ಬೆಂಗಳೂರು: ‘ಅಪ್ಪ, ಅಮ್ಮ ಕೂಲಿ ಅರಸಿ ನಾಲ್ಕು ವರ್ಷಗಳ ಹಿಂದೆ ಬೆಳಗಾವಿ ಜಿಲ್ಲೆಯಿಂದ ದೊಡ್ಡಬಳ್ಳಾಪುರಕ್ಕೆ ಬಂದಿದ್ದರು. ನಾನು ಅಲ್ಲೇ ಕನ್ನಡ ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದೆ. ವಿಜ್ಞಾನ ಕ್ಷೇತ್ರದಲ್ಲಿ ಸಾಧಿಸಬೇಕೆಂಬ ಕನಸಿಗೆ ‘ಕಲಿಸು’ ರೆಕ್ಕೆ ತೊಡಿಸಿದೆ. ಭವಿಷ್ಯದಲ್ಲಿ ಜಗತ್ತೇ ಮೆಚ್ಚುವ ಕೆಲಸ ಮಾಡುವ ಭರವಸೆ ಮೂಡಿದೆ’
–ಇದು ದೊಡ್ಡಬಳ್ಳಾಪುರ ಸಮೀಪದ ತೂಬುಗೆರೆ ದೇವರಾಜ ಅರಸು ಪಿಯು ಕಾಲೇಜು ಪ್ರಥಮ ವರ್ಷದ ವಿದ್ಯಾರ್ಥಿನಿ ಲಕ್ಷ್ಮಿ ಆನಂದ ಕುಂಬಾರ್ ಅವರ ಮಾತು.
ಹುಕ್ಕೇರಿ ತಾಲ್ಲೂಕು ಕೊಟಬಾಗಿಯ ಆನಂದ ಕುಂಬಾರ್ ಅವರು ಮೇವಿನ ಹುಲ್ಲು ಕತ್ತರಿಸುವಾಗ ಯಂತ್ರಕ್ಕೆ ಕೈಕೊಟ್ಟು ಬೆರಳು ಕಳೆದುಕೊಂಡಿದ್ದರು. ದುಡಿಮೆ ಇಲ್ಲದೆ ಸಾಲ ಹೆಚ್ಚಾದಾಗ ಕೆಲಸ ಹುಡುಕಿಕೊಂಡು ಪತ್ನಿ ಮಹಾನಂದ ಅವರ ಜತೆ ದೊಡ್ಡಬಳ್ಳಾಪುರಕ್ಕೆ ಬಂದಿದ್ದರು. ಅಲ್ಲಿ ತೊಟವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಒಬ್ಬಳೇ ಮಗಳನ್ನುಕಷ್ಟಪಟ್ಟು ಓದಿಸುತ್ತಿದ್ದಾರೆ.
‘ಪ್ರೌಢಶಾಲೆಯಲ್ಲಿ ಇದ್ದಾಗಕ್ವೆಸ್ಟ್ ಅಲಯನ್ಸ್ ಸಂಸ್ಥೆಯ ವಿಶೇಷ ತಜ್ಞ ಅಭಿರಾಮ್ ಅವರು ನೀಡಿದ ಮಾಹಿತಿ ವಿಜ್ಞಾನ ಕ್ಷೇತ್ರದ ಬಗ್ಗೆ ಕುತೂಹಲ ಮೂಡಿಸಿತು. ಐಐಎಸ್ಸಿಯಲ್ಲಿ ನಡೆಯುತ್ತಿರುವ 10 ದಿನಗಳ ಕಾರ್ಯಾಗಾರ ಕನಸನ್ನು ಮತ್ತಷ್ಟು ವಿಸ್ತಾರಗೊಳಿಸಿದೆ’ ಎನ್ನುತ್ತಾರೆ ಲಕ್ಷ್ಮಿ.
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ), ಐಬಿಎಂ ಕಂಪನಿ ಹಾಗೂ ಕ್ವೆಸ್ಟ್ ಅಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಗ್ರಾಮೀಣ ವಿದ್ಯಾರ್ಥಿನಿಯರಿಗೆ ವಿಜ್ಞಾನ ವಿಷಯಗಳು ಹಾಗೂ 21ನೇ ಶತಮಾನದ ಕೌಶಲಗಳನ್ನು ಅನ್ವೇಷಿಸಲು ಅನುಕೂಲವಾಗುವಂತೆ ‘ಕಲಿಸು’ (ಕರ್ನಾಟಕ ಲರ್ನಿಂಗ್ ಇನಿಶಿಯೇಟಿವ್ ಫಾರ್ ಸೈನ್ಸ್ ಅಂಡರ್ ಗ್ರಾಜುಯೇಟ್ಸ್) ಯೋಜನೆ ರೂಪಿಸಲಾಗಿದೆ. ಪಿಯುಸಿ ಮುಗಿದ ತಕ್ಷಣ ವೈದ್ಯಕೀಯ, ಎಂಜಿನಿಯರಿಂಗ್ ಎನ್ನುವ ವಿದ್ಯಾರ್ಥಿಗಳಿಗೆ ವಿಜ್ಞಾನ ಕ್ಷೇತ್ರದ ಆಗಾಧ ಅವಕಾಶಗಳನ್ನ ಪರಿಚಯಿಸುವ ಕಾರ್ಯ ಮಾಡಲಾಗುತ್ತಿದೆ.
ನಗರ ಮತ್ತು ಗ್ರಾಮೀಣ ಪ್ರದೇಶಗಳ ಮಧ್ಯೆವಿಜ್ಞಾನ ಕಲಿಕೆಯಲ್ಲಿ ಭಾರಿ ಅಂತರವಿದೆ. ಅದರಲ್ಲೂ, ವಿಶೇಷವಾಗಿ ಹೆಣ್ಣುಮಕ್ಕಳಲ್ಲಿ ಈ ಅಂತರ ಅತಿ ಹೆಚ್ಚು. ವಿಜ್ಞಾನ ಹೆಣ್ಣು ಮಕ್ಕಳಿಗಲ್ಲ ಎಂಬ ಸಾಮಾಜಿಕ ಧೋರಣೆಯ ಕಾರಣ ಬಹುತೇಕ ಗ್ರಾಮೀಣ ಶಾಲೆಗಳಲ್ಲಿ ಇಂದಿಗೂ ವಿದ್ಯಾರ್ಥಿನಿಯರು ವಿಜ್ಞಾನ ಕಲಿಕೆಯಿಂದ ದೂರ ಉಳಿದಿದ್ದಾರೆ.
ರಾಜ್ಯದ ಅಂತಹ 306 ಶಾಲೆಗಳನ್ನುಕ್ವೆಸ್ಟ್ ಅಲಯನ್ಸ್ ಸಂಸ್ಥೆ ಗುರುತಿಸಿದ್ದು, ಎರಡು ಶಾಲೆಗಳಿಗೆ ಒಬ್ಬರಂತೆ ವಿಶೇಷ ತಜ್ಞರನ್ನು ನೇಮಕ ಮಾಡಿದೆ. 8ನೇ ತರಗತಿಯಿಂದಲೇ ಮಕ್ಕಳಿಗೆ ವಿಜ್ಞಾನ, ಕೌಶಲ ತರಬೇತಿ ನೀಡಲಾಗುತ್ತಿದೆ. ಮೂರು ವರ್ಷಗಳಲ್ಲಿ 62,283 ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ. ಪ್ರತಿ ವರ್ಷ 20 ವಿದ್ಯಾರ್ಥಿನಿಯರಿಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಕ್ಯಾಂಪಸ್‌ನಲ್ಲಿ 10 ದಿನಗಳು ವಿಶೇಷ ಕಾರ್ಯಾಗಾರ ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮವನ್ನು ದೇಶದ 20 ರಾಜ್ಯಗಳಿಗೂ ವಿಸ್ತರಿಸಲಾಗಿದ್ದು, ಇದುವರೆಗೂ 1 ಲಕ್ಷಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ನೆರವು ನೀಡಲಾಗಿದೆ.
ಕಾರ್ಯಾಗಾರದಲ್ಲಿ ಭಾಗಿಯಾದ ಎಂ.ಬಿ.ಪ್ರಿಯಾ ಚಿಕ್ಕ ವಯಸ್ಸಿಗೇ ತಂದೆ ಕಳೆದುಕೊಂಡು ತಾಯಿಯ ಆಸರೆಯಲ್ಲಿ ಬೆಳೆದಿದ್ದಾರೆ. ತಾಯಿ ಅಕ್ಕಮ್ಮ ಬೆಂಗಳೂರಿನಲ್ಲಿ ಕೆಲಸ ಮಾಡಿ ಮೂವರು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ‘ಚಿಕ್ಕವಳಿದ್ದಾಗ ಆರೋಗ್ಯ ಸಮಸ್ಯೆಗೆ ವೈದ್ಯರ ಬಳಿ ಹೋಗುತ್ತಿದ್ದೆ. ನಾನೂ ಅವರಂತೆ ವೈದ್ಯಳಾಗಬೇಕು ಎಂದು ಕನಸು ಕಂಡಿದ್ದೆ. ಐಐಎಸ್ಸಿಗೆ ಬಂದಮೇಲೆ ವಿಜ್ಞಾನ ಇನ್ನಷ್ಟು ಹತ್ತಿರವೆನಿಸಿದೆ’ ಎಂದರು.
ಗದಗ ಜಿಲ್ಲೆಯ ಜಯಶ್ರೀ, ಕೋಲಾರದ ಸಾಯಿ ಲಿಖಿತ ಸೇರಿದಂತೆ ಎಲ್ಲರಿಗೂ ಅಲ್ಲಿನ ವಿಜ್ಞಾನ ಪ್ರಯೋಗಾಲಯ, ಪ್ರಾಧ್ಯಾಪಕರ ವಿದ್ವತ್ತು, ವಿಜ್ಞಾನದ ವೈವಿಧ್ಯ ವಿಷಯಗಳು, ಸಮಾಜಮುಖಿ ಚಿಂತನೆ, ಗೌರವದ ನಡೆಗಳು ಗಾಢವಾಗಿ ಸೆಳೆದಿವೆ.
ಬಾಲ್ಯ ವಿವಾಹ ತಡೆದಿದ್ದ ಬಾಲೆ
ಸಂಸ್ಥೆ ಪಠ್ಯೇತರ ಚಟುವಟಿಕೆಗಳಿಗೂ ಒತ್ತು ನೀಡಿದೆ. ಸಾಮಾಜಿಕ ಕಟ್ಟುಪಾಡು, ಲಿಂಗತಾರತಮ್ಯ, ಬಾಲ್ಯ ವಿವಾಹ ಮತ್ತಿತರ ಅಂಶಗಳ ಕುರಿತು ಮಾಹಿತಿ ನೀಡಿ, ಮಕ್ಕಳನ್ನು ಮಾನಸಿಕವಾಗಿಯೂ ಸದೃಢಗೊಳಿಸಲಾಗುತ್ತಿದೆ.
ಸಂಸ್ಥೆಯ ಬೋಧನೆಯಿಂದ ಪ್ರೇರಣೆಗೊಂಡ ವಿದ್ಯಾರ್ಥಿನಿಯೊಬ್ಬರು ತನ್ನ ಸಹಪಾಠಿಯ ಬಾಲ್ಯ ವಿವಾಹ ತಡೆದ ಶ್ರೇಯಕ್ಕೂ ಪಾತ್ರರಾಗಿದ್ದಾರೆ. ಯಾದಗಿರಿ ಜಿಲ್ಲೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕಲಿಯುತ್ತಿದ್ದ ಸಹನಾ ಬಾಲ್ಯ ವಿವಾಹದ ಮಾಹಿತಿ ಪಡೆದಿದ್ದಳು. 9ನೇ ತರಗತಿಯಲ್ಲಿದ್ದಾಗ ತನ್ನ ಗೆಳತಿಯ ಮದುವೆ ನಿಶ್ಚಯವಾಗಿತ್ತು. ಈ ವಿಷಯವನ್ನು ಸಹಾಯವಾಣಿ ಮೂಲಕ ಅಧಿಕಾರಿಗಳ ಗಮನಕ್ಕೆ ತಂದು ಬಾಲ್ಯವಿವಾಹ ತಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.