷರು ಕಾಯ್ದಿರಿಸಿದ್ದರು.

‘ಸಭಾಧ್ಯಕ್ಷರ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸುಪ್ರೀಂಕೋರ್ಟ್‌ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ADVERTISEMENT

ಸುಪ್ರೀಂ ಕೋರ್ಟ್‌ ಅನಿಸಿಕೆ ನನಗೆ ಅನ್ವಯಿಸುವುದಿಲ್ಲ. ಯಾರಾದರೂ ಒತ್ತಡ ಹೇರುತ್ತಿದ್ದಾರೆ ಎಂಬ ಭಾವನೆ ಬಂದರೆ ಶಾಸಕರು ನನಗೆ ದೂರು ಕೊಡಬಹುದು. ಅವರಿಗೆ ರಕ್ಷಣೆ ಕೊಡುವುದು ನನ್ನ ಜವಾಬ್ದಾರಿ’ ಎಂದು ಹೇಳಿದರು.

‘ಶಾಸಕರು ಸದನದಿಂದ ಹೊರಗೆ ಇದ್ದು ವಿಪ್‌ ಉಲ್ಲಂಘನೆ ಆಗುವುದಿಲ್ಲ ಎಂದು ಭಾವಿಸಿದ್ದಾರೆ. ಅವರಿಗೆ ಸದನದ ಮೂಲಕ ಸ್ಪಷ್ಟ ಸಂದೇಶ ನೀಡಬೇಕು ಎಂದು ಜೆಡಿಎಸ್‌ನ ಕೆ.ಎಂ.ಶಿವಲಿಂಗೇಗೌಡ ಮನವಿ ಮಾಡಿದರು.

‘ಸದ್ಯಕ್ಕೆ ನಾನು ಉತ್ತರ ನೀಡುವ ಅಗತ್ಯವಿಲ್ಲ. ಎಲ್ಲೋ ಕೂತಿರುವವರಿಗೆ ಸದನದ ಮೂಲಕ ಸಂದೇಶ ನೀಡುವುದಿಲ್ಲ. ವಿಪ್‌, ನೋಟಿಸ್‌ ನೀಡುವುದು ನಿಮಗೆ ಬಿಟ್ಟಿದ್ದು. ನನ್ನ ಬಳಿ ದೂರು ಬಂದಾಗ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುತ್ತೇನೆ’ ಎಂದು ರಮೇಶ್‌ ಕುಮಾರ್‌ ಸ್ಪಷ್ಟಪಡಿಸಿದರು.

15 ಶಾಸಕರಿಗೆ ನೋಟಿಸ್‌

ಮಂಗಳವಾರ ಬೆಳಿಗ್ಗೆ 11 ಗಂಟೆಗೆ ತಮ್ಮ ಮುಂದೆ ಹಾಜರಾಗಬೇಕು ಎಂದು ರಾಜೀನಾಮೆ ಕೊಟ್ಟಿರುವ 15 ಶಾಸಕರಿಗೆ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ ಕುಮಾರ್‌ ನೋಟಿಸ್ ನೀಡಿದ್ದಾರೆ. ಆದರೆ ಇನ್ನೊಂದು ದಿನ ಅವಕಾಶ ನೀಡಬೇಕು ಎಂದು ಈ ಶಾಸಕರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.