ADVERTISEMENT

ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸಲು ಕೋರ್ಟ್ ಆದೇಶ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2024, 8:32 IST
Last Updated 25 ಸೆಪ್ಟೆಂಬರ್ 2024, 8:32 IST
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ   

ಬೆಂಗಳೂರು: ಮೈಸೂರು ನಗಾರಭಿವೃದ್ಧಿ ಪ್ರಾಧಿಕಾರದಲ್ಲಿನ (ಮುಡಾ) ನಿವೇಶನ ಹಂಚಿಕೆ ಅಕ್ರಮ ಆರೋಪದ ಪ್ರಕರಣದಲ್ಲಿ ಆರೋಪಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸಲು ಮೈಸೂರಿನ ಲೋಕಾಯಕ್ತ ಪೊಲೀಸರಿಗೆ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

ತನಿಖೆಯ ಅಂತಿಮ ವರದಿಯನ್ನು ಮೂರು ತಿಂಗಳ ಒಳಗಾಗಿ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ನ್ಯಾಯಾಧೀಶರು ನಿರ್ದೇಶಿಸಿದ್ದಾರೆ.

ಈ‌ ಸಂಬಂಧ ಮೈಸೂರಿನ ಸ್ನೇಹಮಯಿ ಕೃಷ್ಣ ದಾಖಲಿಸಿದ್ದ ಖಾಸಗಿ ಕ್ರಿಮಿನಲ್ ದೂರಿನ ವಿಚಾರಣೆ ಆಲಿಸಿ ಕಾಯ್ದಿರಿಸಿದ್ದ ಆದೇಶವನ್ನು, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಬುಧವಾರ ಮಧ್ಯಾಹ್ನ ತೆರೆದ ನ್ಯಾಯಾಲಯದಲ್ಲಿ ಉಕ್ತಲೇಖನದ ಮೂಲಕ ಆದೇಶಿಸಿದರು.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯಪಾಲರು ನೀಡಿದ್ದ ಆದೇಶಕ್ಕೆ ಹೈಕೋರ್ಟ್ ನಿನ್ನೆಯಷ್ಟೇ (ಸೆ.23) ಅಸ್ತು ಎಂದಿತ್ತು. ಭ್ರಷ್ಟಾಚಾರ ನಿಗ್ರಹ ಕಾಯ್ದೆ- 1988ರ ಕಲಂ 17 ಎ ಅಡಿಯಲ್ಲಿ ತನಿಖೆಗೆ ಅನುಮತಿ ನೀಡಿದ್ದ ರಾಜ್ಯಪಾಲರ ಆದೇಶವನ್ನು ಪ್ರಶ್ನಿಸಿ ಸಿದ್ದರಾಮಯ್ಯ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿತ್ತು.

ಈ ಹಿನ್ನೆಲೆಯಲ್ಲಿ ಫಿರ್ಯಾದುದಾರ ಮೈಸೂರಿನ ಸ್ನೇಹಮಯಿ ಕೃಷ್ಣ ಬುಧವಾರ ಬೆಳಗ್ಗೆ ತಮ್ಮ ವಕೀಲರಾದ ಲಕ್ಷ್ಮಿ ಅಯ್ಯಂಗಾರ್ ಅವರ ಮುಖಾಂತರ ಹೈಕೋರ್ಟ್ ತೀರ್ಪಿನ ಪ್ರತಿಯನ್ನು ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರಿಗೆ ಸಲ್ಲಿಸಿದರು.

ಕೆಲಕಾಲ ಕ್ಲುಪ್ತ ವಿಚಾರಣೆ ಆಲಿಸಿದ ನ್ಯಾಯಾಧೀಶರು ಖಾಸಗಿ ದೂರಿನ ಅನುಸಾರ ಕ್ರಿಮಿನಲ್ ಪ್ರಕರಣದ ಆರೋಪಿಯಾಗಿ ಸಿದ್ದರಾಮಯ್ಯ ವಿರುದ್ಧ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ಅಡಿಯಲ್ಲಿ ಸಕ್ಷಮ ಪ್ರಾಧಿಕಾರವು ಎಫ್ಐ ಆರ್ ದಾಖಲಿಸಿ ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.