ADVERTISEMENT

ತುಂಗಭದ್ರಾ ಜಲಾಶಯದ ಗೇಟ್ ದುರಸ್ತಿಗೆ ತ್ವರಿತ ಕ್ರಮ: ಡಿ.ಕೆ. ಶಿವಕುಮಾರ್

ಕೊಚ್ಚಿ ಹೋದ ಕ್ರಸ್ಟ್ ಗೇಟ್ ಪರಿಶೀಲಿಸಿ ಮಾಧ್ಯಮದವರ ಜೊತೆ ಮಾತನಾಡಿದ ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2024, 9:32 IST
Last Updated 11 ಆಗಸ್ಟ್ 2024, 9:32 IST
<div class="paragraphs"><p>ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತುಂಗಭದ್ರಾ ಅಣೆಕಟ್ಟೆಯ ಕೊಚ್ವಿಹೋದ ಕ್ರಸ್ಟ್ ಗೇಟ್ ಪರಿಶೀಲಿಸಿದ ದೂರದ ನೋಟ  -ಪ್ರಜಾವಾಣಿ ಚಿತ್ರ/ ಲವ ಕೆ.</p></div>

ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತುಂಗಭದ್ರಾ ಅಣೆಕಟ್ಟೆಯ ಕೊಚ್ವಿಹೋದ ಕ್ರಸ್ಟ್ ಗೇಟ್ ಪರಿಶೀಲಿಸಿದ ದೂರದ ನೋಟ -ಪ್ರಜಾವಾಣಿ ಚಿತ್ರ/ ಲವ ಕೆ.

   

ಮುನಿರಾಬಾದ್ (ಕೊಪ್ಪಳ ‌ಜಿಲ್ಲೆ): ಕೊಚ್ಚಿ ಹೋಗಿರುವ ತುಂಗಭದ್ರಾ ಜಲಾಶಯದ ಗೇಟ್ ಅಳವಡಿಕೆ ಕಾರ್ಯ ವೇಗ ಪಡೆದುಕೊಂಡಿದೆ. ಬೇರೆ ಟೀಕೆ ಟಿಪ್ಪಣೆಗಿಂತ ಗೇಟ್ ಅಳವಡಿಸುವ ಕೆಲಸಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.

ಕೊಚ್ಚಿ ಹೋದ ಕ್ರಸ್ಟ್ ಗೇಟ್ ಪರಿಶೀಲಿಸಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಗೇಟ್ ಅಳವಡಿಕೆ ತ್ವರಿತವಾಗಿ ಮಾಡಲಾಗುವುದು, ರೈತರಿಗೆ ಯಾವುದೇ ಭಯ ಬೇಡ. ರೈತರಿಗೆ ಒಂದು ಬೆಳೆಗೆ ನೀರು ಕೊಡಲಾಗುವುದು ಎಂದರು.

ADVERTISEMENT

ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ 12 ಲಕ್ಷ‌ ಎಕರೆ ನೀರಾವರಿಗೆ ಜಲಾಶಯದ ನೀರು ಅಗತ್ಯವಾಗಿ ಬೇಕಾಗಿದೆ. ಶನಿವಾರ ರಾತ್ರಿ ಹತ್ತು ಗೇಟ್ ಮೂಲಕ ನೀರು ಬಿಟ್ಟಾಗ ಅದರಲ್ಲಿ 19ನೇ ಗೇಟ್ ಕಳಚಿಕೊಂಡಿದೆ. ತಕ್ಷಣ ನಮ್ಮ ಅಧಿಕಾರಿಗಳು, ಜನಪ್ರನಿಧಿಗಳು ಚರ್ಚಿಸಿ ಅನುಮತಿ ಪಡೆದು ತಕ್ಷಣ ಎಲ್ಲ ಗೇಟ್ ಮೂಲಕ ನೀರು ಬಿಡಲಾಗಿದೆ ಎಂದು ವಿವರಿಸಿದರು.

ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ ನಾಲ್ಕು ಜಿಲ್ಲೆಗಳಿಗೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಗೇಟ್ ದುರಸ್ತಿ ಜವಾಬ್ದಾರಿ ಅನುಭವಿಗಳ ಸಂಸ್ಥೆಗೆ ವಹಿಸಲಾಗಿದೆ. ನಾರಾಯಣ ಎಂಜಿನಿಯರಿಂಗ್ ಹಾಗೂ ಹಿಂದುಸ್ಥಾನ ಕಂಪನಿಗೆ ಜಲಾಶಯದ ವಿನ್ಯಾಸ ನೀಡಲಾಗಿದೆ. ತಾಂತ್ರಿಕ ತಂಡದವರು ನಿನ್ನೆ ರಾತ್ರಿಯೇ ಇಲ್ಲಿಗೆ ಬಂದು ತಕ್ಷಣ ಕೆಲಸ ಆರಂಭಿಸಿದ್ದಾರೆ ಎಂದರು.

ರೈತರಿಗೆ ಒಂದು ಬೆಳೆಗೆ ನೀರು ಉಳಿಸಬೇಕೆಂದು ತೀರ್ಮಾನಿಸಲಾಗಿದೆ. ನೆರೆ ರಾಜ್ಯಗಳಿಗೆ ಅವರ ಪಾಲಿನ 25 ಟಿಎಂಸಿ ಅಡಿ‌ ನೀರು ಕೊಡಲಾಗಿದೆ. ಇನ್ನು 90 ಟಿಎಂಸಿ ಅಡಿ ಕೊಡಬೇಕಿದೆ. ರೈತರು ಗಾಬರಿಯಾಗುವ ಅಗತ್ಯವಿಲ್ಲ. ಮೂರು ಸರ್ಕಾರ ಒಟ್ಟಾಗಿ ಸಮಸ್ಯೆ ನಿವಾರಿಸಲಿವೆ. ರೈತರನ್ನು ಬದುಕಿಸಲು ಬೇಕಾದ ಕ್ರಮ ತೆಗೆದುಕೊಳ್ಳಲಾಗುವುದು. ಭದ್ರತೆ ದೃಷ್ಟಿಯಿಂದ ಜಲಾಶಯದಿಂದ ಎರಡು ಕಿ.ಮೀ.ವ್ಯಾಪ್ತಿಯಲ್ಲಿ ಜನಪ್ರತಿನಿಧಿಗಳು ಸೇರಿ ಇತರರನ್ನು ಬಿಡುವಂತಿಲ್ಲ. ನಿಷೇಧಾಜ್ಞೆ ಜಾರಿ ಮಾಡಲಾಗುವುದು ಎಂದರು.

ಇದು ತಾಂತ್ರಿಕ ವಿಷಯ‌ವಾಗಿದ್ದು ಜಲಾಶಯ ರಾಜ್ಯದ ಸಂಪತ್ತು. ಇದನ್ನು ಉಳಿಸಬೇಕಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ. ಮೊದಲು ಗೇಟ್ ಸರಿಪಡಿಸಲಾಗುವುದು. ಆಮೇಲೆ ಬೇರೆ ವಿಷಯ ಮಾತನಾಡುವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.