ಬೆಂಗಳೂರು: ಅರ್ಜುನ್ ಸರ್ಜಾ ವಿರುದ್ಧ ನೀಡಿರುವ ದೂರಿನಲ್ಲಿ ಶ್ರುತಿ ಹರಿಹರನ್ ವಿಸ್ಮಯ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಘಟನೆಗಳನ್ನು ವಿವರಿಸಿ, ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ.
ಶ್ರುತಿ ದೂರಿನಲ್ಲಿರುವ ವಿವರ...
* 29 ವರ್ಷ ವಯಸ್ಸಿನವಳಾದ ನಾನು(ಶ್ರುತಿ ಹರಿಹರನ್) ಮೇಲೆ ತಿಳಿಸಿರುವ ವಿಳಾಸದಲ್ಲಿ ವಾಸವಿದ್ದೇನೆ. ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಿಂದ ಬಿಬಿಎಂ ಪದವಿ ಪಡೆದಿದ್ದೇನೆ. ಭಾರತೀಯ ಚಲನಚಿತ್ರ ನಟಿ ಮತ್ತು ನಿರ್ಮಾಪಕಿಯಾಗಿರುವ ನಾನು, ಪ್ರಮುಖವಾಗಿ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ತಮಿಳು ಹಾಗೂ ಮಲಯಾಳಂ ಮನರಂಜನಾ ಕ್ಷೇತ್ರದಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದೇನೆ.
* 2015ರ ನವೆಂಬರ್‌ನಲ್ಲಿ ’ವಿಸ್ಮಯ’ ಹೆಸರಿನ ಚಿತ್ರದಲ್ಲಿ ನಟಿಸುತ್ತಿದ್ದೆ. ಅದರಲ್ಲಿ ನನ್ನದು ರಂಜಿತ್ ಕಾಳಿದಾಸ್(ಅರ್ಜುನ್ ಸರ್ಜಾ ಅಭಿನಯಿಸಿರುವ) ಪಾತ್ರದ ಪತ್ನಿಯ ಪಾತ್ರ. ಹೆಬ್ಬಾಳದ ಪ್ರೆಸಿಡೆನ್ಸಿ ಕಾಲೇಜಿನ ಸಮೀಪದ ಬಂಗಲೆಯಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ನಾನು ಬೆಳಿಗ್ಗೆ 7:30ಕ್ಕೆ ಚಿತ್ರೀಕರಣದ ಸ್ಥಳವನ್ನು ತಲುಪಿ ಸಂಜೆ 6ರ ವರೆಗೂ ಶೂಟಿಂಗ್‌ನಲ್ಲಿ ಭಾಗಿಯಾದೆ. ಸ್ಕ್ರಿಪ್ಟ್ ಪ್ರಕಾರ ಆ ದಿನ ಪ್ರಣಯ ದೃಶ್ಯದ ಚಿತ್ರೀಕರಣವಿತ್ತು. ಕೆಲವು ಸಂಭಾಷಣೆಗಳ ಬಳಿಕ ಇಬ್ಬರೂ ಅಪ್ಪಿಕೊಳ್ಳುವ ದೃಶ್ಯ. ದೃಶ್ಯದ ಚಿತ್ರೀಕರಣದ ನಂತರ ನಿರ್ದೇಶಕರು ರಿಹರ್ಸಲ್ ನಡೆಸುವ ಇಚ್ಛೆ ಹೊಂದಿದ್ದರು. ರಿಹರ್ಸಲ್ ಸಮಯದಲ್ಲಿ ಅರ್ಜುನ್ ಸರ್ಜಾ ಅವರು ಪ್ರಣಯಪೂರ್ವಕ ರೀತಿಯಲ್ಲಿ ತಬ್ಬಿ ಹಿಡಿದು, ಸೊಂಟದಿಂದ ಬೆನ್ನಿನ ಮೇಲಿನ ವರೆಗೂ ಕೈಗಳನ್ನು ಆಡಿಸುತ್ತ ಒಳ ಉಡುಪಿನ ಮೇಲೆಸ್ಪರ್ಶಿಸಿ, ಮತ್ತೆ ಕೈಯನ್ನು ಸೊಂಟದಿಂದ ತೊಡೆಯ ಭಾಗದವರೆಗೂ ತಂದರು.
ಅವರು ರಿಹಸರ್ಲ್‌ನ ಹೊರತಾಗಿ ವರ್ತಿಸುತ್ತಿರುವುದು ನನ್ನ ಗಮನಕ್ಕೆ ಬಂದಿತಾದರೂ ಆಗ ತಾನೆ ಚಿತ್ರರಂಗದಲ್ಲಿ ಬೆಳೆಯುತ್ತಿದ್ದ ಕಲಾವಿದೆಯಾಗಿ ಅದನ್ನು ಪ್ರತಿಭಟಿಸಿ ಹೇಳಿಕೊಳ್ಳಲಾಗದೆ, ಮೌನವಾಗಿ ನುಂಗಿಕೊಳ್ಳಬೇಕಾಯಿತು. ಅದಲ್ಲದೇ ಅವರು ಚಿತ್ರರಂಗದಲ್ಲಿ ಹಿರಿಯ ಕಲಾವಿದ ಹಾಗೂ ಪ್ರಾಬಲ್ಯ ಹೊಂದಿರುವವರು. ನಾನು ಪ್ರತಿಕ್ರಿಯಿಸುವ ಮೊದಲೇ ಮತ್ತೊಮ್ಮೆ ಅವರು ನನ್ನನ್ನು ಗಟ್ಟಿಯಾಗಿ
ತಬ್ಬಿ ಹಿಡಿದು, ಅವರ ಸಮೀಪಕ್ಕೆ ಸೆಳೆದುಕೊಂಡರು. ಬೆನ್ನಿನ ಮೇಲೆ ಕೈಯನ್ನು ಆಡಿಸುತ್ತಾ ’ನಾವು ದೃಶ್ಯದಲ್ಲಿ ಈ ರೀತಿ ಇಂಪ್ರುವೈಸ್ ಮಾಡಬಹುದೇ’ ಎಂದು ನಿರ್ದೇಶಕರನ್ನು ಕೇಳಿದರು. ತಕ್ಷಣವೇ ನಾನು ನಿರ್ದೇಶಕರ ಕಡೆಗೆ ಸರಿದು, ’ನನಗೆ ಈ ರೀತಿ ಕೆಲಸ ಮಾಡಲು ಆಗುವುದಿಲ್ಲ. ನಾನು ಸುಮ್ಮನಿರುವುದನ್ನು ಬಳಸಿಕೊಂಡು ಅವರ ವರ್ತನೆಯಿಂದ ಪೆಟ್ಟು ನೀಡುತ್ತಿದ್ದಾರೆ. ಅವರ ಪ್ರತಿ ಸ್ಪರ್ಶವೂ ಲೈಂಗಿಕ ಆಸಕ್ತಿಯನ್ನು ವ್ಯಕ್ತಪಡಿಸುವಂತೆಯೇ ಇವೆ’ ಎಂದು ನಿರ್ದೇಶಕರಿಗೆ ಹೇಳಿ ಸಹಿಸಿಕೊಳ್ಳಲಾರದೆ ಕ್ಯಾರಾವಾನ್‌ಗೆ ಓಡಿದೆ. ಅಲ್ಲಿ ಅಳುತ್ತಾ ಕುಳಿತೆ. ನಮ್ಮ ಸಿಬ್ಬಂದಿ ಬೋರೇಗೌಡ ಮತ್ತು ಕಿರಣ್ ನನ್ನನ್ನು ಸಮಾಧಾನ ಪಡಿಸಿದರು.
ಇದನ್ನೂ ಓದಿ:#MeToo: ಶ್ರುತಿ ಬಿಡಿಸಿಟ್ಟ ಅರ್ಜುನ್ ಸರ್ಜಾ ರೂಪ!
ಇದೇ ಚಿತ್ರದಲ್ಲಿ ಮತ್ತೊಂದು ದೃಶ್ಯ; ಮಂಚದ ಮೇಲೆ ಇಬ್ಬರೂ ಉರುಳುವ ದೃಶ್ಯ. ಈ ಸಂದರ್ಭವನ್ನು ಬಳಸಿಕೊಂಡ ಅವರು ನನ್ನ ಕೈಯನ್ನು ಎಳೆದು ಸಮೀಪಕ್ಕೆ ಸೆಳೆದುಕೊಂಡು ಅಪ್ಪಿಕೊಳ್ಳುವಂತೆ ಪ್ರಯತ್ನಿಸಿದರು. ಆದರೆ ನಾನು ಅವರ ಕೈಯನ್ನು ದೂರ ತಳ್ಳಿ ಚಿತ್ರೀಕರಣ ಮುಗಿಸಿ ಸೆಟ್‌ನಿಂದ ಹೊರಬಂದೆ. ನನ್ನ ಪ್ರತಿರೋಧದ ನಡುವೆಯೂ ಅರ್ಜುನ್ ಸರ್ಜಾ ನನ್ನ ಸಹಿಸಿಕೊಳ್ಳುವಿಕೆಯ ಲಾಭ ಪಡೆಯುತ್ತಿರುವಂತೆ ನನಗೆ ಅನ್ನಿಸಿತು. ನನಗೆ ಇನ್ನೂ ಸಹಿಸಲಾಗದೆ, ಅತ್ತು ಕೂಗಾಡಿದೆ ಹಾಗೂ ಸಹ ನಿರ್ದೇಶಕರಾದ ಭರತ್ ನೀಲಕಂಠ ಮತ್ತು ಮೋನಿಕಾ ಅವರಿಗೆ ಈ ಕುರಿತು ತಿಳಿಸಿದೆ. ಸ್ಪಂದಿಸಿದ ಅವರು, ಇನ್ನು ಮುಂದೆ ರಿಹರ್ಸಲ್‌ಗಳು ಇರುವುದಿಲ್ಲ, ನೇರವಾಗಿ ಚಿತ್ರೀಕರಣ ಎಂದರು.
* 2015ರ ಡಿಸೆಂಬರ್ , ದೇವನಹಳ್ಳಿಯ ಒಂದು ಆಸ್ಪತ್ರೆ: ಚಿತ್ರೀಕರಣದ ಸಮಯ ಬೆಳಿಗ್ಗೆ 7:30ರಿಂದ ಸಂಜೆ 5:00. ಅರ್ಜುನಾ ಸರ್ಜಾ ನಿರಂತರವಾಗಿ ಲೈಂಗಿಕ ಆಸಕ್ತಿಯನ್ನು ವ್ಯಕ್ತಪಡಿಸುವ ರೀತಿಯಲ್ಲಿ ಮಾತುಗಳನ್ನು ಆಡುತ್ತಿದ್ದರು. ’ನಾವು ಏಕಾಂತದ ಸಮಯವನ್ನು ಕಳೆಯಬಹುದು’, ಚಿತ್ರೀಕರಣದ ಬಳಿಕ ತನ್ನ ಖಾಸಗಿ ಸ್ಥಳದಲ್ಲಿ ಭೇಟಿಯಾಗುವಂತೆ ಹೇಳುತ್ತಿದ್ದರು. ಅವರು ಲೈಂಗಿಕ ಅನುಕೂಲಕ್ಕಾಗಿಯೇ ನನ್ನನ್ನು ಒತ್ತಾಯಿಸುತ್ತಿದ್ದರೆಂದು ನಂಬುತ್ತೇನೆ, ಅದರ ಹೊರತು ಅವರ ಖಾಸಗಿ ಜಾಗಕ್ಕೆ ಬರುವಂತೆ ಕರೆಯಲು ಬೇರೆ ಯಾವುದೇ ಕಾರಣಗಳು ಇರಲಿಲ್ಲ.
* ಅದೇ ತಿಂಗಳು ಒಂದು ದಿನ– ನನ್ನ ತಂಡದೊಂದಿಗೆ(ಬೋರೇಗೌಡ ಮತ್ತು ಕಿರಣ್) ಕಾರಿನಲ್ಲಿ ನನ್ನ ಮನೆಯತ್ತ ತೆರಳುತ್ತಿದ್ದೆ. ದೇವನಹಳ್ಳಿ ಸಿಗ್ನಲ್ ಬಳಿ ಕಾರು ನಿಂತಿತು. ನಮ್ಮ ಕಾರಿನ ಬದಿಗೆ ಅರ್ಜುನ್ ಸರ್ಜಾ ಅವರೂ ಕಾರಿನಲ್ಲಿ ಬಂದು, ಕಾರಿನ ಕಿಟಕಿ ಇಳಿಸಿ; ’ಬನ್ನಿ ರೆಸಾರ್ಟ್‌ಗೆ’ ಎಂದು ನನ್ನನ್ನು ಕರೆದರು. ಯಾವುದಕ್ಕಾಗಿ ಎಂದು ನಾನು ಪ್ರಶ್ನಿಸಿದ್ದಕ್ಕೆ ’ಹಿತಕರ ಸಮಯದ ಅನುಭವ ಪಡೆಯಲು. ನಾನು ನಿಮ್ಮಲ್ಲಿ ಸಾಕಷ್ಟು ಬಾರಿ ಕೇಳಿದರೂ, ನೀವು ಅದನ್ನು ನಿರಾಕರಿಸುತ್ತಲೇ ಬಂದಿರಿ. ಇವತ್ತು ನಾನು ಸಂಪೂರ್ಣ ಬಿಡುವಾಗಿದ್ದೇನೆ ಹಾಗೂ ನನ್ನ ಕೊಠಡಿಯಲ್ಲಿ ಬೇರೆ ಯಾರೂ ಸಹ ಇಲ್ಲ’ ಎಂದರು. ನನಗೆ ಒತ್ತರಿಸಿ ಬಂದ ಅಳು ತಡೆಯಲು ಸಾಧ್ಯವೇ ಆಗಲಿಲ್ಲ, ಕಣ್ಣೀರು ಕೆನ್ನೆಗಳಿಂದ ಜಾರುತ್ತಿರುವುದನ್ನು ಕಂಡ ಅರ್ಜುನ್ ಸರ್ಜಾ ಅಲ್ಲಿಂದ ಹೊರಟರು.
* 2016ರ ಜುಲೈ, ಬಹುಶಃ 18ನೇ ತಾರೀಖು; ಯು.ಬಿ ಸಿಟಿಯಲ್ಲಿ ಅದೇ ಚಿತ್ರದ ಚಿತ್ರೀಕರಣ– ಅಲ್ಲಿನ ಲಾಬಿಯಲ್ಲಿ ಕೆಲ ಸಮಯ ಕಳೆದಿದ್ದೆ. ಹಿಂದಿನಿಂದ ಬಂದ ಅರ್ಜುನ್ ಸರ್ಜಾ, ನನ್ನನ್ನು ಹಿಂದೆ ಗಟ್ಟಿಯಾಗಿ ಹಿಡಿದು ’ಲಾಬಿಯಲ್ಲಿ ಏಕೆ ಒಬ್ಬಳೇ ಕಾಯುತ್ತಿದ್ದೇಯಾ, ನನಗೆ ಯಾಕೆ ಜತೆಯಾಗಬಾರದು, ಕೋಣೆಯಲ್ಲಿ ನಾನೂ ಸಹ ಒಬ್ಬನೇ, ನಾವು ಸಂತೋಷವನ್ನು ಕಾಣಬಹುದು’ ಎಂದು ಉಸಿರಿದರು. ನಾನು ತುಂಬ ಭಯಪಟ್ಟೆ, ಅವರ ಮಾತಿನ ಹಿನ್ನೆಲೆ ನನಗೆ ಅರ್ಥವಾಗಿತ್ತು, ನನ್ನ ಖಾಸಗೀತನದ ಮೇಲೆ ಪ್ರಹಾರ ಮಾಡುತ್ತಿರುವುದನ್ನು ಮನಗಂಡು; ವಿರೋಧ ವ್ಯಕ್ತಪಡಿಸಿ ’ನಾನು ಬರಲು ಸಾಧ್ಯವಿಲ್ಲ’ ಎಂದೇ. ಅವರು ಅದೇ ರೀತಿ ಪ್ರತಿಕ್ರಿಯಿಸುತ್ತ ’ಒಂದು ದಿನ ನಿನ್ನನ್ನು ನನ್ನ ಖಾಸಗಿ ಕೋಣೆಗೆ ಬರುವಂತೆ ಮಾಡುವೆ’ ಎಂದರು. ನಾನು ದುಃಖಿತಳಾದೆ, ನಾನು ಸಹಕರಿಸದ್ದನ್ನು ಕಂಡುಅವರು, ’ಹುಷಾರ್, ನೀನು ಯಾರೊಂದಿಗಾದರೂ ಹೇಳಿದರೆ, ನಿನ್ನ ವೃತ್ತಿ ಜೀವನವನ್ನೇ ಹಾಳುಗೆಡವುತ್ತೇನೆ. ನಿನ್ನ ಬದುಕನ್ನೇ ಬರ್ಬಾದು ಮಾಡಿಬಿಡುತ್ತೇನೆ’ ಎಂದು ಎಚ್ಚರಿಕೆ ನೀಡಿದರು.
* ನನ್ನ ಸ್ನೇಹಿತೆ ಯಶಸ್ವಿನಿಗೆ ಈ ಎಲ್ಲ ಘಟನೆಗಳನ್ನು ವಿವರಿಸಿ, ಅರ್ಜುನ್ ಸರ್ಜಾ ರಂತಹ ವ್ಯಕ್ತಿಯೊಂದಿಗೆ ಕಾರ್ಯನಿರ್ವಹಿಸುವುದು ಸಾಧ್ಯವಿಲ್ಲ ಎಂದು ನನ್ನ ಭಾವನೆಗಳನ್ನು ಹಂಚಿಕೊಂಡೆ. ರಿಹರ್ಸಲ್ ಮತ್ತು ಪ್ರಣಯ ದೃಶ್ಯಗಳ ಅವಕಾಶ ಪಡೆದು ನನ್ನೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಿರುವುದನ್ನು ಹೇಳಿಕೊಂಡೆ. ಆದರೆ, ಚಿತ್ರರಂಗದಲ್ಲಿ ಪ್ರಖ್ಯಾತರಾಗಿರುವ ಅರ್ಜುನ್ ಸರ್ಜಾ ವಿರುದ್ಧ ಪೊಲೀಸರಿಗೆ ಅಥವಾ ಕ್ರಮವಹಿಸುವ ಸಂಸ್ಥೆಗೆ ವರದಿ ನೀಡಿದರೂ, ಅದರಿಂದ ನನಗೇ ತೊಂದರೆ ಹೆಚ್ಚು. ವೃತ್ತಿ ಜೀವನಕ್ಕೆ ಹೊಡೆತ ಬೀಳುವ ಸಾಧ್ಯತೆ ಇರುತ್ತದೆ. ನಿನ್ನ ಘನತೆಗೂ ಚುತಿ ಬರುತ್ತದೆ ಎಂದು ಕಾಳಜಿ ವ್ಯಕ್ತಪಡಿಸಿದಳು. ನನಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗದೆ ನಿದ್ರೆ ಇರದ ಸಾಕಷ್ಟು ದಿನಗಳನ್ನು ಕಳೆದೆ. ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಬಲಿಷ್ಠನಾಗಿರುವ ವ್ಯಕ್ತಿಯ ವಿರುದ್ಧ ಹೋರಾಡುವ ದಾರಿ ಕಾಣದೆ ಅಸಹಾಯಕಳಾದೆ.
* ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಯೋಚನೆ ಬರುತ್ತಿತ್ತು. ನನ್ನ ಆಪ್ತರೊಂದಿಗೂ ಈ ಬಗ್ಗೆ ಅನೇಕ ಬಾರಿ ಚರ್ಚಿಸಿದ್ದೇನೆ. ಆದರೆ, ಬೆಳೆಯುತ್ತಿರುವ ನಟಿಯಾಗಿ ವೃತ್ತಿ ಜೀವನಕ್ಕೆ ಗಂಡಾಂತರ ಒದಗಬಹುದು, ಜೀವಕ್ಕೆ ಎರವಾಗಬಹುದು. ಹಾಗಾಗಿ, ಯಾವುದೇ ಕ್ರಮಕ್ಕೆ ಮುಂದಾಗುವುದು ಬೇಡ ಎಂದು ಆಪ್ತರು ಸಲಹೆ ನೀಡಿದ್ದರು.
* ಜೀವಕ್ಕೆ ಕುತ್ತಾಗಬಹುದೆಂದು ಇಷ್ಟು ದಿನಗಳವರೆಗೂ ಎಲ್ಲವನ್ನೂ ಮೌನವಾಗಿ ಸಹಿಕೊಂಡೆ. ಎಲ್ಲೆಡೆ #ಮೀಟೂ ಅಭಿಯಾನ ಕಾವೇರತೊಡಗಿತು; ಪತ್ರಕರ್ತರು, ಕಲಾವಿದರು, ಅಧಿಕಾರಿ ಸ್ಥಾನದಲ್ಲಿರುವ ಮಹಿಳೆಯರು ತಮ್ಮ ಸಹ ಸಿಬ್ಬಂದಿ, ಸಹ ಕಲಾವಿದರು ಹಾಗೂ ಉನ್ನತ ಸ್ಥಾನದಲ್ಲಿರುವವರಿಂದ ಅನುಭವಿಸಿರುವ ನೋವು, ಕಷ್ಟಗಳು, ದೌರ್ಜನ್ಯ ಬಹಿರಂಗ ಪಡಿಸಿದರು. ಮುಂಬೈನಲ್ಲಿಯೂ ಮೀಟೂ ಅಭಿಯಾನ ಜೋರಾಯಿತು, ಸೆಲೆಬ್ರಿಟಿಗಳು ತಾವು ಎದುರಿಸಿದ ಲೈಂಕಿಗ ದೌರ್ಜನ್ಯದ ಘಟನೆಗಳನ್ನು ಬಿಡಿಸಿಟ್ಟರು. ಈ ಬೆಳವಣಿಗೆಗಳು ನನ್ನಲ್ಲಿ ಧೈರ್ಯ ನೀಡಿತು. 2 ವರ್ಷಗಳ ನಂತರ ಅರ್ಜುನ್ ಸರ್ಜಾ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾದೆ. ಅದಕ್ಕಾಗಿ ಜನರ ಅಭಿಪ್ರಾಯ ಪಡೆಯುವುದಕ್ಕಾಗಿ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡೆ.
ಐಪಿಸಿ ಸೆಕ್ಷನ್‌ಗಳ ಬಗೆಗೆ ತಿಳಿದುಕೊಂಡು, ಅರ್ಜುನ್ ಸರ್ಜಾ ಅವರು ಸೆಕ್ಷನ್ 354, 354ಎ ಹಾಗೂ 509ರ ಅಡಿಯಲ್ಲಿ ಅಪರಾಧ ಮಾಡಿರುವುದನ್ನು ಕಂಡುಕೊಂಡೆ. ಠಾಣಾಧಿಕಾರಿಗಳು ಈ ಬಗ್ಗೆ ದೂರು ದಾಖಲಿಸಿಕೊಂಡು, ಎಫ್‌ಐಆರ್ ನೀಡಬೇಕೆಂದು ಮನವಿ ಮಾಡುತ್ತೇನೆ.
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.