ಹಾವೇರಿ: ‘ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರದಲ್ಲಿ ತೀರಾ ಹಿಂದುಳಿದಿದ್ದು, ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಪ್ರತ್ಯೇಕ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು’ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.
ಉಮೇಶ್ ಕತ್ತಿ ಅವರು ಮತ್ತೆ ‘ಪ್ರತ್ಯೇಕ ರಾಜ್ಯದ’ ಧ್ವನಿ ಎತ್ತಿದ್ದಾರಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಪ್ರತಿಕ್ರಿಯಿಸಿ, ನಾವೆಲ್ಲರೂ ಸುಮ್ಮನಿದ್ದೇವೆ ಎಂದು ತುಳಿಯುವ ಪ್ರಯತ್ನವನ್ನು ಮಾಡಬಾರದು. ಇದರಿಂದ ಆಕ್ರೋಶದ ಕಟ್ಟೆ ಯಾವಾಗ ಹೊಡೆಯುತ್ತದೋ ಗೊತ್ತಿಲ್ಲ ಎಂದರು.
ಉಮೇಶ್ ಕತ್ತಿ ಅವರು ಪ್ರತ್ಯೇಕ ರಾಜ್ಯಕ್ಕೆ 10 ವರ್ಷಗಳಿಂದ ಧ್ವನಿ ಎತ್ತುತ್ತಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಸರ್ಕಾರಗಳು ಮಲತಾಯಿ ಧೋರಣೆ ಎತ್ತಿದಾಗ ಸಹಜವಾಗಿಯೇ ಪ್ರತ್ಯೇಕತೆಯ ಕೂಗು ಕೇಳಿಬರುತ್ತದೆ. ಆದರೆ, ಅಖಂಡ ಕರ್ನಾಟಕ ಉಳಿಯಬೇಕಾದರೆ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು. ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಕಚೇರಿಗಳು ಬರಬೇಕು, ಡಾ.ನಂಜುಂಡಪ್ಪ ವರದಿ ಅನುಷ್ಠಾನಗೊಳ್ಳಬೇಕು ಎಂದು ಒತ್ತಾಯಿಸಿದರು.
ಜನಾಂಗದ ಅಭಿವೃದ್ಧಿಗಾಗಿ ಪೀಠ ಸ್ಥಾಪನೆ:
ಬಸವಣ್ಣನವರು ಜಾತಿ ತಾರತಮ್ಯ ತಪ್ಪಿಸಲು ಎಲ್ಲ ಜಾತಿಗಳನ್ನೊಳಗೊಂಡ ‘ಲಿಂಗಾಯತ ಧರ್ಮ’ ಸ್ಥಾಪಿಸಿದರು. ನೀವು ಲಿಂಗಾಯತ ಜಾತಿಯ ಒಂದು ಒಳಪಂಗಡದ ಮೀಸಲಾತಿಗೆ ಹೋರಾಡುತ್ತಿದ್ದೀರಲ್ಲ ಎಂಬ ಪ್ರರ್ತಕರ್ತರ ಪ್ರಶ್ನೆಗೆ, ನಮ್ಮದು ಪಂಚಮಸಾಲಿ ಪೀಠ. ನಮ್ಮ ಜನಾಂಗದ ಅಭಿವೃದ್ಧಿಗಾಗಿ ಪೀಠ ಸ್ಥಾಪನೆಯಾಗಿದೆ. ನಮ್ಮ ಜನಾಂಗಕ್ಕೆ ಸಾಮಾಜಿಕ ನ್ಯಾಯ ಕೊಡಿಸುವುದು ನಮ್ಮ ಜವಾಬ್ದಾರಿ. ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ‘2ಎ’ ಮೀಸಲಾತಿ ಅಗತ್ಯವಿದೆ ಎಂದು ಸಮರ್ಥಿಸಿಕೊಂಡರು.
2 ತಿಂಗಳ ಗಡುವು:
ಪಂಚಮಸಾಲಿ ಸಮುದಾಯಕ್ಕೆ ಎರಡು ತಿಂಗಳ ಒಳಗಾಗಿ ‘2ಎ’ ಮೀಸಲಾತಿ ಕಲ್ಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಸಿ.ಸಿ.ಪಾಟೀಲ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಮಾತು ಕೊಟ್ಟಿದ್ದಾರೆ. ಆಗಸ್ಟ್ 22ರ ಒಳಗಾಗಿ ಬೊಮ್ಮಾಯಿ ಅವರು ಮೀಸಲಾತಿ ಕಲ್ಪಿಸುವ ಭರವಸೆ ಇದೆ. ಇಲ್ಲದಿದ್ದರೆ ನಾನೇ ಬಂದು ಧರಣಿಗೆ ಕೂರುತ್ತೇನೆ ಎಂದು ಯತ್ನಾಳ್ ಹೇಳಿದ್ದಾರೆ ಎಂದರು.
ಈಗಾಗಲೇ ಹಾವೇರಿ ಜಿಲ್ಲೆಯಲ್ಲಿ ಜೂನ್ 11ರಿಂದ ನಿರಂತರವಾಗಿ ಜಾಗೃತಿ ಸಭೆಗಳನ್ನು ಮಾಡಲಾಗಿದೆ. ಮುಂದಿನ ಎರಡು ತಿಂಗಳ ಅವಧಿಯಲ್ಲಿ ಧಾರವಾಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಜಾಗೃತಿ ಸಭೆ ನಡೆಸುತ್ತೇವೆ. ಆಗಸ್ಟ್ 22ರವರೆಗೆ ಸಮುದಾಯದ ಜನರು ಶಾಂತಿ, ತಾಳ್ಮೆಯಿಂದ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.