ಮಂಡ್ಯ: ನಾಗಮಂಗಲ ಗಲಭೆಯಲ್ಲಿ ಬಂಧಿತರಾಗಿರುವ ಬದ್ರಿಕೊಪ್ಪಲು ಗ್ರಾಮದ ಹಿಂದೂ ಯುವಕರನ್ನು ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ಭೇಟಿ ಮಾಡಲು ಬರುತ್ತಿದ್ದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ಜಿಲ್ಲೆಯ ಗಡಿಭಾಗ ಮದ್ದೂರು ತಾಲ್ಲೂಕಿನ ನಿಡಘಟ್ಟ ಬಳಿ ಪೊಲೀಸರು ಶನಿವಾರ ತಡೆದಿದ್ದಾರೆ.
ಶನಿವಾರ ಬೆಳಿಗ್ಗೆಯಿಂದಲೇ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ಪೊಲೀಸರು, ಮುತಾಲಿಕ್ ವಾಹನವನ್ನು ತಡೆದು ಆದೇಶ ಪತ್ರ ತೋರಿಸಿ ವಾಪಸ್ ಹೋಗುವಂತೆ ತಿಳಿಸಿದ್ದಾರೆ.
ಆಗ, ಮುತಾಲಿಕ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ಕರೆ ಮಾಡಿ, ‘ನಾನು ನಾಗಮಂಗಲ, ಮಂಡ್ಯಕ್ಕೆ ಹೋಗುವುದಿಲ್ಲ. ಮೈಸೂರು ನಗರಕ್ಕೆ ಹೆದ್ದಾರಿ ಮೂಲಕ ತೆರಳಲು ಅನುಮತಿ ನೀಡುವಂತೆ ಕೋರಿದರು. ನಂತರ ಪೊಲೀಸ್ ಬಂದೋಬಸ್ತ್‌ನಲ್ಲಿ ಮಂಡ್ಯ ಜಿಲ್ಲೆಯ ಗಡಿಯನ್ನು ದಾಟಿಸಿ, ಮೈಸೂರಿಗೆ ಕಳುಹಿಸಲಾಯಿತು.
ಅ.5ರವರೆಗೆ ನಿರ್ಬಂಧ:
ನಾಗಮಂಗಲ ಗಲಭೆ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಅಕ್ಟೋಬರ್ 5ರವರೆಗೆ ಜಿಲ್ಲೆಯನ್ನು ಪ್ರವೇಶಿಸದಂತೆ ನಿರ್ಬಂಧ ವಿಧಿಸಿ ಮಂಡ್ಯ, ಪಾಂಡವಪುರ ಉಪವಿಭಾಗಾಧಿಕಾರಿಗಳು ಪ್ರತ್ಯೇಕ ಆದೇಶ ಹೊರಡಿಸಿದ್ದಾರೆ.
ತಡೆಯುವುದು ಅಕ್ಷಮ್ಯ ಅಪರಾಧ:
ಪ್ರಮೋದ್ ಮುತಾಲಿಕ್ ಮಾಧ್ಯಮದವರೊಂದಿಗೆ ಮಾತನಾಡಿ, ‘ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಎಲ್ಲಾ ರೀತಿಯ ಸ್ವಾತಂತ್ರ್ಯ ನೀಡಿದ್ದಾರೆ. ನಾನು ಮಂಡ್ಯಕ್ಕೆ ಭೇಟಿ ನೀಡಿದ ಬಳಿಕ ಏನಾದರೂ ಆದರೆ ನನ್ನ ಮೇಲೆ ಕೇಸ್ ಹಾಕಿ. ನಮ್ಮನ್ನು ತಡೆಯುವ ಕೆಲಸ ಅಕ್ಷಮ್ಯ ಅಪರಾಧ’ ಎಂದು ಕಿಡಿಕಾರಿದರು.
‘ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ನಿರಂತರವಾಗಿ ಹಿಂದೂಗಳ ಮೇಲೆ ದೌರ್ಜನ್ಯವಾಗುತ್ತಿದೆ. ನಾಗಮಂಗಲ ಹಾಗೂ ದಾವಣಗೆರೆ ಘಟನೆ ಸಾಕ್ಷಿ. ಇವತ್ತು ಪ್ಯಾಲಿಸ್ಟೈನ್ ಧ್ವಜ ಹಾರಿಸುತ್ತಾರೆ ನಾಳೆ ಪಾಕಿಸ್ತಾನದ ಧ್ವಜ ಹಾರಿಸುತ್ತಾರೆ. ಇಂಥವರನ್ನು ಶೂಟ್ ಮಾಡಬೇಕು. ಈದ್ ಮಿಲಾದ್ ವೇಳೆ ಆ ಬಾವುಟ ಯಾಕೆ ಹಾರಿಸಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.