ADVERTISEMENT

ಮತ್ತಿಬ್ಬರ ಸಾವು: ಮೃತದೇಹಗಳು ತಾಯ್ನಾಡಿಗೆ

ಮೃತಪಟ್ಟ ಕನ್ನಡಿಗರ ಸಂಖ್ಯೆ 9ಕ್ಕೆ ಏರಿಕೆ * ಶ್ರೀಲಂಕಾದಲ್ಲಿ ಮರಣೋತ್ತರ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 20:02 IST
Last Updated 23 ಏಪ್ರಿಲ್ 2019, 20:02 IST
ಪುಟ್ಟರಾಜು
ಪುಟ್ಟರಾಜು   

ಬೆಂಗಳೂರು:‌ ಶ್ರೀಲಂಕಾ ಬಾಂಬ್‌ ಸ್ಫೋಟದಲ್ಲಿ ಮತ್ತಿಬ್ಬರು ಕನ್ನಡಿಗರು ದುರ್ಮರಣಕ್ಕೀಡಾಗಿದ್ದು ಮಂಗಳವಾರ ದೃಢಪಟ್ಟಿದ್ದು, ಇದರೊಂದಿಗೆ ಮೃತಪಟ್ಟ ಕನ್ನಡಿಗರ ಸಂಖ್ಯೆ 9ಕ್ಕೆ ಏರಿದೆ.

ಲೋಕಸಭಾ ಚುನಾವಣೆ ಮುಗಿಸಿ ಪ್ರವಾಸಕ್ಕೆ ಹೋಗಿದ್ದನೆಲಮಂಗಲ ಹಾಗೂ ದಾಸರಹಳ್ಳಿಯ ಜೆಡಿಎಸ್ ಮುಖಂಡರ ತಂಡದಲ್ಲಿದ್ದ ಐವರು ಮೃತಪಟ್ಟಿದ್ದು ಸೋಮವಾರ ಖಚಿತಪಟ್ಟಿತ್ತು. ಆ ತಂಡದಲ್ಲಿದ್ದ ಇಬ್ಬರು ನಾಪತ್ತೆಯಾಗಿದ್ದರು. ಆ ಇಬ್ಬರೂ ಮೃತಪಟ್ಟಿರುವುದಾಗಿ ಭಾರತೀಯ ರಾಯಭಾರಿ ಕಚೇರಿ ಮಾಹಿತಿ ನೀಡಿದೆ.

‘ಮತ್ತಿಬ್ಬರು ಭಾರತೀಯರು ಮೃತಪಟ್ಟಿದ್ದನ್ನು ತಿಳಿಸಲು ವಿಷಾದಿಸುತ್ತೇವೆ. ಎ. ಮಾರೇಗೌಡ ಹಾಗೂ ಎಚ್‌. ಪುಟ್ಟರಾಜು ಬಾಂಬ್‌ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ. ಅವರ ಮೃತದೇಹಗಳನ್ನು ಗುರುತಿಸಲಾಗಿದೆ’ ಎಂದು ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಟ್ವೀಟ್‌ ಮಾಡಿದ್ದಾರೆ.

ADVERTISEMENT

ಬೆಂಗಳೂರಿನಿಂದ ಶ್ರೀಲಂಕಾಕ್ಕೆ ಹೋಗಿರುವ ಸಂಬಂಧಿಕರು, ಮೃತದೇಹಗಳನ್ನು ಗುರುತಿಸಿ ಅದರ ವಿಡಿಯೊ ಚಿತ್ರೀಕರಿಸಿ ಮಂಗಳವಾರ ಬೆಳಿಗ್ಗೆಯೇ ಕಳುಹಿಸಿಕೊಟ್ಟಿದ್ದಾರೆ. ಅವುಗಳನ್ನು ನೋಡುತ್ತಿದ್ದಂತೆ ಮಾರೇಗೌಡ ಹಾಗೂ ಪುಟ್ಟರಾಜು ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹಾಗೂ ಸಂಬಂಧಿಕರು ಮನೆಗಳಿಗೆ ಮಂಗಳವಾರ ಭೇಟಿ ನೀಡಿ ಸಾಂತ್ವನ ಹೇಳಿದರು. ಮನೆ ಎದುರು ಹಾಕಲಾಗಿದ್ದ ಮೃತ ಮುಖಂಡರ ಭಾವಚಿತ್ರಗಳ ಬ್ಯಾನರ್‌ ಎದುರು ಕುಳಿತಿದ್ದ ಕಾರ್ಯಕರ್ತರು ಒಡನಾಟವನ್ನು ನೆನೆದು ಕಂಬನಿ ಮಿಡಿದರು. ‘ಕಷ್ಟದಲ್ಲಿ ಬೆಳೆದಿದ್ದ ಹನುಮಂತರಾಯಪ್ಪ, ಕಷ್ಟವೆಂದು ಹೇಳಿಕೊಂಡು ಮನೆಗೆ ಯಾರೇ ಹೋದರೂ ಸಹಾಯ ಮಾಡುತ್ತಿದ್ದರು. ಯಾವುದೇ ಕೆಲಸವಿದ್ದರೂ ಮೊದಲಿಗೆ ಹನುಮಂತರಾಯಪ್ಪ ಅವರ ಸಲಹೆ ಪಡೆಯುತ್ತಿದ್ದೆವು’ ಎಂದು ಕಾರ್ಯಕರ್ತ ನವೀನ್ ದುಃಖತಪ್ತರಾದರು.

ಗ್ರಾ.ಪಂ. ಮಾಜಿ ಸದಸ್ಯ: ‘ಮೃತ ಪುಟ್ಟರಾಜು,ಬೆಂಗಳೂರು ಉತ್ತರ ತಾಲೂಕಿನ ಅರೇಕ್ಯಾತ್ನಳ್ಳಿಯ ನಿವಾಸಿ. ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾಗಿದ್ದ ಅವರು ಜೆಡಿಎಸ್‌ ಮುಖಂಡರಾಗಿದ್ದರು’ ಎಂದು ಸಂಬಂಧಿಯೊಬ್ಬರು ಹೇಳಿದರು.

‘ಪುಟ್ಟರಾಜುಗೆ ಪತ್ನಿ ಹಾಗೂ ಹೆಣ್ಣು ಮಗುವಿದೆ. ಹನುಮಂತರಾಯಪ್ಪ ಅವರಿಗೆ ಆತ್ಮಿಯರಾಗಿದ್ದ ಅವರು ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು. ಅವರ ಸಾವು ನಂಬಲಾಗುತ್ತಿಲ್ಲ’ ಎಂದರು.

ನಿರ್ಮಾಪಕ ಕೃಷ್ಣಪ್ಪ ಸಂಬಂಧಿ: ‘ಮೃತ ಮಾರೇಗೌಡ,ಅಡಕಮಾರನಹಳ್ಳಿ ನಿವಾಸಿ. ವಿಧಾನ ಪರಿಷತ್ ಸದಸ್ಯರೂ ಆಗಿದ್ದ ಸಿನಿಮಾ ನಿರ್ಮಾಪಕ ಇ.ಕೃಷ್ಣಪ್ಪ ಅವರ ಸಂಬಂಧಿ. ಮೃತದೇಹ ತರಲು ಕೃಷ್ಣಪ್ಪ ಅವರೇ ಶ್ರೀಲಂಕಾಕ್ಕೆ ಹೋಗಿ
ದ್ದಾರೆ’ ಎಂದು ಸ್ನೇಹಿತರು ತಿಳಿಸಿದರು.

‘ರಿಯಲ್ ಎಸ್ಟೇಟ್‌ ಉದ್ಯಮಿಯಾಗಿದ್ದ ಮಾರೇಗೌಡ, ಜೆಡಿಎಸ್ ಕಾರ್ಯಕರ್ತರಾಗಿದ್ದರು. ಮುಖಂಡರ ಜೊತೆಯಲ್ಲಿ ಆಗಾಗ ಪ್ರವಾಸಕ್ಕೆ ಹೋಗಿ ಬರುತ್ತಿದ್ದರು. ಆದರೆ, ಈ ಬಾರಿ ಹೋದವರು ಬರಲೇ ಇಲ್ಲ...’ ಎಂದು ಸ್ನೇಹಿತರು ಕಣ್ಣೀರಿಟ್ಟರು.

ತಡರಾತ್ರಿ ತಾಯ್ನಾಡಿಗೆ: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏ.20ರಂದು ರಾತ್ರಿ ಶ್ರೀಲಂಕಾಕ್ಕೆ ಹೋಗಿದ್ದ ಮುಖಂಡರು, ಏ.21ರಂದು ಬೆಳಿಗ್ಗೆ ಶಾಂಗ್ರಿಲಾ ಹೋಟೆಲ್‌ನ ಬಾಂಬ್‌ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ ಎಂಬ ವಿಷಯ ಸೋಮವಾರವಷ್ಟೇ ಸಂಬಂಧಿಕರಿಗೆ ಗೊತ್ತಾಗಿದೆ. ಮೃತದೇಹಗಳನ್ನು ತಾಯ್ನಾಡಿಗೆ ತರಲು ಸಂಬಂಧಿಕರು ಹಾಗೂ ಸ್ನೇಹಿತರನ್ನು ಒಳಗೊಂಡ ತಂಡ ಸೋಮವಾರ ರಾತ್ರಿ ಕೊಲಂಬೊಕ್ಕೆ ಹೋಗಿದೆ. ಏಳು ಮಂದಿಯ ಮರಣೋತ್ತರ ಪರೀಕ್ಷೆಯ ನಂತರ ವಿಮಾನದಲ್ಲಿ ಮೃತದೇಹಗಳನ್ನು ಬೆಂಗಳೂರಿಗೆತರಲಾಗುತ್ತದೆ.

‘ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಹೆಚ್ಚಿದ್ದು, ಸರದಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಮಂಗಳವಾರ ಸಂಜೆವರೆಗೆ ಬೆಂಗಳೂರಿನ ನಾಲ್ವರ ಮರಣೋತ್ತರ ಪರೀಕ್ಷೆ ಮುಗಿದಿದೆ. ಇನ್ನು ಮೂವರದ್ದು ನಡೆಯಬೇಕಿದೆ. ತಡರಾತ್ರಿ 2.30 ಗಂಟೆಗೆ ವಿಮಾನದಲ್ಲಿ ಮೃತದೇಹಗಳನ್ನು ಬೆಂಗಳೂರಿಗೆ ತರಲಾಗುವುದು’ ಎಂದು ಹನುಮಂತರಾಯಪ್ಪ ಸಂಬಂಧಿ ಶ್ರೀನಿವಾಸ್ ತಿಳಿಸಿದರು.

30ಕ್ಕೂ ಹೆಚ್ಚು ಕನ್ನಡಿಗರು ವಾಪಸು

ಶ್ರೀಲಂಕಾ ಪ್ರವಾಸಕ್ಕೆ ಹೋಗಿದ್ದ 30ಕ್ಕೂ ಹೆಚ್ಚು ಕನ್ನಡಿಗರು ಮಂಗಳವಾರ ಬೆಂಗಳೂರಿಗೆ ವಾಪಸ್‌ ಬಂದರು. ಪ್ರವಾಸಕ್ಕೆ ಹೋಗಿದ್ದ ಕನ್ನಡಿಗರ ಪೈಕಿ ಕೆಲವರು ಶಾಂಗ್ರಿಲಾ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಬಾಂಬ್ ಸ್ಫೋಟದ ವೇಳೆಯಲ್ಲಿ ಕೆಲವರು ಕೊಠಡಿಯಲ್ಲಿ ಹಾಗೂ ಇನ್ನು ಹಲವರು ಹೋಟೆಲ್‌ನ ಹೊರಭಾಗದಲ್ಲಿ ನಿಂತುಕೊಂಡಿದ್ದರು. ಹೀಗಾಗಿ, ಅವರು ಅಪಾಯದಿಂದ ಪಾರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.