ADVERTISEMENT

ತುಮಕೂರು ಕೈಗಾರಿಕಾ ಪ್ರದೇಶಕ್ಕೆ ಎಸ್‌ಪಿವಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2023, 21:52 IST
Last Updated 18 ಆಗಸ್ಟ್ 2023, 21:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಬೆಂಗಳೂರು–ಚೆನ್ನೈ ಕೈಗಾರಿಕಾ ಕಾರಿಡಾರ್‌ನ ಭಾಗವಾಗಿ ತುಮಕೂರಿನಲ್ಲಿ ತಲೆ ಎತ್ತಲಿರುವ ಸ್ವಾಯತ್ತ ಕೈಗಾರಿಕಾ ಪ್ರದೇಶಕ್ಕೆ ವಿಶೇಷ ಉದ್ದೇಶದ ಘಟಕ (ಎಸ್‌ಪಿವಿ) ಸ್ಥಾಪಿಸಲಾಗಿದೆ. 

ಈ ಕೈಗಾರಿಕಾ ಪ್ರದೇಶದಲ್ಲಿ ಮೂಲಸೌಕರ್ಯ ಕಾಮಗಾರಿಗಳಿಗಾಗಿ ಗುತ್ತಿಗೆದಾರರಿಗೆ ಗುತ್ತಿಗೆ ವಹಿಸಲಾಗಿದೆ. ಇಲ್ಲಿ ಸುಮಾರು 60 ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. 

ಬೆಂಗಳೂರು–ಚೆನ್ನೈ ಕೈಗಾರಿಕಾ ಕಾರಿಡಾರ್‌, ಬೆಂಗಳೂರು–ಮುಂಬೈ ಕೈಗಾರಿಕಾ ಕಾರಿಡಾರ್‌, ಬೆಂಗಳೂರು–ಹೈದರಾಬಾದ್‌ ಕೈಗಾರಿಕಾ
ಕಾರಿಡಾರ್ ಸೇರಿ ದೇಶದಲ್ಲಿ 11 ಕಾರಿಡಾರ್‌ಗಳು ಸ್ಥಾಪನೆಯಾಗಲಿವೆ.  

ADVERTISEMENT

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಮೂಲಕ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಸೀಬಿ, ಹುಂಜನಾಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ 8484 ಎಕರೆ ಪ್ರದೇಶದಲ್ಲಿ ಈ ಕೈಗಾರಿಕಾ ಪ್ರದೇಶ ನಿರ್ಮಾಣವಾಗಲಿದೆ. 1,722 ಎಕರೆ ಜಾಗಕ್ಕೆ 2014ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಭೂಮಾಲೀಕರಿಗೆ ಪರಿಹಾರ ಪಾವತಿಸಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣ
ಗೊಂಡಿದೆ. ಉಳಿದ ಜಮೀನುಗಳ ಸ್ವಾಧೀನಕ್ಕೆ
ಕಲಂ 28 (3) ರ ವಿಚಾರಣೆ ಹಾಗೂ ಜಂಟಿ ಅಳತೆ ಕಾರ್ಯ ಪ್ರಗತಿಯಲ್ಲಿದೆ. 

ಬೆಂಗಳೂರು–ಮುಂಬೈ ಕೈಗಾರಿಕಾ ಕಾರಿಡಾರ್‌ನ ಭಾಗವಾಗಿ ಧಾರವಾಡ ಜಿಲ್ಲೆಯ ಸಿಂಗನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ 6,042 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶ ತಲೆ ಎತ್ತಲಿದೆ. ಇಲ್ಲಿನ ಜಮೀನುಗಳ ಸ್ವಾಧೀನಕ್ಕಾಗಿ 2021ರ ಮಾರ್ಚ್‌ನಲ್ಲಿ ಪ್ರಾಥಮಿಕ ಅಧಿಸೂಚನೆ
ಹೊರಡಿಸಲಾಗಿದ್ದು, ಜಂಟಿ ಅಳತೆ ಕಾರ್ಯ ನಡೆಯುತ್ತಿದೆ.

ಬೆಂಗಳೂರು–ಹೈದರಾಬಾದ್‌ ಕೈಗಾರಿಕಾ ಕಾರಿಡಾರ್‌ನ ಭಾಗವಾಗಿ ರಾಯಚೂರು ಜಿಲ್ಲೆಯ ಕಡೇಚೂರು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ 3,269 ಎಕರೆಯಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಲಾಗುತ್ತದೆ. ಇದಕ್ಕಾಗಿ 2021ರ ಸೆಪ್ಟೆಂಬರ್‌ ನಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಜಂಟಿ ಅಳತೆ ಕಾರ್ಯ ಪ್ರಗತಿಯಲ್ಲಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.